ತುಮಕೂರು: ಪ್ರಸ್ತುತ ಮನೆಯಲ್ಲಿ ಮಕ್ಕಳಿಗೆ ಸಂಸ್ಕಾರ ಕಲಿಸಲು ತಂದೆ-ತಾಯಂದಿರಿಗೆ ಸಮಯವಿಲ್ಲ, ಹೇಳಿಕೊಡುವ ಅಜ್ಜ- ಅಜ್ಜಿಯರಿಗೆ ಮನೆಯಲ್ಲಿ ವಾಸಿಸಲು ಅವಕಾಶವೇ ಇಲ್ಲ, ಹಾಗಾದರೆ ಮಕ್ಕಳಿಗೆ ಸಂಸ್ಕಾರ ಕಲಿಸುವವರು ಯಾರು? ಈ ಬಗ್ಗೆ ಪೋಷಕರು ಗಂಭೀರವಾಗಿ ಆಲೋಚಿಸಬೇಕು ಎಂದು ಭೀಮಸೇತು ಮುನಿವೃಂದ ಮಠದ ಪೀಠಾಧಿಪತಿ ರಘುವರೇಂದ್ರತೀರ್ಥ ಶ್ರೀಪಾದಂಗಳು ಕಳಕಳಿಯಿಂದ ಪ್ರಶ್ನಿಸಿದರು.
ವ್ಯಾಸ ಪೂರ್ಣಿಮೆಯಂದು ತುಮಕೂರಿನ ಶ್ರೀಕೃಷ್ಣ ಮಂದಿರದಲ್ಲಿ ಏರ್ಪಡಿಸಿದ್ದ ತಮ್ಮ 16 ನೇ ವರ್ಷದ ಚಾತುರ್ಮಾಸ್ಯ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ, ಇಂದು ಮಕ್ಕಳಿಗೆ ಉದ್ಯೋಗ ಸಂಪಾದಿಸುವ ವಿದ್ಯೆ ಮಾತ್ರ ಲಭಿಸುತ್ತಿದೆ, ಜೀವನದಲ್ಲಿ ಎದುರಾಗುವ ಕಷ್ಟಕರ ಸಮಸ್ಯೆಗಳನ್ನು ಧೈರ್ಯದಿಂದ ಎದುರಿಸುವ, ಅವುಗಳಿಂದ ಪಾರಾಗುವ ಬಗ್ಗೆ ಯಾವುದೇ ಶಿಕ್ಷಣ ಮನೆಯಲ್ಲೂ ದೊರೆಯುತ್ತಿಲ್ಲ, ಸಮಾಜದಲ್ಲೂ ದೊರೆಯುತ್ತಿಲ್ಲ, ನಮ್ಮ ಬುದ್ಧಿಶಕ್ತಿ ಕೇವಲ ಪುಸ್ತಕಕ್ಕಷ್ಟೇ ಸೀಮಿತವಾಗಿದೆ, ಸಾಮಾನ್ಯ ಜ್ಞಾನ, ಸ್ವಂತ ಆಲೋಚನೆ ಕಿಂಚಿತ್ತೂ ಇಲ್ಲವಾಗಿದೆ, ಪ್ರತಿಯೊಂದನ್ನೂ ಗೂಗಲ್ನಲ್ಲಿ ಹುಡುಕುವ ಬುದ್ದಿವಂತಿಕೆ ವಿವಿಧ ಸಮಯ, ಸಂದರ್ಭಗಳಲ್ಲಿ ಹೇಗೆ ಪ್ರತಿಕ್ರಿಯಿಸಬೇಕು? ಸಮಸ್ಯೆಗಳನ್ನು ಹೇಗೆ ಎದುರಿಸಿ, ಪರಿಹರಿಸಬೇಕೆಂಬ ಅರಿವು ಸ್ವಲ್ಪವೂ ಇಲ್ಲ, ಈ ಕುರಿತು ಪ್ರತಿಯೊಬ್ಬರೂ ಚಿಂತಿಸಬೇಕಿದೆ ಎಂದರು.
ಇದೇ ಸಂದರ್ಭದಲ್ಲಿ ವಿದ್ವಾನ್ ಮರುತಾಚಾರ್ಯ ಅವರು ಚಾತುರ್ಮಾಸ್ಯದ ಕುರಿತು ಉಪನ್ಯಾಸ ನೀಡಿದರು, ನಂತರ ಶ್ರೀಗಳಿಂದ ಸಂಸ್ಥಾನ ಪೂಜೆ ನೆರವೇರಿತು.
ಸಮಾರಂಭದಲ್ಲಿ ಕೃಷ್ಣ ಮಂದಿರದ ಅಧ್ಯಕ್ಷ ಶ್ರೀನಿವಾಸ ಹತ್ವಾರ್, ಕಾರ್ಯಾಧ್ಯಕ್ಷ ಬಾಲಕೃಷ್ಣ ಹೆಬ್ಬಾರ್, ಮುಖಂಡರಾದ ಜಿ.ಕೆ.ಶ್ರೀನಿವಾಸ್, ಕೆ.ನಾಗರಾಜಧನ್ಯ, ಗುರುಪ್ರಸಾದ್, ವ್ಯವಸ್ಥಾಪಕ ವಿದ್ವಾನ್ ಜನಾರ್ಧನ ಭಟ್ ಸೇರಿದಂತೆ ನೂರಾರು ಭಕ್ತಾದಿಗಳು ಪಾಲ್ಗೊಂಡಿದ್ದರು.
Comments are closed.