ಕುಣಿಗಲ್: ಲಿಂಕ್ ಕೆನಾಲ್ ಯೋಜನೆ ಕೇವಲ ಹಣಲೂಟಿ ಹೊಡೆಯುವ ಬೋಗಸ್ ಯೋಜನೆ, ಈ ಯೋಜನೆಯಿಂದ ಮುಂದಿನ 15 ವರ್ಷ ಕಳೆದರೂ ಹೇಮೆ ನೀರು ಹರಿಯುವುದಿಲ್ಲ ಎಂದು ಮಾಜಿ ಶಾಸಕ, ಕಾಂಗ್ರೆಸ್ ಮುಖಂಡ ಬಿ.ಬಿ.ರಾಮಸ್ವಾಮಿ ಗೌಡ ಹೇಳಿದರು.
ಶನಿವಾರ ಕಸಾಪ ಸಭಾಂಗಣದಲ್ಲಿ ಪಕ್ಷಾತೀತವಾಗಿ ಹಮ್ಮಿಕೊಳ್ಳಲಾದ ತಾಲೂಕಿನ ಸಮಗ್ರ ನೀರಾವರಿ ಅನುಷ್ಠಾನದ ಸಭೆಯಲ್ಲಿ ಮಾತನಾಡಿ, ಲಿಂಕ್ ಕೆನಾಲ್ ಸಾಧುವಲ್ಲ ಎಂದು ಹಿಂದೆಯೆ ತಾಂತ್ರಿಕ ಸಲಹಾ ಸಮಿತಿ ಹೇಳಿದ್ದರೂ ಅಧಿಕಾರಸ್ಥ ರಾಜಕಾರಣಿಗಳು ಅಧಿಕಾರಿಗಳ ಬೆದರಿಸಿ ಯೋಜನೆಗೆ ಚಾಲನೆ ನೀಡಿದ್ದಾರೆ, ಇದರಲ್ಲಿ ನೀರು ಹರಿಯುವುದಿಲ್ಲ, ಅಲ್ಲದೆ ಯೋಜನೆ ಅನುಷ್ಠಾನಕ್ಕೆ ನೆರೆಯ ತಾಲೂಕಿನವರು ಬಿಡುವುದಿಲ್ಲ, ಯೋಜನೆ ನೆಪದಿ ತಾಲೂಕಿನ ಜನರನ್ನು ಮೂರ್ಖರನ್ನಾಗಿ ಮಾಡುತ್ತಿದ್ದಾರೆ, ತಾಲೂಕಿನ ಜನರು ಎಚ್ಚರಗೊಳ್ಳಬೇಕು, ದೊಡ್ಡಕೆರೆ ನೀರನ್ನು ಪೂರ್ಣವಾಗಿ ಕುಡಿಯಲು ಮೀಸಲಿಟ್ಟಿರುವುದು ಅವೈಜ್ಞಾನಿಕವಾಗಿದೆ ಎಂದರು.
ಮಾಜಿ ಸಚಿವ ಡಿ.ನಾಗರಾಜಯ್ಯ ಮಾತನಾಡಿ, ದೊಡ್ಡಕೆರೆಯ ನೀರು ಪೂರ್ಣವಾಗಿ ಮೀಸಲಿಟ್ಟಿರುವ ಹಿಂದೆ ದೊಡ್ಡಕೆರೆಯ ನೀರನ್ನು ಬೇರೆಡೆ ಕೊಂಡೊಯ್ಯುವ ಹುನ್ನಾರ ಇದೆ, ಹೇಮಾವತಿ ನಾಲೆಯಲ್ಲಿ ವರ್ಷ ಪೂರ್ತಿ ನೀರು ಹರಿದರೆ ಮಾತ್ರ ಲಿಂಕ್ ಕೆನಾಲ್ ಮೂಲಕ ಈ ಕೆರೆಗೆ ನೀರು ಹರಿಸಿ ಅಲ್ಲಿಂದ ಮಾಗಡಿಗೆ ನೀರು ಕೊಂಡೊಯ್ಯಬೇಕು, ಆದರೆ ಇದು ಆಗದ ಕೆಲಸವಾದ್ದರಿಂದ ದೊಡ್ಡಕೆರೆ ನೀರು ಎತ್ತುವಳಿ ಮಾಡಲು ಹುನ್ನಾರ ನಡೆದಿದೆ, ಮಾಗಡಿಗೆ ತಾಲೂಕಿನ ಮೂಲಕ ಹೇಮೆ ನೀರೆ ಬೇಕಾಗಿಲ್ಲ, ಅವರಿಗೆ ಈಗ್ಗಲೂರು ಏತ ನೀರಾ ವರಿಯ ಮೂರು ಮಾರ್ಗದ ಮೂಲಕ ನೀರು ಹರಿಸಬಹುದು, ತಾಲೂಕಿನ ಮೂಲಕ ಅಗತ್ಯವಿಲ್ಲ, ಲಿಂಕ್ ಕೆನಾಲ್ ತಾಲೂಕಿನ ನೀರಾವರಿಗೆ ಮಾತ್ರ ಮೀಸಲಾಗಬೇಕು, ಬೇರೆಡೆಗೆ ಅಂದರೆ ನಮ್ಮ ವಿರೋಧ ಇದೆ, ತಾಲೂಕಿನಲ್ಲಿ ನೆನೆಗುದಿಗೆ ಬಿದ್ದಿರುವ ಮೂಲ ಯೋಜನೆ ನಾಲಾ ಕಾಮಗಾರಿಗೆ ಶಾಸಕರು ಹಣ ನೀಡದೆ 80 ಕೋಟಿ ಅನುದಾನವನ್ನು ರಸ್ತಗೆ ವ್ಯಯಿಸಿ, ಹುಲಿಯೂರು ದುರ್ಗ ಕಡೆಗೆ ನಾಲಾ ಕಾಮಗಾರಿ ಆಗದಂತೆ ಮಾಡಿದ್ದಾರೆ ಎಂದರು.
ರೈತಸಂಘದ ಜಿಲ್ಲಾಧ್ಯಕ್ಷ ಆನಂದ ಪಟೇಲ್ ಮಾತನಾಡಿ, ಶಿಂಷಾ ನದಿ ಮೂಲಕ ವಾರ್ಷಿಕ 13 ಟಿಎಂಸಿ ವ್ಯರ್ಥವಾಗುತ್ತಿದ್ದು 35 ಕೋಟಿ ರೂ. ವೆಚ್ಚ ಮಾಡಿದರೆ ತಾಲೂಕಿನ ಬಹುತೇಕ ಕಡೆಗೆ ನೀರುಣಿಸಬಹುದು, ಹಣ ಲೂಟಿ ಹೊಡೆಯುವ ಉದ್ದೇಶದಿಂದ ಕೆಲ ರಾಕಾರಣಿಗಳು ಕೆಲಸಕ್ಕೆ ಬಾರದ ಯೋಜನೆಗೆ ಮುಂದಾ ಜನರಿಗೆ ಮೋಸ ಮಾಡುತ್ತಿದ್ದಾರೆ ಎಂದರು.
ತಾಲೂಕು ಬಿಜೆಪಿ ಅಧ್ಯಕ್ಷ ಬಲರಾಮ್, ತಾಲೂಕು ಜೆಡಿಎಸ್ ಅಧ್ಯಕ್ಷ ಜಗದೀಶ್, ರೋಟರಿ ಸಂಸ್ಥೆ ಅಧ್ಯಕ್ಷ ಹುಚ್ಚೇಗೌಡ, ಪ್ರಮುಖರಾದ ಶಿವಶಂಕರ್, ರಾಜು ವೆಂಕಟಪ್ಪ, ನಾಗಣ್ಣ, ಶಿವರಾಮ, ಹರೀಶ್, ಹರೀಶ್ ನಾಯಕ, ಶಿವಪ್ರಸಾದ, ಕೋಟೆ ನಾಗಣ್ಣ, ವರದರಾಜು, ಶಿವರಾಮಯ್ಯ, ಕೆಂಪೀರೆಗೌಡ, ನಾರಾಯಣ, ಕಸಾಪ ಅಧ್ಯಕ್ಷ ರಮೇಶ್, ಮಾಜಿ ಅಧ್ಯಕ್ಷ ದಿನೇಶ್ ಇತರರು ಇದ್ದರು.
Comments are closed.