ಸಿದ್ಧಿವಿನಾಯಕ ಮಾರುಕಟ್ಟೆ ಜಾಗದಲ್ಲಿ ಮಾಲ್ ಬೇಡ

ಸರ್ಕಾರದ ಧೋರಣೆಗೆ ಶಾಸಕರಾದ ಸುರೇಶ್ಗೌಡ, ಜ್ಯೋತಿಗಣೇಶ್ ಕಿಡಿ

19

Get real time updates directly on you device, subscribe now.


ತುಮಕೂರು: ನಗರದ ಸಿದ್ಧಿವಿನಾಯಕ ಮಾರುಕಟ್ಟೆ ಪ್ರದೇಶದಲ್ಲಿ ಸರ್ಕಾರದ ವತಿಯಿಂದ ಕೈಗೊಳ್ಳುತ್ತಿರುವ ಮಲ್ಟಿ ಯುಟಿಲಿಟಿ ಮಾಲ್ ವಿತ್ ಕಾರ್ ಪಾಕಿಂಗ್ ಯೋಜನೆಯನ್ನು ಸ್ಥಳೀಯ ಸಾರ್ವಜನಿಕರು, ಸಂಘ ಸಂಸ್ಥೆಗಳ ಅಭಿಪ್ರಾಯದಂತೆ ಕೈ ಬಿಡುವಂತೆ ಒತ್ತಾಯಿಸಿ ಶನಿವಾರ ಬಿಜೆಪಿ ಶಾಸಕ ಜಿ.ಬಿ.ಜ್ಯೋತಿಗಣೇಶ್ ಹಾಗೂ ಗ್ರಾಮಾಂತರ ಶಾಸಕ ಬಿ.ಸುರೇಶಗೌಡ ಅವರು ಬಿಜೆಪಿ ನಾಯಕರು, ಸ್ಥಳೀಯ ಸಂಘ ಸಂಸ್ಥೆಗಳು, ನಾಗರಿಕರೊಂದಿಗೆ ಪ್ರತಿಭಟನೆ ನಡೆಸಿದರು.
ಸ್ಥಳೀಯರ ಅಭಿಪ್ರಾಯಕ್ಕೆ ಮನ್ನಣೆ ನೀಡದೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಅವರು ಸಿದ್ಧಿ ವಿನಾಯಕ ಮರುಕಟ್ಟೆ ಪ್ರದೇಶದಲ್ಲಿ ಮಲ್ಟಿ ಯುಟಿಲಿಟಿ ಮಾಲ್ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು, ಈ ಯೋಜನೆ ಕೈಬಿಡುವಂತೆ ಒತ್ತಾಯಿಸಿ, ಸಚಿವರಿಗೆ ಮನವಿ ಮಾಡಲು ಮಾರುಕಟ್ಟೆ ಸ್ಥಳಕ್ಕೆ ಹೊರಟಾಗ ಪೊಲೀಸರು ಬಿಜಿಎಸ್ ವೃತ್ತದಲ್ಲಿ ತಡೆದರು.

ಈ ವೇಳೆ ಬಿಜೆಪಿ ಮುಖಂಡರು ಹಾಗೂ ಸಿದ್ಧಿವಿನಾಯಕ ಮಾರುಕಟ್ಟೆಯ ಸುತ್ತಮುತ್ತಲಿನ ವ್ಯಾಪಾರಸ್ಥರು, ಸಾರ್ವಜನಿಕರು ಪೊಲೀಸರು ನಡುವೆ ಮಾತಿನ ಜಟಾಪಟಿ ನಡೆಯಿತು, ನಾವು ಶಾಂತಿಯುತವಾಗಿ ಹೋಗಿ ಸಚಿವರಿಗೆ ಮನವಿ ಸಲ್ಲಿಸುವುದಾಗಿ ಹೇಳಿದರೂ ಪೊಲೀಸರು ಅವಕಾಶ ಮಾಡಿಕೊಡಲಿಲ್ಲ, ಇದರಿಂದ ಸಿಟ್ಟಿಗೆದ್ದ ಮುಖಂಡರು ಪೊಲೀಸರನ್ನು ಭೇದಿಸಿ ಹೊರಟಾಗಿ ಪೊಲೀಸರು ಎಲ್ಲಾ ಮುಖಂಡರನ್ನು ಬಂಧಿಸಿ ವಶಕ್ಕೆ ಪಡೆದು ಚಿಲುಮೆ ಪೊಲೀಸ್ ಸಮುದಾಯ ಭವನಕ್ಕೆ ಕರೆದೊಯ್ದರು, ಈ ನಡುವೆ ಸಚಿವ ಡಾ.ಪರಮೇಶ್ವರ್ ಅವರು ಸಿದ್ಧಿ ವಿನಾಯಕ ಮಾರುಕಟ್ಟೆ ಪ್ರದೇಶದಲ್ಲಿ ಮಾಲ್ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.

