ಜನಸಂಖ್ಯೆ ಹೆಚ್ಚಳ ದೇಶದ ಪ್ರಗತಿಗೆ ಮಾರಕ: ಡಿ ಹೆಚ್ ಒ

33

Get real time updates directly on you device, subscribe now.


ತುಮಕೂರು: ಜನಸಂಖ್ಯೆ ಹೆಚ್ಚಳದಿಂದ ದೇಶದ ಆರ್ಥಿಕ, ಸಾಮಾಜಿಕ ಪ್ರಗತಿಗೆ ಮಾರಕ ಉಂಟಾಗುತ್ತದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಡಿ.ಎನ್. ಮಂಜುನಾಥ್ ಅಭಿಪ್ರಾಯಪಟ್ಟರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ನಗರದ ಎಂಪ್ರೆಸ್ ಬಾಲಕಿಯರ ಪ್ರೌಢಶಾಲೆ ಆಡಿಟೋರಿಯಂನಲ್ಲಿ ಆಯೋಜಿಸಿದ್ದ ವಿಶ್ವ ಜನಸಂಖ್ಯಾ ದಿನ 2024 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ದಿನೇ ದಿನೇ ಹೆಚ್ಚಾಗುತ್ತಿರುವ ಜನಸಂಖ್ಯೆಯಿಂದ ಜನರಿಗೆ ಅಗತ್ಯವಿರುವ ವಸತಿ, ಆರೋಗ್ಯ, ಶಿಕ್ಷಣ, ಉದ್ಯೋಗ ಒದಗಿಸಲು ಸಂಪನ್ಮೂಲಗಳ ಕೊರತೆ ಉಂಟಾಗುತ್ತದೆ ಎಂದು ತಿಳಿಸಿದರು.

ವೈದ್ಯ ವಿಜ್ಞಾನ ಬೆಳೆದಂತೆ ಆರೋಗ್ಯ ಸ್ಥಿತಿ ಉತ್ತಮಗೊಂಡು ಮನುಷ್ಯನ ಅಕಾಲ ಮರಣ ನಿವಾರಿಸಿಕೊಂಡಿರುವುದರಿಂದ ಮರಣ ಸಂಖ್ಯೆ ಪ್ರಮಾಣ ಕಡಿಮೆಯಾಗಿದೆ, ಜನಸಂಖ್ಯೆ ಹೆಚ್ಚಿದಂತೆ ಬಡತನ, ನಿರುದ್ಯೋಗ, ಅನಕ್ಷರತೆ, ಅಪರಾಧ, ವೇಶ್ಯಾವೃತ್ತಿ, ಭ್ರಷ್ಟಾಚಾರದಂತಹ ಜ್ವಲಂತ ಸಮಸ್ಯೆ ಎದುರಾಗುತ್ತದೆ, ಈ ನಿಟ್ಟಿನಲ್ಲಿ ಜನಸಂಖ್ಯಾ ಏರಿಕೆ ನಿಯಂತ್ರಿಸಿ ಕುಟುಂಬ ನಿಯಂತ್ರಣ ಸಾಧನ ಅಳವಡಿಸಿಕೊಂಡು ಜನಸಂಖ್ಯೆ ಹೆಚ್ಚುವುದನ್ನು ನಿಯಂತ್ರಿಸಬೇಕೆಂದು ತಿಳಿಸಿದರು.
ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಬಿ.ರೇಖಾ ಮಾತನಾಡಿ, ವಿಶ್ವದ ಜನಸಂಖ್ಯೆ ಪ್ರಮಾಣ ಪ್ರಸ್ತುತ 8.1 ಬಿಲಿಯನ್ ತಲುಪಿದೆ, ಜನಸಂಖ್ಯೆ ಸ್ಥಿರತೆ ಕಾಪಾಡಿಕೊಳ್ಳುವುದು ನಮ್ಮ ಜವಾಬ್ದಾರಿ, ಗರ್ಭನಿರೋಧಕ ಬಳಕೆ, ಸಂತಾನಹರಣ ಶಸ್ತ್ರಚಿಕಿತ್ಸೆ ವಿಧಾನ ಅನುಸರಿಸುವುದರಿಂದ ಜನಸಂಖ್ಯೆ ಪ್ರಮಾಣ ನಿಯಂತ್ರಿಸಬಹುದು ಎಂದು ತಿಳಿಸಿದರು.

