ವೆಂಕಟೇಶಪುರದಲ್ಲಿ ಸ್ವಚ್ಛತೆ ಮಾಯ- ರೋಗದ ಭೀತಿ

35

Get real time updates directly on you device, subscribe now.


ತುಮಕೂರು:ನಗರದ ಶಿರಾ ಗೇಟ್ ನ 2ನೇ ವಾರ್ಡಿನ ವೆಂಕಟೇಶ್ವರಪುರ 3ನೇ ಕ್ರಾಸಿನ ಪ್ರದೇಶ ಡೆಂ, ಮಲೇರಿಯಾ ಹರಡುವ ತಾಣವಾಗಿದೆ, ಇಲ್ಲಿ ಜನ, ವಾಹನ ಓಡಾಡಲು ಸಮರ್ಪಕ ರಸ್ತೆ ಇಲ್ಲ, ನೀರು ಹರಿದುಹೋಗಲು ಚರಂಡಿ ವ್ಯವಸ್ಥೆಯಿಲ್ಲ, ಮಳೆ ನೀರು, ಮನೆಗಳ ನೀರು ರಸ್ತೆಯ ಗುಂಡಿಗಳಲ್ಲೇ ನಿಂತು ಸೊಳ್ಳೆಗಳ ಉತ್ಪಾದನೆಯಾಗಿ ಸಾಂಕ್ರಾಮಿಕ ರೋಗಗಳು ಹರಡಲು ಕಾರಣವಾಗಿದೆ, ಈ ಬಗ್ಗೆ ನಗರ ಪಾಲಿಕೆ ಅಧಿಕಾರಿಗಳ ಗಮನಕ್ಕೆ ತಂದರೂ ಸಮಸ್ಯೆ ನಿವಾರಿಸಿಲ್ಲ ಎಂದು ಸ್ಥಳೀಯ ನಿವಾಸಿಗಳು ದೂರಿದ್ದಾರೆ.

ಈ ಜನವಸತಿ ಪ್ರದೇಶದಲ್ಲಿ ಯಾವುದೇ ಸ್ವಚ್ಛತೆ ಇಲ್ಲ, ಮಳೆಗಾಲದಲ್ಲಂತೂ ಇಲ್ಲಿ ಓಡಾಡಲಾಗುವುದಿಲ್ಲ, ಕೊಳಚೆ ನೀರು ನಿಂತು ಸೊಳ್ಳೆ ಕಾಟ, ದುರ್ವಾಸನೆಯಿಂದ ನಿವಾಸಿಗಳು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ, ಶಾಲಾ ಮಕ್ಕಳು, ವಯೋವೃದ್ಧರು ಓಡಾಡಲಾಗದಂತಹ ಪರಿಸ್ಥಿಯಲ್ಲಿ ಗುಂಡಿ ಬಿದ್ದ ರಸ್ತೆಗಳಿವೆ ಎಂದು ಸ್ಥಳೀಯ ಮುಖಂಡ ವೆಂಕಟೇಶಾಚಾರ್ ಹೇಳುತ್ತಾರೆ.

ಸಮೀಪದಲ್ಲೇ ಎಪಿಎಂಸಿ ತರಕಾರಿ ಮಾರುಕಟ್ಟೆ ಇದೆ, ನಿತ್ಯ ಮಾರುಕಟ್ಟೆಗೆ ಬರುವ ಜನರಿಗೆ ಈ ಪ್ರದೇಶದ ನರಕ ದರ್ಶನವಾಗುತ್ತದೆ, ಅಧಿಕಾರಿಗಳೂ ಇಲ್ಲಿ ನಿತ್ಯ ಓಡಾಡುತ್ತಾರೆ, ಆದರೆ ವೆಂಕಟೇಶಪುರದ ಈ ಸಮಸ್ಯೆ ಯಾರ ಕಣ್ಣಿಗೂ ಬೀಳುತ್ತಿಲ್ಲ, ಈಗ ಎಲ್ಲೆಡೆ ಡೆಂ, ಮಲೇರಿಯಾ ಹರಡುತ್ತಿರುವ ಅತಂಕಕಾರಿ ಪರಿಸ್ಥಿತಿಯಲ್ಲಿ ಬಾಳುತ್ತಿರುವ ಇಲ್ಲಿನ ಜನರ ಕಷ್ಟ ಕೇಳುವವರು ಇಲ್ಲದಂತಾಗಿದೆ ಎಂದು ಹೇಳಿದ್ದಾರೆ.

ಕನಿಷ್ಟ ಇಲ್ಲಿ ವ್ಯವಸ್ಥಿತವಾಗಿ ಚರಂಡಿ ನಿರ್ಮಾಣ ಮಾಡಿ, ಕೊಳಚೆ ನೀರು ಸರಾಗವಾಗಿ ಹರಿದುಹೋಗುವಂತೆ ಮಾಡಬೇಕು, ರಸ್ತೆಗಳ ಗುಂಡಿ ಮುಚ್ಚಿ ಜನ ಓಡಾಡಲು ಅನುಕೂಲ ಮಾಡಿಕೊಡಬೇಕು ಎಂದು ನಗರಪಾಲಿಕೆಗೆ ಮನವಿ ಮಾಡಿದ್ದಾರೆ,
ಈಗಲಾದರೂ ಪಾಲಿಕೆ ಅಧಿಕಾರಿಗಳು ಇತ್ತ ಗಮನ ಹರಿಸಿ ಸಮಸ್ಯೆ ನಿವಾರಣೆ ಮಾಡದಿದ್ದರೆ ಸ್ಥಳೀಯರೆಲ್ಲಾ ಸೇರಿ ಕೊಚ್ಚೆ ಜಾಗದಲ್ಲೇ ಕುಳಿತು ಪಾಲಿಕೆ ಆಡಳಿತದ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ ಎಂದು ನಿವಾಸಿಗಳಾದ ವೆಂಕಟೇಶಾಚಾರ್, ಚಂದ್ರಣ್ಣ, ಶಬ್ಬೀರ್ ಅಹ್ಮದ್, ಎಲ್.ಲಕ್ಷ್ಮಿ, ಸೋನಿಯಾ, ರತ್ನಮ್ಮ, ರಾಜಶೇಖರ್, ದತ್ತಾತ್ರೇಯ, ಶಶಿಕುಮಾರ್ ಹೇಳಿದ್ದಾರೆ.

Get real time updates directly on you device, subscribe now.

Comments are closed.

error: Content is protected !!