ತುಮಕೂರು: ಜಿಲ್ಲೆಯಲ್ಲಿ ಕೊರೋನಾ ಪ್ರಕರಣ ಹೆಚ್ಚುತ್ತಿದ್ದು, ಜನರು ಸ್ವಯಂಪ್ರೇರಿತರಾಗಿ ನೈಟ್ಕರ್ಫ್ಯೂಗೆ ಸಹಕರಿಸಬೇಕು, ಕೊರೊನಾ ನಿಯಂತ್ರಣಕ್ಕೆ ಸಹಕರಿಸುವಂತೆ ಬೆಂಗಳೂರು ಕೇಂದ್ರ ವಿಭಾಗದ ಐಜಿಪಿ ಚಂದ್ರಶೇಖರ್ ಮನವಿ ಮಾಡಿದರು.
ನಗರದ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕೋವಿಡ್ 2ನೇ ಅಲೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಕೋವಿಡ್ ಸಂದರ್ಭದಲ್ಲಿ ಪೊಲೀಸರ ಸುರಕ್ಷತೆ ಅವಶ್ಯಕವಾಗಿದ್ದು, ಪೊಲೀಸ್ ಸಿಬ್ಬಂದಿಗೂ ಈ ಬಗ್ಗೆ ಮಾರ್ಗದರ್ಶನ ನೀಡಲಾಗಿದ್ದು, ತುಮಕೂರು ಜಿಲ್ಲೆಯಲ್ಲಿ ಇದುವರೆಗೆ 9 ಮಂದಿ ಕೋವಿಡ್ 2ನೇ ಅಲೆಗೆ ತುತ್ತಾಗಿದ್ದಾರೆ ಎಂದು ಹೇಳಿದರು.
ಕೋವಿಡ್ ಸಂದರ್ಭದಲ್ಲಿ ಪೊಲೀಸರು ಹೇಗೆ ಸಾರ್ವಜನಿಕರೊಂದಿಗೆ ವರ್ತಿಸಬೇಕು ಎನ್ನುವುದರ ಕುರಿತಂತೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸೂಚಿಸಲಾಗಿದ್ದು, ಕೊರೊನಾ 2ನೇ ಅಲೆಗೆ ಒಳಗಾಗದಂತೆ ಪೊಲೀಸ್ ಸಿಬ್ಬಂದಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಮಟ್ಕಾ ದಂಧೆಗೆ ಬ್ರೇಕ್: ಕೇಂದ್ರ ವಲಯ ವ್ಯಾಪ್ತಿಯಲ್ಲಿ ಮಟ್ಕಾ ದಂಧೆಗೆ ಕಡಿವಾಣ ಹಾಕಲು ಅಗತ್ಯ ಕ್ರಮ ಕೈಗೊಳ್ಳಲಾಗಿದ್ದು, ತುಮಕೂರು ಜಿಲ್ಲೆಯಲ್ಲಿ ಮಟ್ಕಾ ಕಿಂಗ್ಪಿನ್ ಅಶ್ವತ್ಥನನ್ನು ಗೂಂಡಾ ಕಾಯ್ದೆಯಡಿ ಬಂಧಿಸಲಾಗಿದೆ, ಮಟ್ಕಾ ದಂಧೆಕೋರರಿಗೆ ಹೆಡೆಮುರಿ ಕಟ್ಟಲು ಕ್ರಮವಹಿಸಲಾಗಿದ್ದು, ಮಟ್ಕಾ ದಂಧೆಯಲ್ಲಿರುವವರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.
ಮಟ್ಕಾದಂಧೆಗೆ ಬೆಂಬಲ ನೀಡುವ ಪೊಲೀಸರ ಮೇಲೆಯೂ ಶಿಸ್ತುಕ್ರಮ ವಹಿಸಲು ಸೂಚಿಸಲಾಗಿದ್ದು, ಯಾವುದೇ ಕಾರಣಕ್ಕೂ ಮಟ್ಕಾ ದಂಧೆ ಮುಂದುವರೆಸಲು ಅವಕಾಶ ನೀಡುವುದಿಲ್ಲ ಎಂದ ಅವರು ಮಟ್ಕಾ ದಂಧೆಯಲ್ಲಿರುವವರು ಸೈಲೆಂಟಾಗಿ ಸೈಡ್ನಲ್ಲಿದ್ದರೆ ಸರಿ ಇಲ್ಲವಾದರೆ ಕಾನೂನು ಕ್ರಮ ತಪ್ಪಿದ್ದಲ್ಲ ಎಂದು ತಿಳಿಸಿದರು.
ಅಪಘಾತ ನಿಯಂತ್ರಣಕ್ಕೆ ಒತ್ತು: ಶಿರಾ ಮತ್ತು ಕುಣಿಗಲ್ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಹೆಚ್ಚುತ್ತಿರುವ ಅಪಘಾತಗಳ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಜಿಲ್ಲೆಯಲ್ಲಿ ಅಪಘಾತ ವಲಯಗಳನ್ನು ಗುರುತಿಸಿ ಅಪಘಾತ ನಿಯಂತ್ರಣ ಹಾಗೂ ಸಂಚಾರ ದಟ್ಟಣೆ ನಿಯಂತ್ರಿಸಲು ಕ್ರಮ ವಹಿಸಲಾಗಿದ್ದು, ಸರ್ವೀಸ್ ರಸ್ತೆಗಳಲ್ಲಿ ಆಗುತ್ತಿರುವ ಅಪಘಾತದಿಂದ ಹೆಚ್ಚಿನ ಸಾವು ಸಂಭವಿಸುತ್ತಿದ್ದು, ವಾಹನ ಸವಾರರು ಸಂಚಾರಿ ನಿಯಮಗಳನ್ನು ಪಾಲಿಸುವಂತೆ ಸಲಹೆ ನೀಡಿದರು.
