ತುಮಕೂರು: ಮುಡಾದಲ್ಲಿ ನಡೆದಿರುವ ಹಗರಣವನ್ನು ಸಿಬಿಐ ತನಿಖೆಗೆ ವಹಿಸಿಬೇಕು, ಈ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ನೇರ ಭಾಗಿಯಾಗಿರುವ ಸಾಧ್ಯತೆಗಳಿದ್ದು, ಸಿದ್ದರಾಮಯ್ಯ ಅವರು ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನಿಡಬೇಕು ಎಂದು ಗ್ರಾಮಾಂತರ ಶಾಸಕ ಬಿ.ಸುರೇಶ್ ಗೌಡ ಒತ್ತಾಯಿಸಿದರು.
ಗುರುವಾರ ನಗರದ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮುಡಾ ಹಗರಣದ ಹಿಂದೆ ದೊಡ್ಡ ಜಾಲವಿದೆ. ಎಲ್ಲರೂ ಗ್ಯಾಂಗ್ ಮಾಡಿಕೊಂಡು ಹಗರಣ ಮಾಡಿದ್ದಾರೆ, ರಾಜ್ಯ ಪೊಲೀಸರು ಈ ಹಗರಣ ಮುಚ್ಚಿ ಹಾಕಲಿದ್ದಾರೆ, ಏಕೆಂದರೆ ಮುಖ್ಯಮಂತ್ರಿ ವಿರುದ್ಧವೇ ತನಿಖೆ ಮಾಡಿ ಅವರನ್ನು ಆರೋಪಿ ಮಾಡುವಂಥಾ ಸಾಹಸವನ್ನು ರಾಜ್ಯ ಪೊಲೀಸರು ಮಾಡಲು ಸಾಧ್ಯವಿಲ್ಲ, ಹೀಗಾಗಿ ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿದರು.
ಒಂದೊಂದು ನಿವೇಶನದ ಬೆಲೆ 2 ಕೊಟಿ ರೂಪಾಯಿಗೂ ಮೀರುತ್ತದೆ, ಆದಾಗ್ಯೂ 65 ಕೋಟಿ ರೂಪಾಯಿಗಳ ನಿವೇಶನ ಬೇಕು ಎಂದು ಸಮಾಜವಾದಿಯಾದ ಸಿದ್ದರಾಮಯ್ಯ ಕೇಳುತ್ತಿದ್ದಾರೆ, ಇದು ಹಗಲು ದರೋಡೆಯಲ್ಲವೆ? ಈ ಆಸ್ತಿಯ ವಿಚಾರವಾಗಿ ಮುಖ್ಯಮಂತ್ರಿಗಳು 2013ರಲ್ಲಿ ಚುನಾವಣೆಗೆ ಸ್ಪರ್ಧಿಸಿದಾಗ ತಮ್ಮ ಆಸ್ತಿ ದಾಖಲಾತಿಯಲ್ಲಿ ಉಲ್ಲೇಖಿಸಿಲ್ಲ, ಈ ವಿಚಾರವಾಗಿ ಚುನಾವಣಾ ಆಯೋಗದ ಗಮನಕ್ಕೆ ತರಲು ರಾಜ್ಯ ಬಿಜೆಪಿ ಆಲೋಚನೆ ಮಾಡುತ್ತಿದೆ ಎಂದು ಸುರೇಶ್ ಗೌಡ ಮಾಹಿತಿ ನೀಡಿದರು.
ಶಾಸಕ ಜಿ.ಬಿ.ಜ್ಯೋತಿಗಣೇಶ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್.ರವಿಶಂಕರ್ ಹೆಬ್ಬಾಕ, ರಾಜ್ಯ ರೈತ ಮೋರ್ಚಾ ಮಾಜಿ ಪ್ರಧಾನ ಕಾರ್ಯದರ್ಶಿ ಎಸ್.ಶಿವಪ್ರಸಾದ್, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಸಂದೀಪ್ ಗೌಡ, ಹಾಲೇಗೌಡ, ಜಿಲ್ಲಾ ವಕ್ತಾರ ಟಿ.ಆರ್.ಸದಾಶಿವಯ್ಯ, ಮಾಧ್ಯಮ ಪ್ರಮುಖ್ ಜೆ.ಜಗದೀಶ್, ಕಾರ್ಯಾಲಯ ಕಾರ್ಯದರ್ಶಿ ಗಣೇಶ್ ಪ್ರಸಾದ್, ಜಿ.ಎಸ್.ನಂದಿನಾಥ್ ಹಾಜರಿದ್ದರು.
Comments are closed.