ತುಮಕೂರು: ಹೇಮಾವತಿ ಲಿಂಕ್ ಕೆನಾಲ್ ನಿಂದ ಜಿಲ್ಲೆಯ ಹೇಮಾವತಿ ನೀರಿಗೆ ಕುತ್ತು ಬರಲಿದ್ದು, ಜಿಲ್ಲೆಯ ಎಲ್ಲಾ ಶಾಸಕರು ಪಕ್ಷಾತೀತವಾಗಿ ವಿಧಾನಸಭೆಯಲ್ಲಿ ಲಿಂಕ್ ಕೆನಾಲ್ ವಿರುದ್ಧ ಧ್ವನಿ ಎತ್ತುವಂತೆ ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಹಾಗೂ ತುಮಕೂರು ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಒತ್ತಾಯಿಸಿದ್ದಾರೆ.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರೈತ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿ, ಜಾತಿ, ಪಕ್ಷದ ಲಾಭಿಗೆ ಮಣಿದು ಇಂತಹ ಘನ ಘೋರ ಅನ್ಯಾಯ ತಡೆಯಲು ಮುಂದಾಗದಿದ್ದರೆ ಮುಂದಿನ ಪೀಳಿಗೆಗೆ ನೀವು ವಿಷ ಕೊಟ್ಟಂತೆ ಆಗುತ್ತದೆ, ಹಾಗಾಗಿ ಹೇಮಾವತಿ ಲಿಂಕ್ ಕೆನಾಲ್ ವಿರುದ್ಧ ಜಿಲ್ಲೆಯ ಎಲ್ಲಾ ಶಾಸಕರು ಸದನದ ಒಳಗೆ ಮತ್ತು ಹೊರಗೆ ಧ್ವನಿ ಎತ್ತಬೇಕೆಂಬ ಆಗ್ರಹ ರೈತ ಸಂಘದ್ದಾಗಿದೆ ಎಂದರು.
ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಎಸ್.ಶಂಕರಪ್ಪ ಮಾತನಾಡಿ, ಪಹಣಿ, ದುರಸ್ತಿ, ಪಕ್ಕಾಪೋಡು, ಹದ್ದುಬಸ್ತು, ನೋಂದಣಿ ಶುಲ್ಕ ಎಲ್ಲವೂ ದುಬಾರಿಯಾಗಿದ್ದು, ಕೂಡಲೇ ವಾಪಸ್ ಪಡೆಯಬೇಕು, ಕಳೆದ 9 ತಿಂಗಳಿನಿಂದ ಬಾಕಿ ಉಳಿಸಿಕೊಂಡಿರುವ ಹಾಲಿನ ಪ್ರೋತ್ಸಾಹ ಧನ ಬಿಡುಗಡೆ ಮಾಡಬೇಕು, ಹೈನುಗಾರಿಕೆಯನ್ನೇ ನಂಬಿ ಬದುಕುತ್ತಿರುವ ಜನರಿಗೆ ಹಾಲಿನ ಪ್ರೋತ್ಸಾಹ ಅತಿ ಅವಶ್ಯಕವಾಗಿ ಬೇಕಾಗಿದೆ ಎಂದರು.
ಈ ಸಂಬಂಧ ಮನವಿ ಪತ್ರವನ್ನು ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ.ಕರಾಳೆ ಅವರಿಗೆ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಮಹಿಳಾ ಘಟಕದ ಅಧ್ಯಕ್ಷೆ ನಾಗರತ್ನಮ್ಮ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ದೊಡ್ಡಮಾಳಯ್ಯ, ತಾಲೂಕು ಅಧ್ಯಕ್ಷರಾದ ಚಿಕ್ಕ ಬೋರೇಗೌಡ, ವೆಂಕಟೇಗೌಡ, ಲಕ್ಷ್ಮಣಗೌಡ, ಡಿ.ಆರ್.ರಾಜಶೇಖರ್, ಕೆಂಚಪ್ಪ, ಸಿ.ಜಿ.ಲೋಕೇಶ್, ರಂಗಹನುಮಯ್ಯ, ಶಬ್ಬೀರ್ ಪಾಷ, ತಿಮ್ಮೇಗೌಡ, ರವೀಶ್ ಹಾಗೂ ಎಲ್ಲಾ ತಾಲೂಕು ಪ್ರತಿನಿಧಿಗಳು ಭಾಗವಹಿಸಿದ್ದರು.
Comments are closed.