ಕುಣಿಗಲ್: ತಾಲೂಕಿನ ಜೆಡಿಎಸ್ನವರು ಅಧಿಕಾರದಲ್ಲಿದ್ದಾಗ ನೀರಾವರಿ ಯೋಜನೆ ಬಗ್ಗೆ ಗಮನ ಹರಿಸುವುದಿಲ್ಲ, ಅಧಿಕಾರ ಇಲ್ಲದೆ ಇದ್ದಾಗ ನೀರಾವರಿ ಯೋಜನೆ ಬಗ್ಗೆ ಪ್ರತಿಭಟನೆ ಮಾಡುವ ನಾಟಕ ಮಾಡುತ್ತಾರೆ ಎಂದು ಕುಣಿಗಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಣ್ಣಗೌಡ ಹೇಳಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಾಲೂಕು ಜೆಡಿಎಸ್ ಅಧ್ಯಕ್ಷ ಜಗದೀಶ್ ಹೇಮಾವತಿ ಲಿಂಕ್ ಕೆನಾಲ್ ಬಗ್ಗೆ ಸುಳ್ಳು ಹೇಳುತ್ತಾ ಜನತೆ ದಾರಿ ತಪ್ಪಿಸುತ್ತಿದ್ದಾರೆ, ಕುಣಿಗಲ್ ತಾಲೂಕಿಗೆ ಹೇಮಾವತಿ ನೀರು ಸಮರ್ಪಕವಾಗಿ ಹರಿದು ಬರಲು ಲಿಂಕ್ ಕೆನಾಲ್ ಅತ್ಯಗತ್ಯ, ತಾಲೂಕಿನ ಪಾಲಿನ 3.03 ಟಿಎಂಸಿ ಜೊತೆ ಮಾಗಡಿಗೆ 630 ಎಂಸಿಎಫ್ಟಿ ಹೆಚ್ಚುವರಿ ಹಂಚಿಕೆಯಾಗಿದೆ, ಈ ಬಗ್ಗೆ ಮಾಹಿತಿ ಇಲ್ಲದೆ ಸುಳ್ಳು ಮಾಹಿತಿ ನೀಡೋದು ಖಂಡನೀಯ ಎಂದರು.
ಮೂಲ ಯೋಜನೆಯಂತೆ ನಾಲಾ ಕಾಮಗಾರಿ ಮಾಡಿಲ್ಲ ಎನ್ನುವುದು ಸರಿಯಲ್ಲ, ತಾಲೂಕಿಗೆ ಸಮರ್ಪಕವಾಗಿ ಹೇಮೆ ನೀರು ಬಾರದೆ ಇರುವಾಗ ಇನ್ನೆಲ್ಲಿ ಹೊಸ ನಾಲಾ ಕಾಮಗಾರಿ ಕೈಗೊಳ್ಳಲು ಸಾಧ್ಯ, ಇವರ ಅವಧಿಯಲ್ಲಿ ನಾಲೆಗಾಗಿ ರೈತರ ಜಮೀನು ಸ್ವಾಧೀನ ಪಡಿಸಿಕೊಂಡು ಇವರು ಹಣ ಕೊಡಿಸದೆ ಶಾಸಕಡಾ.ರಂಗನಾಥ್ ಅವರ ಕಡೆ ತೋರಿಸುವುದು ಇವರ ಅಸಮರ್ಥತೆ, ತಾಲೂಕಿನ ಜೆಡಿಎಸ್ ಮುಖಂಡರು ಲಿಂಕ್ ಕೆನಾಲ್ ವಿಷಯದಲ್ಲಿ ಸುಳ್ಳು ಹೇಳದೆ ತಾಲೂಕಿಗೆ ನೀರು ಹರಿಸಲು ಸಹಕಾರ ನೀಡಲಿ, ವಿತರಣೆ ನಾಲಾ 26ಕ್ಕೆ ಲಿಂಕ್ ಕೆನಾಲ್ ಸೇರಿಸುವ ಕುರಿತು ಜೆಡಿಎಸ್ ನವರ ಹೇಳಿಕೆಯಲ್ಲಿ ಯಾವುದೆ ಸತ್ಯಾಂಶವಿಲ್ಲ ಎಂದರು.
ಕೆಪಿಸಿಸಿ ಸದಸ್ಯ ಬೇಗೂರು ನಾರಾಯಣ, ಮುಖಂಡರಾದ ಹರೀಶ್, ರಾಜು, ಸ್ವಾಮಿ, ಮೂರ್ತಿ ಇತರರು ಇದ್ದರು.
Comments are closed.