ಜ್ಯೋತಿಗಣೇಶ್, ಸುರೇಶ ಗೌಡ ಮಾರುಕಟ್ಟೆಗೆ ಭೇಟಿ
ವಶದಲ್ಲಿದ್ದ ಬಿಜೆಪಿ ಮುಖಂಡರನ್ನು ಪೊಲೀಸರು ಬಿಡುಗಡೆ ಮಾಡಿದರು, ನಂತರ ಸಿದ್ಧಿ ವಿನಾಯಕ ಮಾರುಕಟ್ಟೆ ಪ್ರದೇಶಕ್ಕೆ ಆಗಮಿಸಿದ ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಬಿ.ಸುರೇಶ್ ಗೌಡರು, ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್.ರವಿಶಂಕರ್ ಹೆಬ್ಬಾಕ ಹಾಗೂ ಮುಖಂಡರು ಸರ್ಕಾರದ ಕ್ರಮ ಖಂಡಿಸಿದರು.
ಶಾಸಕ ಬಿ.ಸುರೇಶ್ ಗೌಡ ಮಾತನಾಡಿ, ಈ ಜಾಗದಲ್ಲಿ ಹಣ್ಣು, ಹೂವು, ತರಕಾರಿ ವ್ಯಾಪಾರ ಮಾಡುವ ಸಣ್ಣ ವ್ಯಾಪಾರಿಗಳಿಗೆ ಅವಕಾಶ ಮಾಡಿಕೊಡಬೇಕು, ಉದ್ದೇಶಿದ ಮಾಲ್ ನಿರ್ಮಾಣದ ಯೋಜನೆ ಕೈಬಿಡಬೇಕು, ಬಡವರಿಗೆ ಅನ್ಯಾಯ ಮಾಡಿ, ಶ್ರೀಮಂತರಿಗೆ ಅನುಕೂಲ ಮಾಡುವ ಮೂಲಕ ಸರ್ಕಾರ ಬಡವರ ವಿರೋಧಿ ಧೋರಣೆ ಕೈಬಿಡಬೇಕು ಎಂದು ಒತ್ತಾಯಿಸಿದರು.

ಶಾಸಕ ಬಿ.ಬಿ.ಜ್ಯೋತಿಗಣೇಶ್ ಮಾತನಾಡಿ, ಸ್ಥಳಿಯ ನಾಗರಿಕರು, ಸಂಘ ಸಂಸ್ಥೆಗಳ ಅಭಿಪ್ರಾಯದಂತೆ ಇಲ್ಲಿ ಮಾಲ್ ನಿರ್ಮಾಣ ಯೋಜನೆ ಸ್ಥಗಿತಗೊಳಿಸಲಾಗಿತ್ತು, ಆದರೆ ಸಚಿವರು ಏಕಾಏಕಿ ಪೊಲೀಸರ ಬಂದೋಬಸ್ತಿನಲ್ಲಿ ಮಾಲ್ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ, ಆದರೆ ಕಟ್ಟಡ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ ಎಂದರು.
ಶ್ರೀಸಿದ್ಧಿವಿನಾಯಕ ಮಾರುಕಟ್ಟೆ ಸುತ್ತಮುತ್ತಲಿನ ವ್ಯಾಪಾರಸ್ಥರು, ಸಂಘ ಸಂಸ್ಥೆಗಳು, ಹಲವು ಬಿಜೆಪಿ ಮುಖಂಡರು, ನಾಗರಿಕರು ಈ ಹೋರಾಟದಲ್ಲಿ ಭಾಗಿಯಾಗಿದ್ದರು.

Get real time updates directly on you device, subscribe now.

Comments are closed.

error: Content is protected !!