ರಾಜ್ಯದಲ್ಲಿ ಕುಟುಂಬ ಕಲ್ಯಾಣ ವಿಧಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ಜನಸಂಖ್ಯೆ ಸುಸ್ಥಿರತೆ ಸಾಧಿಸಿದೆಯಾದರೂ ಜನಸಂಖ್ಯೆ ಹೆಚ್ಚಳ ನಿಯಂತ್ರಣಕ್ಕೆ ಬಂದಿಲ್ಲ, ಎಲ್ಲಾ ವಿಷಯಗಳಲ್ಲಿ ಪಾಶ್ಚಾತ್ಯರನ್ನು ಅನುಕರಣೆ ಮಾಡುವ ನಾವು ಜನಸಂಖ್ಯೆ ನಿಯಂತ್ರಣದಲ್ಲಿ ಮಾತ್ರ ಅನಾಸಕ್ತಿ ತೋರುತ್ತಿದ್ದೇವೆ, ಈ ನಿಟ್ಟಿನಲ್ಲಿ ಕುಟುಂಬ ನಿಯಂತ್ರಣ ಸಾಧನಗಳನ್ನು ಅನುಸರಿಸಿ ಜನಸಂಖ್ಯೆ ಏರಿಕೆ ನಿಯಂತ್ರಿಸಿ ದೇಶದ ಜನಸಂಖ್ಯೆ ಸುಸ್ಥಿರತೆಗೆ ಕೈಜೋಡಿಸಬೇಕೆಂದು ತಿಳಿಸಿದರು.
ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಅಸ್ಗರ್ ಬೇಗ್ ಮಾತನಾಡಿ, ಒಂದು ದೇಶ ಆರ್ಥಿಕವಾಗಿ ಬೆಳೆಯಲು ಜನಸಂಖ್ಯೆ ಹತೋಟಿಯಲ್ಲಿ ಇಟ್ಟುಕೊಳ್ಳಬೇಕು, ಅತಿ ಹೆಚ್ಚು ಜನಸಂಖ್ಯೆಯಿಂದ ಮುಂದಿನ ಪೀಳಿಗೆಗೆ ನಿರುದ್ಯೋಗ, ನೀರು, ಆರೋಗ್ಯ, ಶಿಕ್ಷಣ ನೀಡಲು ತೊಂದರೆ ಉಂಟಾಗುತ್ತದೆ ಎಂದು ತಿಳಿಸಿದರು.
ಎಂಪ್ರೆಸ್ ಕಾಲೇಜು ಉಪನ್ಯಾಸಕ ಪಿ.ಜೆ.ಜಯಶೀಲ ಮಾತನಾಡಿ, ಮಕ್ಕಳಿಗೆ ಪಠ್ಯ ಕ್ರಮದ ಜೊತೆಗೆ ಇಂತಹ ಅರಿವು ಕಾರ್ಯಕ್ರಮಗಳ ಅಗತ್ಯತೆ ಮುಖ್ಯ ಎಂದು ಹೇಳಿದರು.

ಈ ಸಂದರ್ಭದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಲಕ್ಷ್ಮೀಕಾಂತ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ರಾಜಣ್ಣ ಮತ್ತು ರವಿಶಂಕರ್, ಎಂಪ್ರೆಸ್ ಕಾಲೇಜಿನ ಪ್ರಾಂಶುಪಾಲ ಕೆ.ಮಲ್ಲಯ್ಯ, ಕಾರ್ಯಕ್ರಮ ಅಧಿಕಾರಿಗಳು ಹಾಗೂ ಜಿಲ್ಲಾ ವೈದ್ಯಾಧಿಕಾರಿಗಳು ಹಾಗು ಸಿಬ್ಬಂದಿ ವರ್ಗ, ಆಶಾ ಕಾರ್ಯಕರ್ತೆಯರು, ಎಂಪ್ರೆಸ್ ಕಾಲೇಜಿನ ವಿದ್ಯಾರ್ಥಿನಿಯರು ಹಾಜರಿದ್ದರು.
ಇದಕ್ಕೂ ಮುನ್ನ ವಿಶ್ವ ಜನಸಂಖ್ಯಾ ದಿನಾಚರಣೆ- 2024ರ ಅಭಿಯಾನದಡಿ ಅಭಿವೃದ್ಧಿ ಹೊಂದಿದ ಭಾರತದ ಹೊಸ ಗುರುತಿಗಾಗಿ, ಕುಟುಂಬ ಯೋಜನೆ ಅಳವಡಿಕೆ ಪ್ರತಿ ದಂಪತಿ ಹೆಮ್ಮೆ ಎಂಬ ಘೋಷವಾಕ್ಯದೊಂದಿಗೆ ಜಿಲ್ಲಾ ಆಸ್ಪತ್ರೆ ಆವರಣದಿಂದ ಟೌನ್ ಹಾಲ್, ಅಶೋಕ ರಸ್ತೆ, ಚರ್ಚ್ ಸರ್ಕಲ್ ಮೂಲಕ ಎಂಪ್ರೆಸ್ ಕಾಲೇಜಿನವರೆಗೂ ಜಾಥಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು, ಜಾಥಾ ಕಾರ್ಯಕ್ರಮದಲ್ಲಿ ನರ್ಸಿಂಗ್ ವಿದ್ಯಾರ್ಥಿಗಳು ಚಿಕ್ಕ ಕುಟುಂಬ- ಸುಖಿ ಕುಟುಂಬ, ಜನಸಂಖ್ಯಾ ಸ್ಪೋಟವು ಹಸಿವಿಗೆ ಕಾರಣವಾಗುತ್ತದೆ, ಜನಸಂಖ್ಯಾ ನಿಯಂತ್ರಣ ಪ್ರತಿಯೊಬ್ಬರ ಜವಾಬ್ದಾರಿ, ಮನೆಗೊಂದು ಮಗು- ದೇಶಕ್ಕೆ ನಗು ಸೇರಿದಂತೆ ವಿವಿಧ ಘೋಷವಾಕ್ಯಗಳುಳ್ಳ ಫಲಕ ಪ್ರದರ್ಶಿಸಿದರು.

Get real time updates directly on you device, subscribe now.

Comments are closed.

error: Content is protected !!