ತುಮಕೂರು: ಗುಣಮಟ್ಟದ ಮೌಲ್ಯಾಧಾರಿತ ಶಿಕ್ಷಣ ನೀಡುವ ಮೂಲಕ ಮಕ್ಕಳನ್ನು ದೇಶದ ಸಂಪತ್ತನ್ನಾಗಿ ರೂಪಿಸಬೇಕು ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ಕರೆ ನೀಡಿದರು.
ನಗರದ ಗುಬ್ಬಿ ವೀರಣ್ಣ ಕಲಾ ಕ್ಷೇತ್ರದಲ್ಲಿ ಶಾಲಾ ಮುಖ್ಯೋಪಾಧ್ಯಾಯರಿಗಾಗಿ ಶನಿವಾರ ಹಮ್ಮಿಕೊಂಡಿದ್ದ ಜಿಲ್ಲಾ ಶೈಕ್ಷಣಿಕ ಬಲವರ್ಧನಾ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ವಿಶ್ವದಲ್ಲಿಯೇ ಅತೀ ಹೆಚ್ಚು ಮಾನವ ಸಂಪನ್ಮೂಲ ಉತ್ಪಾದಿಸುವ ರಾಷ್ಟ್ರ ನಮ್ಮದಾಗಿದ್ದು, ಗುರುಕುಲ ಪದ್ಧತಿಯಿಂದ ಪ್ರಾರಂಭಗೊಂಡು ಈಗಿನ ಆಧುನಿಕ ಭಾರತದ ವಿಶ್ವ ವಿದ್ಯಾಲಯಗಳ ವರೆಗೂ ಇಡೀ ಪ್ರಪಂಚಕ್ಕೆ ಜ್ಞಾನಾರ್ಜನೆ ನೀಡುವ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.
ಸ್ವತಂತ್ರಗೊಂಡ ಸಂದರ್ಭದಲ್ಲಿ ಶೇಕಡಾ 12 ರಷ್ಟಿದ್ದ ದೇಶದ ಸಾಕ್ಷರತೆ ಪ್ರಮಾಣ ಪ್ರಸ್ತುತ ಶೇಕಡಾ 78 ರಷ್ಟು ಹೆಚ್ಚಿರುವುದು ಸರ್ಕಾರ ಕೈಗೊಂಡಿರುವ ಯೋಜನೆಗಳ ಪ್ರತಿಫಲವಾಗಿದೆ, ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ಸಲುವಾಗಿ ಸರ್ಕಾರ ಅನೇಕ ಯೋಜನೆ ಮತ್ತು ನೀತಿಗಳನ್ನು ಜಾರಿಗೆ ತಂದಿದ್ದು, 1986ರಲ್ಲಿ ಮೊದಲ ಶಿಕ್ಷಣ ನೀತಿ ಜಾರಿಗೆ ತರಲಾಯಿತು ಎಂದರು.
ಜಿಲ್ಲೆಯು ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಹಿಂದಿರುವುದಕ್ಕೆ ಬೇಸರಗೊಂಡ ಅವರು ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸುವಂತೆ ಮಕ್ಕಳನ್ನು ತಯಾರು ಮಾಡಬೇಕು, ಜಿಲ್ಲೆಯಲ್ಲಿ 2.5 ಲಕ್ಷಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿದ್ದು, ಅವರ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮ ಕೈಗೊಂಡಿದ್ದರೂ ಫಲಿತಾಂಶದಲ್ಲಿ ಮಾತ್ರ ಹಿಂದುಳಿದಿದ್ದೇವೆ, ಈ ಹಿನ್ನೆಲೆಯಲ್ಲಿ ಶಿಕ್ಷಕರು ಆತ್ಮಾವಲೋಕನ ಮಾಡಿಕೊಂಡು ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಹೊಸ ಶಿಕ್ಷಣ ವಿಧಾನ ಅಳವಡಿಸಿಕೊಳ್ಳುವ ಮೂಲಕ ಜಿಲ್ಲೆಯ ಎಸ್ ಎಸ್ ಎಲ್ ಸಿ ಫಲಿತಾಂಶವನ್ನು ನಂಬರ್ ಒನ್ ಸ್ಥಾನಕ್ಕೆ ತರುವಲ್ಲಿ ಕಾರ್ಯ ಪ್ರವೃತ್ತರಾಗಬೇಕು ಎಂದರು.
ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮಾತನಾಡಿ, ಶಿಕ್ಷಣದ ಬೇರು ಕಹಿಯಾಗಿದ್ದರೂ ಫಲ ಮಾತ್ರ ಸಿಹಿಯಾಗಿರುತ್ತದೆ ಎಂಬ ತತ್ವಜ್ಞಾನಿ ಅರಿಸ್ಟಾಟಲ್ ಅವರ ಸಂದೇಶವನ್ನು ಮಕ್ಕಳಿಗೆ ಶಿಕ್ಷಕರು ಮನನ ಮಾಡಬೇಕು, ಈ ಸಿಹಿಯಾದ ಫಲ ಮಕ್ಕಳಿಗೆ ದೊರೆಯುವಂತೆ ಮಾಡುವ ಸಂಪೂರ್ಣ ಜವಾಬ್ದಾರಿ ಶಿಕ್ಷಕರ ಮೇಲಿದೆ, ಮಕ್ಕಳು ದಿನದ ಮುಕ್ಕಾಲು ಭಾಗ ಶಾಲೆಯಲ್ಲಿಯೇ ಕಳೆಯುವುದರಿಂದ ಮಕ್ಕಳಿಗೆ ಜ್ಞಾನದ ಬೀಜವ ಬಿತ್ತುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಬೇಕು ಎಂದರು.
ಜಿಲ್ಲಾ ಪಂಚಾಯತ್ ಸಿಇಒ ಜಿ.ಪ್ರಭು ಮಾತನಾಡಿ, ಮಕ್ಕಳ ಕಲಿಕಾ ಮಕ್ಕಳನ್ನು ಸುಧಾರಿಸುವ ನಿಟ್ಟಿನಲ್ಲಿ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗಾಗಿ ಜ್ಞಾನ ಸಂವರ್ಧನಾ ಕಲಿಕಾ ವ್ಯವಸ್ಥೆ ತರಲು ಹಾಗೂ ಶಿಕ್ಷಕರ ಕಾರ್ಯ ಕ್ಷಮತೆ ಹೆಚ್ಚಿಸಲು ವಿನೂತನ ಕಾರ್ಯಕ್ರಮ ಯೋಜಿಸಲಾಗಿದೆ, ಇದರಿಂದ ಬೋಧನಾ ಕಲಿಕಾ ವಿಧಾನಗಳಲ್ಲಿ ಗಮನಾರ್ಹ ಬದಲಾವಣೆ ತರಬಹುದಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗಾಗಿ ಸಿದ್ಧಪಡಿಸಿರುವ ಶೈಕ್ಷಣಿಕ ಕೈಪಿಡಿ ಬಿಡುಗಡೆ ಮಾಡಲಾಯಿತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ. ಕರಾಳೆ, ಜಿಪಂ ಮುಖ್ಯ ಯೋಜನಾಧಿಕಾರಿ ಸಣ್ಣ ಮಸಿಯಪ್ಪ ಇತರರು ಇದ್ದರು.
Comments are closed.