ಶಿಕ್ಷಣದ ಜೊತೆ ಕೌಶಲ್ಯ ಕಲಿಯುವುದು ಅನಿವಾರ್ಯ: ಖರ್ಗೆ

ಯುವ ಉದ್ಯೋಗಾಕಾಂಕ್ಷಿಗಳಿಗೆ ಕೌಶಲ್ಯ ತರಬೇತಿ ಕೇಂದ್ರ ತೆರೆಯುವ ಚಿಂತನೆ

22

Get real time updates directly on you device, subscribe now.


ತುಮಕೂರು: ಜಿಲ್ಲೆಯಲ್ಲಿ ವಿವಿಧ ಪದವಿ ಹೊಂದಿದವರ ಕೌಶಲ್ಯವನ್ನು ಹೆಚ್ಚಿಸಲು ನಗರ ಕೇಂದ್ರ ಗ್ರಂಥಾಲಯದ ಮೂರನೇ ಮಹಡಿಯಲ್ಲಿ ಕೌಶಲ್ಯ ತರಬೇತಿ ಕೇಂದ್ರ ತೆರೆಯುವ ಚಿಂತನೆ ಹಿನ್ನೆಲೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಅವರು ಬುಧವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ನಗರ ಕೇಂದ್ರ ಗ್ರಂಥಾಲಯದಲ್ಲಿ ಸ್ಥಳ ಪರಿಶೀಲನೆ ನಡೆಸಿ ಮಾತನಾಡಿದ ಸಚಿವರು, ವಿದ್ಯಾರ್ಥಿಗಳು ಉದ್ಯೋಗ ಪಡೆಯುವ ನಿಟ್ಟಿನಲ್ಲಿ ಶಿಕ್ಷಣದ ಜೊತೆಗೆ ಕೌಶಲ್ಯ ಕಲಿಯುವುದು ಅನಿವಾರ್ಯವಾಗಿದೆ, ಜಿಲ್ಲೆಯಲ್ಲಿರುವ ಮೆಡಿಕಲ್ ಕಾಲೇಜು ಹಾಗೂ ಇಂಜಿನಿಯರ್ ಕಾಲೇಜುಗಳಿಂದ ಉತ್ತೀರ್ಣರಾಗಿ ಹೊರಬರುವ ವಿದ್ಯಾರ್ಥಿಗಳಿಗೆ ಉದ್ಯಮಶೀಲತಾ ಅಭಿವೃದ್ಧಿ ತರಬೇತಿ ನೀಡಿ ಅವರ ಕೌಶಲ್ಯ ಅಭಿವೃದ್ಧಿ ಪಡಿಸಿ ಉದ್ಯೋಗ ಪಡೆಯಲು ಅನುವು ಮಾಡಿಕೊಡಬೇಕೆಂಬ ಸದುದ್ದೇಶದಿಂದ ಕೌಶಲ್ಯ ತರಬೇತಿ ಕೇಂದ್ರ ತೆರೆಯಲು ಸರ್ಕಾರ ಉದ್ದೇಶಿಸಿದೆ ಎಂದು ತಿಳಿಸಿದರು.

ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವರು ಸ್ಮಾರ್ಟ್ ಸಿಟಿ ಯೋಜನೆಯಡಿ ಕೇಂದ್ರ ಗ್ರಂಥಾಲಯದ 3ನೇ ಮಹಡಿಯಲ್ಲಿ ಸುಮಾರು 11,000 ಚದರ ಅಡಿ ವಿಸ್ತೀರ್ಣದ ಸುಸಜ್ಜಿತ ಕಟ್ಟಡದಲ್ಲಿ ಯುವ ಉದ್ಯೋಗಾಕಾಂಕ್ಷಿ ಗಳಿಗಾಗಿ ಕೌಶಲ್ಯ ತರಬೇತಿ ಕೇಂದ್ರ ತೆರೆಯುವ ಬಗ್ಗೆ ಸ್ಥಳೀಯ ಶೈಕ್ಷಣಿಕ ಸಂಸ್ಥೆಗಳು, ಕೈಗಾರಿಕೆಗಳೊಂದಿಗೆ ಚರ್ಚಿಸಿದ ನಂತರ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದೆಂದರು.
ಕೌಶಲ್ಯ ತರಬೇತಿ ಕೇಂದ್ರದಲ್ಲಿ ಪ್ರಮುಖವಾಗಿ ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನದಲ್ಲಿ ಕೌಶಲ್ಯ ಹೆಚ್ಚಿಸುವ, ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವವರಿಗೆ ತರಬೇತಿ ನೀಡಲು ಉದ್ದೇಶಿಸಲಾಗಿದೆಯಲ್ಲದೆ 10ನೇ ತರಗತಿ, ಪಿಯುಸಿ,ಐಟಿಐ ಅನುತ್ತೀರ್ಣರಾದವರಿಗೂ ತರಬೇತಿ ನೀಡಲು ಯೋಜಿಸಲಾಗಿದೆ, ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ಹೆಚ್ಚಿಸಲು ಈ ಕೇಂದ್ರ ಸಹಕಾರಿಯಾಗಲಿದೆ ಎಂದು ತಿಳಿಸಿದರು.

ತರಬೇತಿ ಕೇಂದ್ರ ತೆರೆಯುವುದು ಹೇಳಿಕೆಯಾಗಿಯೇ ಉಳಿಯಬಾರದು, ಕಾರ್ಯರೂಪಕ್ಕೆ ತರಬೇಕೆಂಬ ಹಿನ್ನೆಲೆಯಲ್ಲಿ ಗೃಹ ಸಚಿವರ ಸಲಹೆ ಮೇರೆಗೆ ಈ ಭೇಟಿ ನೀಡಿದ್ದೇನೆ ಎಂದರಲ್ಲದೆ ಗ್ರಾಮೀಣ ಪ್ರದೇಶಗಳಲ್ಲಿ ಶುದ್ಧ ನೀರಿನ ಘಟಕ ಕೆಟ್ಟು ನಿಂತಿವೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಶುದ್ಧ ನೀರಿನ ಘಟಕದ ನಿರ್ವಹಣೆಯನ್ನು ಗ್ರಾಮ ಪಂಚಾಯತಿಗಳಿಗೆ ಹಸ್ತಾಂತರಿಸಲಾಗಿದ್ದು, ಇನ್ನು ಮುಂದೆ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ, ಗ್ರಾಮೀಣ ಪ್ರದೇಶದ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸುವ ನಿಟ್ಟಿನಲ್ಲಿ ಎಲ್ಲಾ ಶುದ್ಧ ನೀರಿನ ಘಟಕಗಳನ್ನು ಸುಸ್ಥಿತಿಯಲ್ಲಿಡಲು ಈಗಾಗಲೇ ನೀಲನಕ್ಷೆ ಸಿದ್ಧಪಡಿಸಲಾಗಿದ್ದು, ಮುಂದಿನ ಐದಾರು ತಿಂಗಳೊಳಗಾಗಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

ಈ ಸಂದರ್ಭದಲ್ಲಿ ಶಾಸಕ ಜ್ಯೋತಿಗಣೇಶ್, ವಿದ್ಯುನ್ಮಾನ ಮಾಹಿತಿ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ವ್ಯವಸ್ಥಾಪಕ ನಿರ್ದೇಶಕ ದರ್ಶನ್, ಮಹಾ ನಗರ ಪಾಲಿಕೆ ಆಯುಕ್ತರಾದ ಬಿ.ವಿ.ಆಶ್ವಿಜ, ಜಿಲ್ಲಾ ಪಂಚಾಯತ್ ಸಿಇಒ ಜಿ.ಪ್ರಭು, ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ವಿಭಾಗದ ಕಾರ್ಯ ನಿರ್ವಾಹಕ ಇಂಜಿನಿಯರ್ ರವೀಶ್, ಗ್ರಂಥಾಲಯ ಇಲಾಖೆ ಉಪ ನಿರ್ದೇಶಕ ಸರೋಜಮ್ಮ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!