ತುಮಕೂರು: ನಗರದಲ್ಲಿ ಸ್ಮಾರ್ಟ್ ಸಿಟಿ ಲಿಮಿಟೆಡ್ ವತಿಯಿಂದ ನೂತನವಾಗಿ ನಿರ್ಮಾಣವಾಗಿರುವ ದೇವರಾಜ ಅರಸು ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ಶನಿವಾರದಿಂದ ಬಸ್ ಸೇವೆ ಕಾರ್ಯಾರಂಭವಾಯಿತು, ಈ ಸಂದರ್ಭದಲ್ಲಿ ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟದ ಮುಖಂಡರು ನಿಲ್ದಾಣದಲ್ಲಿ ಬೆಳಗ್ಗೆ ಸಂಸ್ಥೆ ಸಿಬ್ಬಂದಿಗೆ, ಪ್ರಯಾಣಿಕರಿಗೆ ಸಿಹಿ, ಗುಲಾಬಿ ಹೂ ವಿತರಿಸಿ ಸಂಭ್ರಮ ಆಚರಿಸಿದರು.
ಈ ವೇಳೆ ಒಕ್ಕೂಟದ ಜಿಲ್ಲಾಧ್ಯಕ್ಷ ಧನಿಯಾಕುಮಾರ್ ಮಾತನಾಡಿ, ಬಸ್ ನಿಲ್ದಾಣದಿಂದ ಬಸ್ ಸೇವೆ ಕಾರ್ಯಾರಂಭ ಮಾಡುತ್ತಿರುವ ಸಂದರ್ಭವನ್ನು ಸಂಭ್ರಮದಿಂದ ಸ್ವಾಗತಿಸುತ್ತಿದ್ದೇವೆ, ಹಿಂದುಳಿದ ವರ್ಗದ ನಾಯಕ ದಿ.ದೇವರಾಜ ಅರಸು ಅವರ ಹೆಸರಿನ ಈ ಬಸ್ ನಿಲ್ದಾಣದಲ್ಲಿ ಅರಸು ಅವರ ಪುತ್ಥಳಿ ಸ್ಥಾಪನೆ ಮಾಡಲು ಸಚಿವ ಕೆ.ಎನ್.ರಾಜಣ್ಣ ಅವರು ಹೇಳಿದ್ದಾರೆ ಎಂದರು.
ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದಾಗ ಇದೇ ಬಸ್ ನಿಲ್ದಾಣ ಜಾಗದಲ್ಲಿ ನಡೆದ ಸಮಾರಂಭದಲ್ಲಿ ಅರಸು ಅವರಿಗೆ ಬೆಳ್ಳಿ ಗದೆ ನೀಡಿ, ಸನ್ಮಾನಿಸಿ ಗೌರವಿಸಲಾಗಿತ್ತು, ಇಂದು ಅವರ ಹೆಸರಿನಲ್ಲಿ ನಿರ್ಮಾಣವಾಗಿರುವ ಬಸ್ ನಿಲ್ದಾಣ ನಗರಕ್ಕೆ ದೊಡ್ಡ ಕೊಡುಗೆಯಾಗಿದೆ ಎಂದರು.
ಒಕ್ಕೂಟದ ಗೌರವಾಧ್ಯಕ್ಷ ಟಿ.ಎನ್.ಮಧುಕರ್, ಉಪಾಧ್ಯಕ್ಷರಾದ ಪಿ.ಮೂರ್ತಿ, ಡಿ.ಎಂ.ಸತೀಶ್, ಪ್ರಧಾನ ಕಾರ್ಯದರ್ಶಿ ಹೆಬ್ಬೂರು ಶ್ರೀನಿವಾಸ ಮೂರ್ತಿ, ಕೆ ಎಸ್ ಆರ್ ಟಿ ಸಿ ವಿಭಾಗೀಯ ನಿಯಂತ್ರಣಾಧಿಕಾರಿ ಚಂದ್ರಶೇಖರ್ ಹಾಗೂ ಸಿಬ್ಬಂದಿ ಹಾಜರಿದ್ದರು.
Comments are closed.