ಭ್ರಷ್ಟ ಅಧಿಕಾರಿಗಳಿಂದ ತೆರಿಗೆ ಹಣ ಲೂಟಿ: ಹೆಗ್ಡೆ

24

Get real time updates directly on you device, subscribe now.


ತುಮಕೂರು: ಜನ ಸಾಮಾನ್ಯರ ಲಕ್ಷಾಂತರ ಕೋಟಿ ತೆರಿಗೆಯ ಹಣವನ್ನು ಭ್ರಷ್ಟಾಚಾರಿ ಅಧಿಕಾರಿಗಳು ಲೂಟಿ ಮಾಡಿ, ದೇಶದ ಆರ್ಥಿಕ ಸ್ಥಿತಿಯನ್ನು ತಳಮಟ್ಟಕ್ಕೆ ಕೊಂಡೊಯ್ಯುತ್ತಿದ್ದಾರೆ ಎಂದು ಸರ್ವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ಎನ್.ಸಂತೋಷ ಹೆಗ್ಡೆ ಆತಂಕ ವ್ಯಕ್ತಪಡಿಸಿದರು.
ತುಮಕೂರು ವಿಶ್ವ ವಿದ್ಯಾಲಯದ, ವಿಶ್ವ ವಿದ್ಯಾಲಯ ಕಲಾ ಕಾಲೇಜು ಇವರ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ಭ್ರಷ್ಟಾಚಾರ ನಿರ್ಮೂಲನೆಯಲ್ಲಿ ಯುವ ಜನರ ಪಾತ್ರ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮನುಷ್ಯನ ಬುದ್ಧಿ ವಿಕಾರಗೊಂಡು, ಭ್ರಷ್ಟಾಚಾರವೆಂಬ ಭೂತ ಮನೆ ಮಾಡಿದೆ, ಜಾರಿ ನಿರ್ದೇಶನಾಲಯ ಮತ್ತು ಆದಾಯ ತೆರಿಗೆ ಇಲಾಖೆ ದಾಳಿಗಳಲ್ಲಿ ಸಿಗುತ್ತಿರುವ ಹಣವೆಲ್ಲವೂ ಜನ ಸಾಮಾನ್ಯರದ್ದು, ವಿದ್ಯಾರ್ಥಿಗಳಿಂದ ಮಾತ್ರ ಭ್ರಷ್ಟ ಮುಕ್ತ ಸಮಾಜ ನಿರ್ಮಿಸಲು ಸಾಧ್ಯ ಎಂದರು.

1950ರಲ್ಲಿ ನಡೆದ ಜೀಪ್ ಖರೀದಿಯ 50 ಲಕ್ಷ ಹಗರಣದಿಂದ ಹಿಡಿದು 1987ರಲ್ಲಿ ನಡೆದ 64 ಕೋಟಿಯ ಬೋಫೋರ್ಸ್ ಹಗರಣ, 2010ರಲ್ಲಿ ಆದ 70000 ಕೋಟಿಯ ಕಾಮನ್ ವೆಲ್ತ್ ಗೇಮ್ಸ್ ಹಗರಣ, 2004 ರಿಂದ 2009ರ ವರೆಗೂ ನಡೆದು 2012 ರಲ್ಲಿ ಬೆಳಕಿಗೆ ಬಂದ 1 ಲಕ್ಷ 86 ಸಾವಿರ ಕೋಟಿಯ ಕೋಲ್ ಗೇಟ್ ಹಗರಣ, 1 ಲಕ್ಷ 76 ಸಾವಿರ ಕೋಟಿಯ 2ಜಿ ಸ್ಪೆಕ್ಟ್ರಮ್ ಸೇರಿದಂತೆ ಸಾಲು ಸಾಲು ಹಗರಣ ನಡೆದಿವೆ ಎಂದು ತಿಳಿಸಿದರು.
ದುರಾಸೆಯೇ ಎಲ್ಲಕ್ಕೂ ಮೂಲ ಕಾರಣವಾಗಿದ್ದು, ಭ್ರಷ್ಟಾಚಾರದಿಂದ ಸಮಾಜದಲ್ಲಿ ಪ್ರಾಮಾಣಿಕತೆ ಮರೀಚಿಕೆಯಾಗಿದೆ, ಆತ್ಮತೃಪ್ತಿ ಇಲ್ಲದ ಭ್ರಷ್ಟ ಅಧಿಕಾರಿಗಳು ದೇಶದ ಸಂಪತ್ತನ್ನು ನುಂಗಿ, ಲೂಟಿಯ ಹಣದಿಂದ ಪ್ರಾಮಾಣಿಕತೆ ಕೊಳ್ಳುತ್ತಿದ್ದಾರೆ ಎಂದರು.

ಕೆಲ ಚುನಾಯಿತ ಪ್ರತಿನಿಧಿಗಳ ಮೇಲೆಯೇ ಕ್ರಿಮಿನಲ್ ಮೊಕದ್ದಮೆಗಳಿವೆ, ಉನ್ನತ ಸ್ಥಾನಕ್ಕೇರಲು ಯಾವ ಮಟ್ಟಕ್ಕಾದರೂ ಇಳಿಯುವ ನೀಚ ಮನಸ್ಥಿತಿ ಹೊಂದಿದ್ದಾರೆ ಎಂದು ಹೇಳಿದರು.
ತರಳಬಾಳು ಜಗದ್ಗುರು ಶಾಖಾ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿ ಮಾತನಾಡಿ, ಅಕ್ಷರ ಜ್ಞಾನವಿರುವವರೇ ಭ್ರಷ್ಟಾಚಾರಕ್ಕೆ ಒಳಗಾಗುತ್ತಿದ್ದಾರೆ, ಅಂಥವರು ಆತ್ಮ ವಿಮರ್ಶೆ ಮಾಡಿಕೊಳ್ಳುವ ಅವಶ್ಯಕತೆ ಇದೆ, ಪ್ರಾಮಾಣಿಕತೆಯ ಸಂಕಲ್ಪ ಸಮಾಜದಲ್ಲಿ ಮೂಡಿ ಬಂದರೆ ಭ್ರಷ್ಟಾಚಾರದ ನಿರ್ಮೂಲನೆ ಕಷ್ಟವೇನಲ್ಲ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಮಾತನಾಡಿ, ಭ್ರಷ್ಟರನ್ನು ಧಿಕ್ಕರಿಸುವ, ತಿರಸ್ಕರಿಸುವ ವ್ಯಕ್ತಿತ್ವ ಸಮಾಜದಲ್ಲಿ ಬೆಳೆಯಬೇಕು, ವ್ಯಕ್ತಿ ಗೌರವ ದೊರೆಯಬೇಕಾದರೆ ನುಡಿದಂತೆ ನಡೆದುಕೊಳ್ಳುವ ಗುಣವಿರಬೇಕು ಎಂದು ಹೇಳಿದರು.
ಕುಲಸಚಿವೆ ನಾಹಿದಾ ಜಮ್ ಜಮ್, ಗೃಹ ಸಚಿವಾಲಯದ ವಿಶೇಷ ಕರ್ತವ್ಯಅಧಿಕಾರಿ ಡಾ.ಕೆ.ನಾಗಣ್ಣ, ಕಲಾ ಕಾಲೇಜಿನ ಪ್ರಾಂಶುಪಾಲ ಪ್ರೊ.ಬಿ.ಕರಿಯಣ್ಣ, ಪೊಲೀಸ್ ಬೇಟೆ ಕನ್ನಡ ವಾರ ಪತ್ರಿಕೆ ಸಂಪಾದಕ ಪ್ರಸನ್ನ ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!