ಕಸಾಪ ಅಧ್ಯಕ್ಷ ಸ್ಥಾನಕ್ಕೆ ಲೇಖಕಿ ಡಾ.ಸರಸ್ವತಿ ಚಿಮ್ಮಲಗಿ ಸ್ಪರ್ಧೆ

188

Get real time updates directly on you device, subscribe now.

ತುಮಕೂರು: ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಮಹಿಳೆಯೊಬ್ಬರು ಬರಬೇಕೆಂಬುದು ಕನ್ನಡಿಗರ ಬಹುದಿನದ ಆಸೆಯಾಗಿದ್ದು, ಸಾಹಿತ್ಯಾಸಕ್ತರು, ಮಹಿಳಾ ಸಾಹಿತ್ಯಗಳ ಒತ್ತಾಸೆಯ ಮೇರೆಗೆ ಮೇ.09 ರಂದು ನಡೆಯುವ ಕಸಾಪ ಚುನಾವಣೆಯಲ್ಲಿ ಕೇಂದ್ರ ಸಮಿತಿ ಅಧ್ಯಕ್ಷಸ್ಥಾನಕ್ಕೆ ಸ್ಪರ್ಧಿಸಿರುವುದಾಗಿ ನಿವೃತ್ತ ಪ್ರಾಧ್ಯಪಕಿ ಹಾಗೂ ಲೇಖಕಿ ಡಾ.ಸರಸ್ವತಿ ಚಿಮ್ಮಲಗಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಸಾಪ ಸೇರಿದಂತೆ ಎಲ್ಲಾ ರಂಗದಲ್ಲಿಯೂ ಮಹಿಳೆಯರನ್ನು ಎರಡನೇ ದರ್ಜೆಯ ಪ್ರಜೆಯಾಗಿಯೇ ನೋಡಲಾಗುತ್ತಿದೆ. ಸಂವಿಧಾನದ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಎಲ್ಲರಿಗೂ ಸಮಪಾಲು, ಎಲ್ಲರಿಗೂ ಸಮಬಾಳು ಎಂಬ ಸಂದೇಶವನ್ನು ನೀಡಿದ್ದರೂ ಅದು ಕಸಾಪದಲ್ಲಿ ಇನ್ನೂ ಪುಸ್ತಕದಲ್ಲಿಯೇ ಉಳಿದಿದೆ.105 ವರ್ಷಗಳ ಇತಿಹಾಸವಿರುವ ಕಸಾಪಗೆ ಇದುವರೆಗೂ ಒರ್ವ ಮಹಿಳೆ ಅಧ್ಯಕ್ಷೆಯಾಗದಿರುವುದು ಪ್ರಜಾಪ್ರಭುತ್ವಕ್ಕೆ ಕಪ್ಪು ಚುಕ್ಕೆ ಎಂದು ನಾನು ಭಾವಿಸುತ್ತೇನೆ. ಸಮಸ್ತ ಮಹಿಳಾ ವರ್ಗದ ಪರವಾಗಿ ಕಣಕ್ಕೆ ಇಳಿದಿರುವ ನನಗೆ ಎಲ್ಲಾ ಮಹಿಳೆಯರು ಹಾಗೂ ಪುರುಷರು ಮತ ನೀಡುವ ಮೂಲಕ ಕನ್ನಡಿನಾಡಿನ ಮಹಿಳೆಯರು ಕನಸು ನನಸಾಗಲು ಸಹಕರಿಸುವಂತೆ ಕೋರಿದರು.
ಅಣ್ಣ ಬಸವಣ್ಣ 12ನೇ ಶತಮಾನದಲ್ಲಿಯೇ ತನ್ನ ಅನುಭವ ಮಂಟಪದಲ್ಲಿ ಮಹಿಳೆಯರಿಗೆ ಸ್ಥಾನಮಾನ ಕಲ್ಪಿಸುವ ಮೂಲಕ ಮಹಿಳೆಯರನ್ನು ಪುರುಷರಿಗೆ ಸಮಾನವಾಗಿ ಕಂಡಿದ್ದರು. ಹಾಗೆಯೇ ನಾಲ್ವಡಿ ಕೃಷ್ಣರಾಜ ಒಡೆಯರ್ ಸಹ ಮಹಿಳೆಯರಿಗೆ ಉದ್ಯೋಗದಲ್ಲಿ ಅವಕಾಶ ಕಲ್ಪಿಸುವ ಮೂಲಕ ಮಹಿಳೆಯರು ಆಡಳಿತದಲ್ಲಿ ಪಾಲ್ಗೊಳ್ಳುವಂತೆ ಮಾಡಿದ್ದರು. ಈ ಪರಂಪರೆಯನ್ನು ಮುಂದುವರೆಸುವ ನಿಟ್ಟಿನಲ್ಲಿ ಕಸಾಪಗೆ ಈ ಬಾರಿ ಮಹಿಳೆಯೊಬ್ಬರು ಅಧ್ಯಕ್ಷರಾಗಬೇಕೆಂಬುದು ಹಲವಾರು ಹಿರಿಯ, ಕಿರಿಯ ಉದಯೋನ್ಮುಖ ಸಾಹಿತಿಗಳ ಆಶಯವಾಗಿದೆ. ಇವರೆಲ್ಲರ ಪ್ರತಿನಿಧಿಯಾಗಿ ನಾನು ಕಸಾಪ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದೇನೆ. ನನಗೆ ಎಲ್ಲರೂ ಬೆಂಬಲ ನೀಡಲಿದ್ದಾರೆ ಎಂಬ ವಿಶ್ವಾಸವಿದೆ ಎಂದು ಡಾ.ಸರಸ್ವತಿ ತಿಳಿಸಿದರು.
ಕಳೆದ 105 ವರ್ಷಗಳಲ್ಲಿ ಸುಮಾರು 25ಕ್ಕೂ ಹೆಚ್ಚು ಜನ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರೂ ಮಹಿಳೆ ಯರಿಗೆ ಪರಿಷತ್ತಿನ ಪದಾಧಿಕಾರಿಗಳಲ್ಲಿ ಸ್ಥಾನಮಾನ ದೊರೆತಿರುವುದು ಅತಿಕಡಿಮೆ. ಈ ಹಿನ್ನೆಲೆಯಲ್ಲಿ ನೋಡುವು ದಾದರೆ ನಾನು ಅಧ್ಯಕ್ಷೆಯಾಗಿ ಆಯ್ಕೆಯಾದರೆ ಪರಿಷತ್ತಿನ ಎರಡು ಗೌರವ ಕಾರ್ಯದರ್ಶಿ ಹುದ್ದೆಗಳಲ್ಲಿ ಒಂದನ್ನು ಮಹಿಳೆಯರಿಗೆ ಮೀಸಲಿಡುವುದಲ್ಲದೆ, ಮಹಿಳೆಯರಿಗೆ ಹೆಚ್ಚಿನ ಅದ್ಯತೆ ನೀಡಬೇಕೆಂಬುದು ನನ್ನ ಆಶಯವಾಗಿದೆ, ಸ್ತ್ರೀ ಎಂಬುದು ಒಂದು ಶಕ್ತಿ ಮತ್ತು ಸಂಸ್ಕೃತಿಯ ಪ್ರತೀಕ. ಇದನ್ನು ಎಲ್ಲರೂ ಗೌರವಿಸುತ್ತಾರೆ ಎಂಬ ನಂಬಿಕೆ ನಮ್ಮದು. ನನಗೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಅಪಾರ ಬೆಂಬಲ ವ್ಯಕ್ತವಾಗಿದ್ದು, ಗೆಲ್ಲುವ ವಿಶ್ವಾಸವಿದೆ ಎಂದು ಡಾ.ಸರಸ್ವತಿ ನುಡಿದರು.
ಸುದ್ದಿಗೋಷ್ಠಿಯಲ್ಲಿ ಅಖಿಲ ಭಾರತ ಮಹಿಳಾ ಸಾಹಿತಿಗಳ ವೇದಿಕೆಯ ಪದಾಧಿಕಾರಿಗಳಾದ ಮಂಜುಳಾದೇವಿ, ಕಲ್ಪನಾ ಮೋಹನ್,ಶೋಭಾ, ಕಮಲಮ್ಮ, ಅಂಬಿಕಾ ಮೋಹನ್, ನಾಗಲಾಂಬಿಕೆ, ಕಮಲ ಕಾಂತರಾಜು ಮತ್ತಿತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!