ಮಧುಗಿರಿ: ಮಧುಗಿರಿ ಏಕಶಿಲಾ ಬೆಟ್ಟದಲ್ಲಿ 2025 ರ ಜುಲೈ 20 ರಂದು ಕೇಬಲ್ ಕಾರ್ ಶುಭಾರಂಭ ಮಾಡುವ ವಿಶ್ವಾಸವಿದೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿಳಿಸಿದರು.
ತಾಲೂಕಿನ ಐ.ಡಿ.ಹಳ್ಳಿ ಹೋಬಳಿ ದೊಡ್ಡದಾಳವಟ್ಟ ಗ್ರಾಮದ ಶ್ರೀಲಕ್ಷ್ಮೀ ನರಸಿಂಹ ದೇವಸ್ಥಾನದ ಸಮೀಪ ಬುಧವಾರ ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಂಡಿದ್ದ ಜನಸ್ಪಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಇತ್ತೀಚೆಗೆ ನಡೆದ ಜಿಲ್ಲಾಧಿಕಾರಿಗಳ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯನವರೇ ಆಸಕ್ತಿ ವಹಿಸಿ ತುಮಕೂರು ಜಿಲ್ಲಾಧಿಕಾರಿಗಳ ಬಳಿ ಕೇಬಲ್ ಕಾರ್ ಯೋಜನೆಯ ಬಗ್ಗೆ ಮಾಹಿತಿ ಕೇಳಿದ್ದು, ಆದಷ್ಟು ಬೇಗ ಪ್ರಕ್ರಿಯೆ ಮುಗಿಸುವಂತೆ ಸೂಚನೆ ನೀಡಿದ್ದಾರೆ, ಆದಷ್ಟು ಬೇಗ ಕಾಮಗಾರಿಗೆ ಚಾಲನೆ ನೀಡುವ ಮೂಲಕ 2025 ಜುಲೈ ವೇಳೆಗೆ ಕಾಮಗಾರಿ ಪೂರ್ಣಗೊಳಿಸಲು ಯೋಜನೆ ಹಮ್ಮಿಕೊಳ್ಳಲಾಗಿದೆ, ಮುಂದಿನ 2 ವರ್ಷದೊಳಗೆ ಎತ್ತಿನ ಹೊಳೆ ಯೋಜನೆಯ ಮೂಲಕ ತಾಲೂಕಿನ ಎಲ್ಲಾ ಕೆರೆಗಳಿಗೂ ನೀರು ಹರಿಸಲಾಗುವುದು, 3 ವರ್ಷದೊಳಗೆ ಮಧುಗಿರಿಯನ್ನು ಜಿಲ್ಲೆಯನ್ನಾಗಿ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಸರ್ಕಾರವೇ ನಿಮ್ಮ ಮನೆ ಬಾಗಿಲಿಗೆ ಬಂದು ಜನತೆಯ ಸಮಸ್ಯೆ ಬಗೆಹರಿಸಬೇಕು ಎಂಬ ಉದ್ದೇಶದಿಂದ ಜನಸ್ಪಂದನಾ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ, ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷವಾಗಿದ್ದು, ಚುನಾವಣಾ ಪೂರ್ವದಲ್ಲಿ ನೀಡಿದ ಎಲ್ಲಾ ಯೋಜನೆಗಳನ್ನು ಜಾರಿಗೊಳಿಸಲಾಗಿದೆ, ಅನ್ನ ಭಾಗ್ಯ ನನಗೆ ಅಚ್ಚು ಮೆಚ್ಚಿನ ಯೋಜನೆ, ಈ ಹಿಂದೆ ಹಳ್ಳಿಗಾಡಿನ ಭೂ ರಹಿತರಿಗೆ ಅನ್ನದ ಬೆಲೆ ಗೊತ್ತಿತ್ತು, ಈಗ ಎಲ್ಲರೂ ನೆಮ್ಮದಿಯಿಂದ ಜೀವನ ನಡೆಸಲು ಅನ್ನಭಾಗ್ಯ ಕಾರಣ, ಈ ಹಿಂದೆ ಯಾವುದೇ ಮುಖ್ಯಂಮತ್ರಿಗಳು ಈ ಯೋಜನೆ ರೂಪಿಸಿರಲಿಲ್ಲ ಎಂದರು.
ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ಮಾತನಾಡಿ, ಜನತೆಗೆ ಆಡಳಿತದ ಮೇಲೆ ವಿಶ್ವಾಸ ಬರುವಂತೆ ಮಾಡುವುದೇ ಜನಸ್ಪಂದನಾ ಕಾರ್ಯಕ್ರಮದ ಉದ್ದೇಶ, ಸಿಎಂ ಸಿದ್ದರಾಮಯ್ಯನವರ ಸೂಚನೆಯಂತೆ ಜನಸ್ಪಂದನಾ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಅಧಿಕಾರಿಗಳು ಜನರ ಮನೆ ಬಾಗಿಲಿಗೆ ಹೋಗಿ ಕೆಲಸ ಮಾಡಬೇಕು, ಮನೆ, ಆರೋಗ್ಯ ತಪಾಸಣೆ, ಶಿಕ್ಷಣ, ರೈತ ಸಮುದಾಯಕ್ಕೆ ಬಿತ್ತನೆ ಬೀಜ, ಗೊಬ್ಬರ ಸೇರಿದಂತೆ ಅನೇಕ ಸಮಸ್ಯೆಗಳಿಗೆ ಸರ್ಕಾರ, ಅಧಿಕಾರಿಗಳು, ಜನಪ್ರತಿನಿಧಿಗಳ ಮೂಲಕ ಸ್ಪಂದಿಸಬೇಕು ಎಂಬುದು ಕಾರ್ಯಕ್ರಮದ ಉದ್ದೇಶ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಎಸ್ಪಿ ಕೆ.ವಿ.ಅಶೋಕ್, ಉಪವಿಭಾಗಾಧಿಕಾರಿ ಗೂಟುರು ಶಿವಪ್ಪ, ತಹಶೀಲ್ದಾರ್ ಸಿಬ್ಗತ್ ಉಲ್ಲಾ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ನರಸಿಂಹಮೂರ್ತಿ, ತಾಪಂ ಕಾರ್ಯ ನಿರ್ವಹಣಾಧಿಕಾರಿ ಲಕ್ಷ್ಮಣ್, ಡಿವೈಎಸ್ಪಿ ರಾಮಚಂದ್ರಪ್ಪ, ವೃತ್ತ ನಿರೀಕ್ಷಕ ಹನುಮಂತರಾಯಪ್ಪ, ಚಿಕ್ಕದಾಳವಟ್ಟ ಗ್ರಾಪಂ ಅಧ್ಯಕ್ಷೆ ಲಲಿತಮ್ಮ, ಉಪಾಧ್ಯಕ್ಷೆ ಆಶಾರಾಣಿ ಇತರರು ಇದ್ದರು.
Comments are closed.