ಕುಣಿಗಲ್: ಲಿಂಕ್ ಕೆನಾಲ್ ಕಾಮಗಾರಿ ಶೀಘ್ರವಾಗಿ ಪೂರ್ಣಗೊಳಿಸಿ ಹುತ್ರಿದುರ್ಗ ಸೇರಿದಂತೆ ತಾಲೂಕಿನ ಕೆರೆಗಳಿಗೆ ನೀರು ಹರಿಸುವಂತೆ ಆಗ್ರಹಿಸಿ ಹುತ್ರಿದುರ್ಗ ಹೋಬಳಿಯ ರೈತರು, ಗ್ರಾಮಸ್ಥರು, ಕಾಂಗ್ರೆಸ್ ಮುಖಂಡರು ಕೆಂಪನಹಳ್ಳಿ ಗ್ರಾಪಂ ಮುಂದೆ ಪ್ರತಿಭಟನೆ ನಡೆಸಿದರು.
ಸೋಮವಾರ ಹುತ್ರಿದುರ್ಗ ಹೋಬಳಿಯ ಕೆಂಪನಹಳ್ಳಿ ರೇಷ್ಮೆ ಮಾರುಕಟ್ಟೆ ಬಳಿ ಮುಖಂಡರಾದ ಬೋರೇಗೌಡ, ಹಾಲುವಾಗಿಲು ಸ್ವಾಮಿ ಇತರರ ನೇತೃತ್ವದಲ್ಲಿ ಸಂಘಟಿತರಾದ ರೈತರು, ಗ್ರಾಮಸ್ಥರು, ಕಾಂಗ್ರೆಸ್ ಕಾರ್ಯಕರ್ತರು ಕೆಂಪನಹಳ್ಳಿ ಗ್ರಾಮ ಪಂಚಾಯಿತಿ ಕಾರ್ಯಾಲಯದ ವರೆಗೂ ಪ್ರತಿಭಟನೆ ಮೆರವಣಿಗೆ ನಡೆಸಿ, ಗ್ರಾಪಂ ಕಾರ್ಯಾಲಯದ ಮುಂದೆ ಸಭೆ ನಡೆಸಿದರು.
ಈ ವೇಳೆ ಮುಖಂಡ ಸ್ವಾಮಿ ಮಾತನಾಡಿ, ಕಳೆದ 25 ವರ್ಷದಿಂದಲೂ ತಾಲೂಕಿಗೆ ನಿಗದಿಯಾದ 3.03 ಟಿಎಂಸಿ ಹೇಮಾವತಿ ನೀರು ಹರಿಸಲು ಅಗಿಲ್ಲ, ತಾಲೂಕಿನ ಪಾಲಿನ ನೀರು ಪಡೆಯಲು ಸರ್ಕಾರದ ಮೇಲೆ ಒತ್ತಡ ತಂದ ಅಂದಿನ ಸಂಸದ ಡಿ.ಕೆ.ಸುರೇಶ್, ಶಾಸಕ ಡಾ.ರಂಗನಾಥ್, ಡಿಸಿಎಂ ಡಿ.ಕೆ.ಶಿವ ಕುಮಾರ್, ಸಿಎಂ ಸಿದ್ದರಾಮಯ್ಯ ಅವರ ಸಹಕಾರದಿಂದ ಒಂದು ಸಾವಿರ ಕೋಟಿ ರೂ. ವೆಚ್ಚದಲ್ಲಿ ಲಿಂಕ್ ಕೆನಾಲ್ ಕಾಮಗಾರಿ ಮಂಜೂರು ಮಾಡಿಸಿದ್ದು, ಇದಕ್ಕೆ ಬೇರೆ ತಾಲೂಕಿನ ಶಾಸಕರು ಅಡ್ಡಿಪಡಿಸುತ್ತಿದ್ದಾರೆ, ಜಿಲ್ಲೆಯ ಹೇಮಾವತಿ ನೀರು ಶಿರಾಗೆ ಹರಿದಾಗ ಆಕ್ಷೇಪಿಸದ ಶಾಸಕರು ಕುಣಿಗಲ್ ಗೆ ನೀರು ಹರಿಸಲು ಆಕ್ಷೇಪಿಸುತ್ತಿರುವುದು