ಕುಣಿಗಲ್: ರಾಜ್ಯ ಸರ್ಕಾರ ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ವಿಷಯದಲ್ಲಿ ಅನಗತ್ಯ ವಿಳಂಬ ಧೋರಣೆ ಅನುಸರಿಸದೆ ಶೀಘ್ರದಲ್ಲೆ ಉದ್ಯೋಗ ಮೀಸಲಾತಿ ಕಲ್ಪಿಸಲು ಮುಖ್ಯಮಂತ್ರಿಗಳು ಕ್ರಮ ಕೈಗೊಳ್ಳಬೇಕೆಂದು ಮಾಜಿ ಶಾಸಕ, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಬಿ.ಬಿ.ರಾಮಸ್ವಾಮಿ ಗೌಡ ಆಗ್ರಹಿಸಿದರು.
ಗುರುವಾರ ಕರ್ನಾಟಕ-50ರ ಸಂಭ್ರಮದ ಅಡಿಯಲ್ಲಿ ಹೆಸರಾಯಿತು ಕರ್ನಾಟಕ ಉಸಿರಾಯಿತು ಕನ್ನಡ ಅಭಿಯಾನ ಅಂಗವಾಗಿ ಕನ್ನಡ ಜ್ಯೋತಿ ರಥಯಾತ್ರೆಯನ್ನು ಪಟ್ಟಣದಲ್ಲಿ ಸ್ವಾಗತಿಸುವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿ, ಕನ್ನಡ ಭಾಷೆಯನ್ನು ಇಂದಿನ ಮುಂದಿನ ಪೀಳಿಗೆಗೆ ತಲುಪಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಸ್ವಾಗತಾರ್ಹ, ಸಾವಿರಾರು ವರ್ಷದ ಇತಿಹಾಸ ಇರುವ ಕನ್ನಡ ಭಾಷೆ ಸಂಸ್ಕೃತಿ ಸಂಪದ್ಭರಿತ ಭಾಷೆಯಾಗಿದೆ, ಇದರ ಕಂಪು ಮತ್ತಷ್ಟು ವೃದ್ಧಿಯಾಗುವ ನಿಟ್ಟಿನಲ್ಲಿ ಎಲ್ಲಾ ಕನ್ನಡಿಗರೂ ಶ್ರಮಿಸಬೇಕು ಎಂದರು.
ಕಸಾಪ ಜಿಲ್ಲಾಧ್ಯಕ್ಷ ಸಿದ್ದಲಿಂಗಪ್ಪ ಮಾತನಾಡಿ, ಕರ್ನಾಟಕ ಹೆಸರಾಗಿದೆ, ಕನ್ನಡ ಉಸಿರಾಗಬೇಕಿದೆ, ಇಂದು ಕನ್ನಡ ಭಾಷೆ ಉಳಿದಿರೋದು ಗ್ರಾಮಾಂತರ ಪ್ರದೇಶದ ಜನರಿಂದಾಗಿ, ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಭಾಷೆಗೆ ತನ್ನದೆ ಆದ ವೈವಿಧ್ಯತೆ ಇದೆ, ಗಡಿನಾಡಲ್ಲಿ ಅಲ್ಲಿನ ಭಾಷೆ ಅರಗಿಸಿಕೊಂಡು, ಅಳವಡಿಸಿಕೊಂಡು ಕನ್ನಡ ಭಾಷೆ ಉಳಿದು ಬೆಳೆಯುತ್ತಿದೆ, ಕನ್ನಡ ಭಾಷೆಯಲ್ಲಿ ಆಡಳಿತ ಜಾರಿಯಾಗುತ್ತಿದೆ, ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ಸಿಗುವ ನಿಟ್ಟಿನಲ್ಲಿ ಎಲ್ಲಾ ಜನಪ್ರತಿನಿಧಿಗಳು ಒಕ್ಕೋರಲಿನಿಂದ ಆಗ್ರಹಿಸಿದ್ದು ಜಾರಿಯಾಗುವ ಹಂತಕ್ಕೆ ಬಂದಿದೆ, ಮುಂದಿನ ಪೀಳಿಗೆಯ ಕನ್ನಡದ ಮಕ್ಕಳು ಕನ್ನಡ ಭಾಷೆಯ ಉಳಿದು ಮತ್ತಷ್ಟು ಬೆಳೆಯುವ ನಿಟ್ಟಿನಲ್ಲಿ ಕೊಡುಗೆ ನೀಡಬೇಕು ಎಂದರು.
ತಹಶೀಲ್ದಾರ್ ವಿಶ್ವನಾಥ್ ಮಾತನಾಡಿದರು, ತಾಲೂಕಿನ ಯಡಿಯೂರಿನ ಬಳಿ ರಥಯಾತ್ರೆಯನ್ನು ಸ್ವಾಗತಿಸಿ ಪಟ್ಟಣದಲ್ಲಿ ವಿವಿಧ ಶಾಲಾ ಮಕ್ಕಳು ಪಾರಂಪರಿಕ ಉಡುಗೆ ತೊಟ್ಟು ಕನ್ನಡ ಬಾವುಟ ಬೀಸುತ್ತಾ ಮೆರವಣಿಗೆಯಲ್ಲಿ ಪಾಲ್ಗೊಂಡರೆ, ಅಂಗನವಾಡಿ ಕಾರ್ಯಕರ್ತೆಯರು ಪೂರ್ಣ ಕುಂಭ ಹೊತ್ತು ಜಿಡಿಮಳೆಯನ್ನು ಲೆಕ್ಕಿಸದೆ ಜನಪದ ಕಲಾ ತಂಡಗಳೊಂದಿಗೆ ಮೆರವಣಿಗೆ ನಡೆಸಿ ಗ್ರಾಮ ದೇವತೆ ವೃತ್ತದಲ್ಲಿ ವೇದಿಕೆ ಕಾರ್ಯಕ್ರಮ ನಡೆಸಲಾಯಿತು, ತಾಪಂ ಇಒ ಜೋಸೆಫ್, ಬಿಇಒ ಬೋರೇಗೌಡ, ಪುರಸಭೆ ಮುಖ್ಯಾಧಿಕಾರಿ ಮಂಜುಳಾ, ರೋಟರಿ ಕ್ಲಬ್ ಅಧ್ಯಕ್ಷ ಬಿ.ಎಂ.ಹುಚ್ಚೇಗೌಡ, ಕಸಾಪ ತಾಲೂಕು ಅಧ್ಯಕ್ಷ ಡಾ.ಕಪಿನಿಪಾಳ್ಯ ರಮೇಶ, ಮಾಜಿ ಅಧ್ಯಕ್ಷ ದಿನೇಶ್, ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು ಹಾಜರಿದ್ದರು.
Comments are closed.