ಕುಣಿಗಲ್: ಪುರಸಭೆಯ ಜಾಗ ಸಂರಕ್ಷಣೆ ಮಾಡುವಲ್ಲಿ ಪುರ ಸಭಾಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವ ಬಗ್ಗೆ ಜನಸ್ಪಂದನ ಕಾರ್ಯಕ್ರಮದಲ್ಲಿ ದೂರು ಅರ್ಜಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಪೌರಾಡಳಿತ ನಿರ್ದೇಶಕರ ಸೂಚನೆ ಮೇರೆಗೆ ಅಧಿಕಾರಿಗಳ ತಂಡ ಆಗಮಿಸಿ ಪರಿಶೀಲನೆ ನಡೆಸಿತು.
ಪುರಸಭೆಯ ಮೂರನೆ ವಾರ್ಡ್ನಲ್ಲಿ ಅಂಗನವಾಡಿ ಕೇಂದ್ರವೂ ಶಿಥಿಲವಾದ ಖಾಸಗಿ ಕಟ್ಟಡದಲ್ಲಿ ನಡೆಯುತ್ತಿದ್ದು ಸದರಿ ಪ್ರದೇಶದಲ್ಲಿ ಪುರಸಭೆಗೆ ಸೇರಿದ ಜಾಗ ಗುರುತಿಸಿ ಕೊಡುವಂತೆ ನಾಗರಿಕರು, ಸಂಬಂಧಿಸಿದ ಮಕ್ಕಳ ಅಭಿವೃದ್ಧಿ ಇಲಾಖೆಯವರು ಹಲವಾರು ಬಾರಿ ಅರ್ಜಿ ನೀಡಿದ್ದರೂ ಪುರಸಭೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿರಲಿಲ್ಲ, ಈಬಗ್ಗೆ ದಿನೇಶ್ ಎಂಬುವರು ಪುರಸಭೆ ದಾಖಲೆಯಲ್ಲಿ ಮೂರನೇ ವಾರ್ಡ್ನಲ್ಲಿ 50*40 ಅಡಿ ಉಳ್ಳ ಪುರಸಭೆ ನಿವೇಶನ ಇದ್ದು ಸದರಿ ನಿವೇಶನ ಸಾರ್ವಜನಿಕ ಬಳಕೆಗೆ ನೀಡುವಂತೆ, ಒತ್ತುವರಿ ತೆರವುಗೊಳಿಸುವಂತೆ ಅರ್ಜಿ ಸಲ್ಲಿಸಿದ್ದರು.
ಆದರೆ ಪುರಸಭೆ ಮುಖ್ಯಾಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದ ಕಾರಣ 2023ರ ಅಕ್ಟೋಬರ್ ನಲ್ಲಿ ಪಟ್ಟಣದಲ್ಲಿ ನಡೆದಿದ್ದ ಜನಸ್ಪಂದನ ಸಭೆಯಲ್ಲಿ ದೂರು ಸಲ್ಲಿಸಿದ್ದರು, ಜನಸ್ಪಂದನ ಕಾರ್ಯಕ್ರಮದಲ್ಲಿ ಯಾವುದೇ ಕ್ರಮವಾಗದ ಕಾರಣ 2024ರ ಜೂನ್ ಮಾಹೆಯಲ್ಲಿ ಕೆಂಪನಹಳ್ಳಿಯಲ್ಲಿ ನಡೆದ ಜನಸ್ಪಂದನ ಸಭೆಯಲ್ಲಿ ದೂರು ನೀಡಿ ಪುರಸಭೆ ಜಾಗ ಸಂರಕ್ಷಣೆ ಮಾಡುವಲ್ಲಿ ವಿಫಲರಾದ ಅಧಿಕಾರಿಗಳ ಮೇಲೆ ಕ್ರಮ ಜರುಗಿಸುವಂತೆ ದೂರು ನೀಡಿ ಆಗ್ರಹಿಸಿದ್ದ ಮೇರೆಗೆ ಪೌರಾಡಳಿತ ನಿರ್ದೇಶಕರ ಸೂಚನೆ ಮೇರೆಗೆ ಅಧಿಕಾರಿಗಳ ತಂಡ ಆಗಮಿಸಿ, ಪುರಸಭೆ ಮುಖ್ಯಾಧಿಕಾರಿಗಳ ಗೈರಿನಲ್ಲಿ ಸಂಬಂಧಿಸಿದ ದಾಖಲೆ, ಕಡತಗಳ ಪರಿಶೀಲನೆ ನಡೆಸಿದ್ದು ಕಂದಾಯ ವಿಭಾಗದ ಕಂದಾಯ ನಿರೀಕ್ಷಕ ಮುನಿಯಪ್ಪ ಮತ್ತು ಸಿಬ್ಬಂದಿಯಿಂದ ಮಾಹಿತಿ ಪಡೆದರು, ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಮಹಜರು ಮಾಡಿ ತೆರಳಿದರು.
ಈ ಮಧ್ಯೆ ಪುರಸಭೆ ಅಕ್ರಮಗಳ ಬಗ್ಗೆಯೂ ವ್ಯಾಪಕ ದೂರು ಸಲ್ಲಿಕೆಯಾಗಿರುವ ಹಿನ್ನೆಲೆಯಲ್ಲಿ ಅವುಗಳ ಬಗ್ಗೆಯೂ ಸಮಗ್ರ ತನಿಖೆ ನಡೆಯಲಿದ್ದು ಇಲಾಖಾ ಮೇಲಾಧಿಕಾರಿಗಳ ಭೇಟಿ ಇನ್ನು ಮೂರು ನಾಲ್ಕು ದಿನ ಮುಂದುವರೆಯಲಿದೆ ಎನ್ನಲಾಗುತ್ತಿದೆ.
Comments are closed.