ಮೈಸೂರು ಘಟನೆ ನಂತರ ವಾಹನ ಸವಾರರೊಂದಿಗೆ ಸೌಜನ್ಯದಿಂದ ವರ್ತಿಸಲು ಸಂಚಾರಿ ಪೊಲೀಸರಿಗೆ ಸೂಚಿಸಲಾಗಿದೆ, ವಾಹನ ಸವಾರರೊಂದಿಗೆ ಅನುಚಿತವಾಗಿ ವರ್ತಿಸಿದರೆ ಕಾನೂನು ರೀತ್ಯ ಕ್ರಮ ವಹಿಸಲಾಗುವುದು ಎಚ್ಚರಿಕೆ ನೀಡಿದ ಅವರು, ಮುಂದಿನ ದಿನಗಳಲ್ಲಿ ಸಿಸಿಟಿವಿ ಮೂಲಕ ವಾಹನ ಮಾಲೀಕರಿಗೆ ನೋಟೀಸ್ ನೀಡಲಾಗುವುದು, ಮುಂದಿನ ದಿನಗಳಲ್ಲಿ ಪೊಲೀಸ್ ರಹಿತ ವ್ಯವಸ್ಥೆ ಜಾರಿಯಾಗಲಿದೆ ಎಂದು ಹೇಳಿದರು.
ಗಲಭೆ ನಿಯಂತ್ರಣಕ್ಕೆ ಕ್ರಮ: ಜಿಲ್ಲೆಯಲ್ಲಿ ರಾಜಕೀಯ ಪ್ರೇರಿತ ಗಲಭೆಗಳ ನಿಯಂತ್ರಣಕ್ಕೆ ಪೊಲೀಸರು ಅಗತ್ಯ ಕ್ರಮ ಕೈಗೊಂಡಿದ್ದು, ಅಧಿಕಾರಿಗಳಿಗೆ ಗಲಭೆ ನಿಯಂತ್ರಣಕ್ಕೆ ಮಾರ್ಗದರ್ಶನ ಮಾಡಲಾಗುತ್ತಿದೆ ಎಂದ ಅವರು, ತುರುವೇಕೆರೆ ಪ್ರಕರಣದಲ್ಲಿ ಇಬ್ಬರ ಮೇಲೆಯೂ ದೂರು ದಾಖಲಿಸಲಾಗಿದ್ದು, ಯಾರು ಸರಿಯಾಗಿರುತ್ತಾರೋ ಅವರೊಂದಿಗೆ ಪೊಲೀಸರು ಇರುತ್ತಾರೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಪೊಲೀಸ್ ಸಿಬ್ಬಂದಿಗೆ ಪದೋನ್ನತಿ ಸರಿಯಾಗಿ ನಡೆಯುತ್ತಿದ್ದು, ಪದೋನ್ನತಿಯಲ್ಲಿ ತಾರತಮ್ಯ ನಡೆದಿಲ್ಲ ಎಂದ ಅವರು, ಎಸ್ಪಿ ಮತ್ತು ಸಿಬ್ಬಂದಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.
ಮಾದಕ ವಸ್ತು ನಿಯಂತ್ರಣ: ಜಿಲ್ಲೆಯಲ್ಲಿ ಮಾದಕ ವಸ್ತು ಮಾರಾಟಗಾರರನ್ನು ನಿಯಂತ್ರಿಸಲು ಪಿಐಟಿಎನ್ಟಿಪಿಎಸ್ ಅಡಿ ಮಾದಕ ವಸ್ತು ಮಾರಾಟಗಾರರ ಬಂಧಿಸಲಾಗುವುದು, ಮಾರಾಟಗಾರರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಅವಕಾಶವಿದೆ ಎಂದ ಅವರು, ಈಗಾಗಲೇ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮಾದಕ ವಸ್ತು ಮಾರಾಟಗಾರರನ್ನು ಪಿಐಟಿಎಸ್ಟಿಪಿಎಸ್ ಅಡಿ ಬಂಧಿಸಿ ಒಂದು ವರ್ಷ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ ಎಂದು ಹೇಳಿದರು.
ಕಳವು ಪ್ರಕರಣದಲ್ಲಿ ಪೊಲೀಸರು ಸಿ ರಿಪೋರ್ಟ್ ಹಾಕುತ್ತಿರುವ ಬಗ್ಗೆ ಐಜಿಪಿ ಅವರ ಗಮನ ಸೆಳೆದಾಗ ಈ ಬಗ್ಗೆ ಕ್ರಮ ವಹಿಸುವುದಾಗಿ ತಿಳಿಸಿದರು. ಈ ವೇಳೆ ಪೊಲೀಸ್ ವರಿಷ್ಠಾಧಿಕಾರಿ ಡಾ.ವಂಶಿಕೃಷ್ಣ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಉದೇಶ್ ಉಪಸ್ಥಿತರಿದ್ದರು.
ಕೋವಿಡ್ ನಿಯಂತ್ರಣಕ್ಕೆ ಜನರು ಸಹಕರಿಸಲಿ: ಐಜಿಪಿ ಚಂದ್ರಶೇಖರ್
Get real time updates directly on you device, subscribe now.
Comments are closed.