ತುಮಕೂರು: ಜಿಲ್ಲೆಯಲ್ಲಿ ಈವರೆಗೆ 180 ಮಂದಿಗೆ ಡೆಂಗ್ಯೂ ಲಕ್ಷಣ ಕಾಣಿಸಿಕೊಂಡಿದ್ದು ಎಲ್ಲರೂ ಗುಣಮುಖರಾಗಿದ್ದಾರೆ, ಮತ್ತಷ್ಟು ಹತೋಟಿಗೆ ತರುವ ಸಲುವಾಗಿ ಪ್ರತಿ ವಾರ್ಡಿನಲ್ಲಿಯೂ ಲಾರ್ವ ಸರ್ವೆ, ಡ್ರೈ ಡೇ ಕಾರ್ಯಕ್ರಮ ಜಿಲ್ಲಾಡಳಿತದೊಂದಿಗೆ ಪಾಲಿಕೆ ನಡೆಸಲಿದೆ, ಸಾರ್ವಜನಿಕರು ಗಂಭೀರವಾಗಿ ಸಹಕರಿಸಿ ಎಂದು ಡೀಸಿ ಶುಭ ಕಲ್ಯಾಣ ಹೇಳಿದ್ದಾರೆ.
ನಗರದ ಚಿಕ್ಕಪೇಟೆ ಆಗ್ರಹಾರ ಪಶ್ಚಿಮ ಬಡಾವಣೆಯ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಜಿಲ್ಲಾಡಳಿತ, ಜಿಪಂ, ಮಹಾನಗರಪಾಲಿಕೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಚೇರಿ ವತಿಯಿಂದ ಹಮ್ಮಿಕೊಂಡಿದ್ದ ಲಾರ್ವ ಸರ್ವೇ ಹಾಗೂ ಡ್ರೈ ಡೇ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಜಿಲ್ಲೆಯಾದ್ಯಂತೆ ಡೆಂಗ್ಯೂ ಹರಡದಂತೆ ಎಲ್ಲಾ ರೀತಿಯ ಮುನ್ನಚ್ಚರಿಕೆ ಕ್ರಮಗಳನ್ನು ಸ್ಥಳೀಯ ಸಂಸ್ಥೆಗಳ ಮೂಲಕ ತೆಗೆದುಕೊಳ್ಳಲಾಗುತ್ತಿದೆ. ಹಾಗಾಗಿ ಜನರು ತಮ್ಮ ಮನೆಯ ಸುತ್ತಮುತ್ತ ಸ್ವಚ್ಛತೆ ಕಾಪಾಡುವುದಲ್ಲದೆ, ನೀರಿನ ಸಂಗ್ರಹ ತೊಟ್ಟಿಗಳಲ್ಲಿ, ಡ್ರಮ್ ಗಳಲ್ಲಿ ಡೆಂಗ್ಯೂ ಜ್ವರ ಹರಡುವ ಲಾರ್ವ ಉತ್ಪತ್ತಿಯಾಗದೆ ಎಚ್ಚರಿಕೆ ವಹಿಸಬೇಕಾಗಿದೆ. ಈ ನಿಟ್ಟಿನಲ್ಲಿ ಸ್ಥಳೀಯ ಸಂಸ್ಥೆ ಅಧಿಕಾರಿಗಳ ಪಾತ್ರ ಮಹತ್ವದ್ದಾಗಿದೆ. ನಮ್ಮ ಜಿಲ್ಲೆಯಲ್ಲಿರುವ ಸುಮಾರು 27 ಲಕ್ಷ ಜನರ ಆರೋಗ್ಯ ನಿಮ್ಮ ಕೈಯಲ್ಲಿದ್ದು, ತಾವು ಅತ್ಯಂಚ ಜವಾಬ್ದಾರಿಯಿಂದ ನಡೆದುಕೊಳ್ಳಬೇಕೆಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಜಿ.ಬಿ.ಜೋತಿಗಣೇಶ ಮಾತನಾಡಿ, ತಾಂತ್ರಿಕ ತಜ್ಞರು ಡೆಂಗ್ಯೂ ಹೇಗೆ ಹರಡುತ್ತದೆ, ತಡೆಗಟ್ಟಲು ಯಾವ ರೀತಿಯ ಕ್ರಮ ಕೈಗೊಳ್ಳಬೇಕು ಎಂಬುದನ್ನು ಸವಿವರವಾಗಿ ನೀಡಿದ್ದಾರೆ. ಎಲ್ಲರೂ ಪಾಲಿಸಬೇಕು ಎಂದರು.
ನಗರಪಾಲಿಕೆ ಆಯುಕ್ತೆ ಅಶ್ವಿಜ ಮಾತನಾಡಿ, ಡೆಂಗ್ಯೂ ಜಿಲ್ಲೆಯಲ್ಲಿ ಸರಾಸರಿ ಪರಿಗಣಿಸುವುದಾದರೆ ತುಮಕೂರು ನಗರದಲ್ಲಿ ಹೆಚ್ಚಿನ ಕೇಸುಗಳಿವೆ. ಸುಮಾರು 68 ಕ್ಕೂ ಹೆಚ್ಚು ಮಂದಿಯಲ್ಲಿ ಕಾಣಿಸಿಕೊಂಡಿದ್ದು ಎಲ್ಲರೂ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾಾರೆ. ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಹೊಸ ಫಾಗಿಂಗ್ ಮಷಿನ್ ಗಳನ್ನು ಪೌರಕಾರ್ಮಿಕರಿಗೆ ನೀಡಿ ಪರಿಶೀಲನೆ ನಡೆಸಲಾಯಿತು. ಸ್ಥಳೀಯ ಅಂಗನವಾಡಿ ಮಕ್ಕಳಿಗೆ ಸೊಳ್ಳೆ ಕಚ್ಚದಂತೆ ಸೊಳ್ಳೆ ಪರದೆ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ.ಲಕ್ಷ್ಮಿಕಾಂತ್,ಜಿಲ್ಲಾ ಮಲೆರಿಯಾ ಅಧಿಕಾರಿ ಡಾ.ಚಂದ್ರಶೇಖರ್, ಆರೋಗ್ಯಾಧಿಕಾರಿ ಡಾ.ವೀರಯ್ಯ ಕಲ್ಮಠ್, ಶಿಕಕ್ಷ ರಾಮಾಂಜಿನಪ್ಪ ಸೇರಿದಂತೆ ಪಾಲಿಕೆಯ ಅಧಿಕಾರಿಗಳು ಉಪಸ್ಥಿತರಿದ್ದರು.
Comments are closed.