ಶಿರಾದಲ್ಲಿ ಕನ್ನಡ ರಥ ಯಾತ್ರೆಗೆ ಅದ್ದೂರಿ ಸ್ವಾಗತ

26

Get real time updates directly on you device, subscribe now.


ಶಿರಾ: ಕರ್ನಾಟಕ ಹೆಸರಿನ ನಾಮಕರಣದ ಸುವರ್ಣ ಸಂಭ್ರಮದ ಹೊತ್ತಿನಲ್ಲಿ ರಾಜ್ಯ ಸರ್ಕಾರ ಅಯೋಜಿಸಿರುವ ಕನ್ನಡ ರಥ ಯಾತ್ರೆ ಶಿರಾ ನಗರವನ್ನು ಪ್ರವೇಶಿಸಿತು. ಶಾಸಕ ಟಿ.ಬಿ.ಜಯಚಂದ್ರ ರಥವನ್ನು ಬರ ಮಾಡಿಕೊಂಡರು.

ಜಿಲ್ಲಾ ಕೇಂದ್ರದಿಂದ ಹೊರಟಿದ್ದ ರಥ ಯಾತ್ರೆ ಭಾನುವಾರ ಬೆಳಗ್ಗೆ ತಾಲ್ಲೂಕಿನ ಶೀಬಿ ಗ್ರಾಮದ ಮೂಲಕ ತಾಲ್ಲೂಕನ್ನು ಪ್ರವೇಶಿಸಿತು, ಈ ವೇಳೆ ತಹಸೀಲ್ದಾರ್ ದತ್ತಾತ್ರೇಯ ಜೆ.ಗಾದಾ ಮತ್ತು ಇತರೆ ಅಧಿಕಾರಿಗಳು ಹಾಜರಿದ್ದು, ರಥವನ್ನು ಸ್ವಾಗತಿಸಿದರು, ಕಳ್ಳಂಬೆಳ್ಳ, ಚಿಕ್ಕನಹಳ್ಳಿ ಮಾರ್ಗವಾಗಿ ಶಿರಾದ ದರ್ಗಾ ಸರ್ಕಲ್ ಗೆ ಬರುವ ವೇಳೆಗೆ ಕನ್ನಡಾಭಿಮಾನಿಗಳು ದರ್ಗಾ ವೃತ್ತದಲ್ಲಿ ಹಾಜರಿದ್ದು, ಸ್ವಾಗತ ಕೋರಿದರು, ಅನ್ಯ ಕಾರ್ಯ ನಿಮಿತ್ತ ಪರ ಊರಿಗೆ ತೆರಳಿದ್ದ ಶಾಸಕ ಟಿ.ಬಿ. ಜಯಚಂದ್ರ ಕೆಲವೇ ಹೊತ್ತಿನಲ್ಲಿ ಸ್ಥಳಕ್ಕೆ ಆಗಮಿಸಿ, ತಾಯಿ ಭುವನೇಶ್ವರಿ ಮತ್ತು ರಥಕ್ಕೆ ಪುಷ್ಪ ಮಾಲಿಕೆ ಅರ್ಪಿಸಿದರು, ನಂತರ ರಥವನ್ನು ಪ್ರವಾಸಿ ಮಂದಿರ ವೃತ್ತದ ವರೆಗೆ ಭವ್ಯ ಮೆರವಣಿಗೆ ಮೂಲಕ ಕರೆತರಲಾಯಿತು.

ಕನ್ನಡ ಭವನಕ್ಕೆ ಜಾಗ: ಮೆರವಣಿಗೆ ಮಧ್ಯೆ ಬಸ್ ನಿಲ್ದಾಣದ ಬಳಿ ಮಾತನಾಡಿದ ಶಾಸಕ ಟಿಬಿಜೆ ನಗರದ ಗವಿ ಆಂಜನೇಯ ಸ್ವಾಮಿ ದೇವಾಲಯದ ಜಾಗಕ್ಕೆ ಹೊಂದಿಕೊಂಡಂತೆ ಕನ್ನಡ ಭವನ ನಿರ್ಮಾಣಕ್ಕೆ ಸುಮಾರು 100/60 ಅಡಿಗಳ ನಿವೇಶನ ಕೊಡುವುದಾಗಿ ಘೋಷಿಸಿದರು.
ದೇಶದ ಸ್ವತಂತ್ರ ಹೋರಾಟದಲ್ಲಿ ತಾಲ್ಲೂಕಿನ ಸುಮಾರು 220 ಜನ ಹುತಾತ್ಮರಾಗಿದ್ದು, ಅವರ ಸ್ಮರಣೆಗಾಗಿ ಸ್ವತಂತ್ರ ಭವನ ನಿರ್ಮಿಸುವ ಯೋಜನೆ ರೂಪಿಸಿದ್ದು, ಅದಕ್ಕೂ ನಿವೇಶನ ಗುರುತಿಸಲಾಗಿದೆ ಮತ್ತು ಭವನ ನಿರ್ಮಾಣಕ್ಕೆ ಒಂದು ಕೋಟಿ ರೂ. ಅನುದಾನ ಕೊಡಿಸುವುದಾಗಿ ಪ್ರಕಟಿಸಿದರು.
ಕಸಾಪ ತಾಲ್ಲೂಕು ಅಧ್ಯಕ್ಷ ಬಿ.ಪಿ.ಪಾಂಡುರಂಗಪ್ಪ, ಬಿಇಒ ಕೃಷ್ಣಪ್ಪ, ತಾಪಂ ಇಓ ಅನಂತರಾಜು, ಪೌರಾಯುಕ್ತ ರುದ್ರೇಶ್, ಎಡಿಎ ನಾಗರಾಜು, ಟಿಎಚ್ ಓ ಡಾ. ಸಿದ್ದೇಶ್ವರ, ಆರ್ ಎಫ್ ಓ ನವನೀತ್, ಕರ್ನಾಟಕ ರಕ್ಷಣಾ ವೇದಿಕೆ ಸದಸ್ಯರು, ಆಟೋ ಚಾಲಕರ ಸಂಘದ ಪದಾಧಿಕಾರಿಗಳು, ಕನ್ನಡ ಪರ ಸಂಘಟನೆಗಳ ಮುಖಂಡರು ಇತರರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!