ಅವೈಜ್ಞಾನಿಕ, ತುರುವೇಕೆರೆ ಶಾಸಕರು ಆಕ್ಷೇಪಿಸಿದರೆ, ತುಮಕೂರು ಗ್ರಾಮಾಂತರ ಶಾಸಕ ಸುರೇಶ್ ಗೌಡರು ಏಕೆ ಆಕ್ಷೇಪಿಸುತ್ತಿದ್ದಾರೆ ಎಂಬುದು ತಿಳಿಯುತ್ತಿಲ್ಲ, ಸುರೇಶ್ ಗೌಡರದೆ ಇದೆ ಹೋಬಳಿಯಲ್ಲಿ ಸಾಕಷ್ಟು ಜಮೀನಿದೆ, ನೀರು ಬಂದರೆ ಅವರಿಗೆ ಅನುಕೂಲ ಎಂಬುದ ಮರೆತಿದ್ದಾರೆ, ಕುಣಿಗಲ್ ತಾಲೂಕಿಗೆ ನೀರು ಹರಿಸುವ ಲಿಂಕ್ ಕೆನಾಲ್ ಯೋಜನೆ ಜಾರಿಗೊಳ್ಳದೆ ಹೋದರೆ ತಾಲೂಕು ಮುಂದೆ ಸಾಕಷ್ಟು ನೀರಾವರಿ ಸಮಸ್ಯೆ ಅನುಭವಿಸುತ್ತದೆ, ಅದ್ದರಿಂದ ಬೇರೆ ಶಾಸಕರು ಲಿಂಕ್ ಕೆನಾಲ್ ಕಾಮಗಾರಿ ಅಡ್ಡಿಪಡಿಸದೆ ಕಾಮಗಾರಿಗೆ ಸಹಕಾರ ನೀಡಬೇಕೆಂದರು.
ತಾಪಂ ಮಾಜಿ ಸದಸ್ಯ ಶಿವರಾಮಿ ಮಾತನಾಡಿ, ನಮ್ಮ ಪಾಲಿನ ನೀರು ನಾವು ಪಡೆಯಲು ನಮ್ಮ ಜಿಲ್ಲೆಯವರೊಂದಿಗೆ ಹೋರಾಟ ಮಾಡುವುದರಲ್ಲಿ ಅರ್ಥಇಲ್ಲ, ನೀರಿನ ವಿಷಯದಲ್ಲಿ ರಾಜಕಾರಣ ಬೇಡ, ನಮ್ಮ ಪಾಲಿನ ನೀರು ಪಡೆಯುವುದು ನಮ್ಮ ಹಕ್ಕು ಎಂದರು.
ಬೋರೇಗೌಡ ಮಾತನಾಡಿ ನಮ್ಮ ಪಾಲಿನ ನೀರನ್ನು ಹರಿಸಲು ಬೇರೆ ಶಾಸಕರು ಅಡ್ಡಪಡಿಸುವುದರಲ್ಲಿ ಅರ್ಥಇಲ್ಲ, ಮುಂದಿನ ದಿನಗಳಲ್ಲಿ ಬೃಹತ್ ಸಮ್ಮೇಳನ ನಡೆಸಿ ನೀರಾವರಿ ಹಕ್ಕನ್ನು ಮಂಡಿಸಿ ನೀರು ಹರಿಸಲು ಲಿಂಕ್ ಕೆನಾಲ್ ಕಾಮಗಾರಿ ಜಾರಿಗೊಳಿಸಲು ಸಿದ್ಧತೆ ನಡೆಸಲಾಗುವುದು ಎಂದರು.
ಗ್ರಾಪಂ ಅಧ್ಯಕ್ಷ ರಮೇಶ, ಮಾಜಿ ಅಧ್ಯಕ್ಷ ಕುಮಾರ, ಸದಸ್ಯರಾದ ಚಿ.ಕುಮಾರ, ಹುಚ್ಚೇಗೌಡ, ಪ್ರಮುಖರಾದ ಕಪನಿಗೌಡ, ಕೃಷ್ಣಪ್ಪ, ಚಲುವ ಇತರರು ಇದ್ದರು.
Comments are closed.