ತುಮಕೂರು: ಗೊರೂರು ಜಲಾಶಯದಿಂದ ಹರಿದು ಬರುತ್ತಿರುವ ಹೇಮಾವತಿ ನೀರು ತುಮಕೂರಿನಿಂದ ಹಾದು ಕುಣಿಗಲ್ ಗೆ ಹರಿದಿದೆ ಎಂದು ನೀರಾವರಿ ಹೋರಾಟಗಾರ ಮತ್ತು ಮಾಜಿ ಸಚಿವ ಸೊಗಡು ಶಿವಣ್ಣ ತಿಳಿಸಿದ್ದಾರೆ.
ಕುಣಿಗಲ್ ನ ಸೋಬಾನ ಹಳ್ಳಿ ಬಳಿಯ ಚಾನಲ್ ಪ್ರದೇಶಕ್ಕೆ ಭೇಟಿ ನೀಡಿ ಕುಣಿಗಲ್ ದೊಡ್ಡ ಕೆರೆಗೆ ಹೇಮಾವತಿ ನೀರು ಹರಿದು ಹೋಗುತ್ತಿರುವುದನ್ನು ವೀಕ್ಷಿಸಿದರು.
ಕುಣಿಗಲ್ ದೊಡ್ಡ ಕೆರೆ ಬಳಿಯ ಚಾನಲ್ ಗೇಟ್ ತೆರೆದರೆ ಈಗಾಗಲೇ ಆಧುನಿಕರಣಗೊಂಡಿರುವ ಚಾಲನ್ 192 ಕಿ.ಮೀ. ನಿಂದ ಕುಣಿಗಲ್ ನ ಹುತ್ತರಿದುರ್ಗ ಮತ್ತು ಹುಲಿಯೂರು ದುರ್ಗಕ್ಕೂ ಹೇಮಾವತಿ ನೀರನ್ನು ಹರಿಸಬಹುದೆಂದು ಸೊಗಡು ಶಿವಣ್ಣ ತಿಳಿಸಿದ್ದಾರೆ.
ಗೊರೂರು ಜಲಾಶಯಕ್ಕೆ ಮಳೆ ಪ್ರಾರಂಭಗೊಂಡ ನಂತರ ಹಾಸನದ ಗೊರೂರು ಹೇಮಾವತಿ ಡ್ಯಾಂ ಖುದ್ದು ವೀಕ್ಷಿಸಿ, ಕಳೆದ ಜುಲೈ ಒಂದರಂದೇ ಡ್ಯಾಂನಲ್ಲಿ ಸುಮಾರು 13.40 ಟಿಎಂಸಿ ನೀರು ಸಂಗ್ರಹವಾದಾಗಲೆ ಹೇಮಾವತಿ ನೀರನ್ನು
ತುಮಕೂರು ಜಿಲ್ಲೆಗೆ ಹರಿಸಲು ತುಮಕೂರು ಮತ್ತು ಹಾಸನ ಜಿಲ್ಲಾ ಉಸ್ತುವಾರಿ ಸಚಿವರಲ್ಲಿ ಒತ್ತಾಯಿಸಿದ್ದೆ, ಆದರೆ ಡ್ಯಾಂನಲ್ಲಿ ಸಂಗ್ರಹವಾದ ನೀರನ್ನು ಕೆ ಆರ್ ಎಸ್ ಮೂಲಕ ತಮಿಳುನಾಡಿಗೆ ನೀರು ಹರಿದಿರುವ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದರು, ಗೊರೂರು ಜಲಾಶಯ 34 ಟಿಎಂಸಿ ಭರ್ತಿಯಾಗಿ ಒಳ ಅರಿವು ಜಾಸ್ತಿಯಾದ ನಂತರ ಬಾಗೂರು ನವಿಲೆ ಬಳಿ ಅಲ್ಪ ಪ್ರಮಾಣದ ಕಾಮಗಾರಿ ಕೆಲಸವನ್ನು ನೀರು ಹರಿಯದ ಬೇಸಿಗೆ ಅವಧಿಯಲ್ಲಿ ಕಾಮಗಾರಿ ಕೆಲಸ ಮಾಡದೆ, ಕಾಮಗಾರಿ ನೆಪ ಒಡ್ಡಿ, ತುಮಕೂರು ಜಿಲ್ಲೆ ನೀರು ಹರಿಸಲು ವಿಳಂಬ ಮಾಡಿದ್ದರಿಂದ ಕಳೆದ ಶುಕ್ರವಾರ, ಶನಿವಾರ, ಭಾನುವಾರದಂದು ಡ್ಯಾಂನಿಂದ ತುಮಕೂರು ಜಿಲ್ಲೆಗೆ ಹರಿದು ಬರುವ ಚಾನಲ್ 72 ಕಿ.ಮೀ.ನ ಬಾಗೂರು ನವಿಲೆ ಬಳಿ ಮೂರು ದಿವಸ ಮಳೆ, ಗಾಳಿ ಲೆಕ್ಕಿಸದೆ ಸ್ವಯಂ ಠಿಕಾಣಿ ಹೂಡಿ ಸರ್ಕಾರ ಮತ್ತು ಅಧಿಕಾರಿಗಳ ಮೇಲೆ ಒತ್ತಡ ಹೇರಿದ್ದರ ಪರಿಣಾಮವಾಗಿ ತುಮಕೂರು ಭಾಗಕ್ಕೆ ನೀರು ಹರಿಸಲು ಸಾಧ್ಯವಾಯಿತು ಎಂಬುದರ ಮಾಹಿತಿ ನೀಡಿದರು.
ಕಳೆದ ಜುಲೈ ಆರಂಭದಿಂದಲೇ ಜಿಲ್ಲೆಗೆ ನೀರು ಹರಿದಿದ್ದರೆ ಜಿಲ್ಲೆಯ ಪಾಲಿನ 25 ಟಿಎಂಸಿಯಲ್ಲಿ ಕುಣಿಗಲ್ ಹಂಚಿಕೆಯ 3 ಟಿಎಂಸಿ ಪೂರ್ಣ ಪ್ರಮಾಣದ ನೀರು ಹರಿಸಬಹುದಾಗಿತ್ತು, ನಂತರ ಜಿಲ್ಲೆಯ ತಿಪಟೂರು, ಚಿಕ್ಕನಾಯಕನ ಹಳ್ಳಿ, ಗುಬ್ಬಿ, ತುರುವೇಕೆರೆ, ತುಮಕೂರು ನಗರ ಹಾಗೂ ಗ್ರಾಮಾಂತರ, ಕೊರಟಗೆರೆ, ಮಧುಗಿರಿ ಶಿರಾದ ಬಹುತೇಕ ಕೆರೆಗಳಿಗೆ ನೀರು ತುಂಬಿಸಲು ಸಾಧ್ಯವಾಗುತ್ತಿತ್ತು ಎಂದು ಸೊಗಡು ಶಿವಣ್ಣ ವ್ಯಾಖ್ಯಾನಿಸಿದ್ದಾರೆ.
ಈ ಸಂದರ್ಭದಲ್ಲಿ ಪ್ರಮುಖರಾದ ಪಂಚಾಕ್ಷರಯ್ಯ, ಧನಿಯಾ ಕುಮಾರ್, ಸ್ಥಳೀಯರಾದ ಆಕಾಶ್, ಶಶಾಂತ್ ಇದ್ದರು.
Comments are closed.