ತುಮಕೂರು: ಕೇಂದ್ರದ ಬಜೆಟ್ ನಲ್ಲಿ ರಾಜ್ಯವನ್ನು ಕಡೆಗಣಿಸಲಾಗಿದೆ, ರಾಜ್ಯದ ಬಗ್ಗೆ ಕೇಂದ್ರ ಸರಕಾರ ಮಲತಾಯಿ ಧೋರಣೆ ಮುಂದುವರೆಸಿದೆ, ಚೊಂಬು ನೀಡಿದೆ ಎಂದು ಆಪಾದಿಸಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ ನೇತೃತ್ವದಲ್ಲಿ ಭದ್ರಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
ಜಿಲ್ಲಾ ಕಾಂಗ್ರೆಸ್ ಕಚೇರಿಯಿಂದ ಭದ್ರಮ್ಮ ವೃತ್ತಕ್ಕೆ ತೆರಳಿದ ಕಾಂಗ್ರೆಸ್ ಕಾರ್ಯಕರ್ತರು ತಲೆಯ ಮೇಲೆ, ಕೈಯಲ್ಲಿ ಚೊಂಬು ಪ್ರದರ್ಶಿಸುವ ಮೂಲಕ ಕೇಂದ್ರ ಸರಕಾರ ಈ ಬಾರಿಯೂ ಕರ್ನಾಟಕಕ್ಕೆ ಚೊಂಬು ನೀಡಿದೆ, ರಾಜ್ಯದಿಂದ ಬಿಜೆಪಿಯ 19 ಜನ ಸಂಸತ್ ಸದಸ್ಯರು ಆಯ್ಕೆಯಾಗಿ, ನಾಲ್ವರು ಸಚಿವರಾಗಿದ್ದರೂ ರಾಜ್ಯಕ್ಕೆ ಮಲತಾಯಿ ಧೋರಣೆ ಮುಂದುವೆರಿಸಿದೆ ಎಂದು ಆಪಾದಿಸಿದರು.
ಈ ವೇಳೆ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ, ಕೇಂದ್ರ ಸರಕಾರದಲ್ಲಿ ರಾಜ್ಯದ 4 ಜನ ಮಂತ್ರಿಗಳಿದ್ದಾಗ್ಯೂ ರಾಜ್ಯಕ್ಕೆ ಬಿಜೆಪಿಯಿಂದ ಘನ ಘೋರ ಅನ್ಯಾಯವಾಗಿದೆ, ಮಿತ್ರ ಪಕ್ಷಗಳಿಂದ ಕುರ್ಚ ಉಳಿಸಿಕೊಳ್ಳಲು ಬಿಹಾರ ಮತ್ತು ಆಂಧ್ರ ಪ್ರದೇಶಕ್ಕೆ ಬಜೆಟ್ ನ ಬಹುಪಾಲು ನೀಡಿ ಕರ್ನಾಟಕವನ್ನು ಕಡೆಗಣಿಸಲಾಗಿದೆ, ಇದರ ವಿರುದ್ಧ ಮುಂದಿನ ಮೂರು ದಿನಗಳ ಕಾಲ ಕೇಂದ್ರ ಸರಕಾರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ನಡೆಸಲಿದೆ ಎಂದರು.
ರಾಜ್ಯದ ಬಹು ಪ್ರಮುಖ ನೀರಾವರಿ ಯೋಜನೆಯಾದ ಮೇಕುದಾಟುಗೆ ಅನುಮತಿ ನೀಡಲು ಕೇಂದ್ರ ಸರಕಾರ ನಿರಾಕರಿಸಿದೆ, ಅಲ್ಲದೆ ಚಾಲ್ತಿಯಲ್ಲಿದ್ದ ಹಲವಾರು ಯೋಜನೆಗಳಿಗೆ ಅನುದಾನ ನೀಡಿಲ್ಲ, ಸಚವ ಸೋಮಣ್ಣ ಅವರ ಆರಂಭ ಶೂರತ್ವ ಕೆಲವೇ ದಿನಗಳಲ್ಲಿ ಬಯಲಾಗಿದೆ, ರಾಜ್ಯದ ಜನತೆ ಬಿಜೆಪಿ ಹೆಚ್ಚು ಸ್ಥಾನ ನೀಡಿದ್ದಾರೆ, ಜವಾಬ್ದಾರಿ ಅರಿತು ಕೆಲಸ ಮಾಡಬೇಕಾಗಿದೆ, ರಾಜ್ಯದ ಜನರಿಗೆ ಮೋಸ ಮಾಡುವುದನ್ನು ನಿಲ್ಲಿಸಬೇಕು ಎಂದು ಚಂದ್ರಶೇಖರಗೌಡ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಮುಖಂಡ ಇಕ್ಬಾಲ್ ಅಹಮದ್, ಹಿರಿಯ ಕಾಂಗ್ರೆಸ್ ಮುಖಂಡ ಕೆಂಚಮಾರಯ್ಯ, ಟೂಡಾ ಮಾಜಿ ಅಧ್ಯಕ್ಷ ಸಿದ್ದಲಿಂಗೇಗೌಡ, ಹೆಚ್.ಸಿ.ಹನುಮಂತಯ್ಯ, ವಾಲೆಚಂದ್ರಯ್ಯ, ತರುಣೇಶ್, ಅಸ್ಲಾಂ ಪಾಷ, ಮಂಜುನಾಥ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹೇಶ್, ಸುಜಾತ, ಸಂಜೀವಕುಮಾರ್, ನಟರಾಜ ಶೆಟ್ಟಿ, ಜ್ವಾಲಮಾಲ ರಾಜಣ್ಣ, ರೇವಣ್ಣಸಿದ್ದಯ್ಯ, ಬೋವಿಪಾಳ್ಳ ಉಮೇಶ್, ಕೈದಾಳ ರಮೇಶ್, ಶಿವಾಜಿ, ಗೀತಾ, ಭಾಗ್ಯಮ್ಮ ಇತರರು ಪಾಲ್ಗೊಂಡಿದ್ದರು.
Comments are closed.