ತುಮಕೂರು: ಸಮಾಜದಲ್ಲಿ ನಡೆಯುವ ಅನ್ಯಾಯ, ಅಧರ್ಮವನ್ನು ಕಂಡು ನಮಗೇಕೆ ಊರ ಉಸಾಬರಿ? ಎಂದು ಉದಾಸೀನ ತಾಳದೆ ಕೂಡಲೇ ಅದನ್ನು ಪ್ರಶ್ನಿಸಬೇಕು ಹಾಗೂ ಪ್ರತಿಭಟಿಸಬೇಕು, ಇದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ ಎಂದು ಭೀಮನಕಟ್ಟೆ ಮಠದ ಪೀಠಾಧಿಪತಿ ರಘುವರೇಂದ್ರತೀರ್ಥ ಶ್ರೀಪಾದಂಗಳು ಅಭಿಪ್ರಾಯಪಟ್ಟರು.
ತುಮಕೂರಿನ ಶ್ರೀಕೃಷ್ಣ ಮಂದಿರದಲ್ಲಿ ತಮ್ಮ 16ನೇ ವರ್ಷದ ಚಾತುರ್ಮಾಸ್ಯದ ಅಂಗವಾಗಿ ಏರ್ಪಟ್ಟಿರುವ ನಿತ್ಯಜ್ಞಾನಯಜ್ಞ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ, ಮನುಷ್ಯ ಜೀವನದಲ್ಲಿ ಪ್ರಾಮಾಣಿಕನಾಗಿರಬೇಕು, ಆಗ ದೇವರೂ ಕೂಡ ಪ್ರಾಮಾಣಿಕರನ್ನು ರಕ್ಷಿಸುತ್ತಾನೆ, ಅನ್ಯಾಯ ನಡೆಯುವುದು ಕಂಡಾಗ ಒಬ್ಬರೇ ಆದರೂ ಪ್ರತಿಭಟಿಸಬೇಕು, ನಾವು ಏಕಾಂಗಿ ಎಂದು ಚಿಂತೆ ಪಡಬೇಕಿಲ್ಲ, ಒಬ್ಬರು ಪ್ರತಿಭಟಿಸಿದರೆ ನಂತರ ಒಬ್ಬೊಬ್ಬರಾಗಿ ಬಂದು ಜೊತೆ ಸೇರುತ್ತಾರೆ, ಆಗ ಎಲ್ಲರೂ ಸೇರಿ ಅನ್ಯಾಯ ತಡೆಯಬಹುದು, ಯಾರೂ ಪ್ರತಿಭಟಿಸದಿದ್ದರೆ ಅನ್ಯಾಯ ನಿಲ್ಲಿಸುವುದು ಹೇಗೆ? ಆದ್ದರಿಂದ ಅನ್ಯಾಯ ಹಾಗೂ ಅಧರ್ಮದ ವಿರುದ್ಧ ಧ್ವನಿಯೆತ್ತಲೇ ಬೇಕು, ಪ್ರತಿಭಟಿಸದೇ ಹೋದರೆ ಅದೂ ಕೂಡ ಪಾಪ ಎಂದರು.
ಮಹಾಭಾರತದಲ್ಲಿ ಭೀಮನ ಪಾತ್ರ ಕುರಿತು ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದ ವಿದ್ವಾಂಸರೂ, ವಾಗ್ಮಿಗಳೂ ಆದ ಕೃಷ್ಣರಾಜ ಆಚಾರ್ಯ ಕುತ್ಪಾಡಿ ವಿಶೇಷ ಉಪನ್ಯಾಸ ನೀಡುತ್ತಾ, ಭೀಮ ಎಂದ ಕೂಡಲೇ ನಮಗೆ ದೊಡ್ಡದೇಹ, ಹೊಟ್ಟೆಬಾಕ, ಕೌರವರನ್ನು ಕೊಂದವನು ಹೀಗೆ ಹಲವು ಕಲ್ಪನೆಗಳು ಬರುತ್ತವೆ, ಆದರೆ ಭೀಮನ ಪಾತ್ರ ವಿಶಿಷ್ಟವಾದದ್ದು, ಮಹಾ ಭಾರತದಲ್ಲಿ ಅವನ ವ್ಯಕ್ತಿತ್ವವನ್ನು ಬಹಳ ಸುಂದರವಾಗಿ ವರ್ಣಿಸಲಾಗಿದೆ, ಭೀಮ ಬಹುದೊಡ್ಡ ಜ್ಞಾನಿ, ಕರ್ತವ್ಯಪ್ರಜ್ಞೆಯುಳ್ಳವನು, ಅವನು ಪ್ರತಿಯೊಂದು ಕೆಲಸವನ್ನೂ ಕ್ಷತ್ರಿಯರ ಕರ್ತವ್ಯ ಎಂದೇ ಚಾಚೂತಪ್ಪದೆ ಮಾಡಿದನು, ಬಕಾಸುರನನ್ನು ವಧಿಸಿ ಏಕಚಕ್ರಾ ನಗರದ ಜನರನ್ನು ರಕ್ಷಿಸಬೇಕಾದುದು ಕ್ಷತ್ರಿಯನಾದ ತನ್ನ ಕರ್ತವ್ಯ ಎಂದು ಕ್ಷತ್ರಿಯ ಧರ್ಮವನ್ನು ಎತ್ತಿ ಹಿಡಿದನು, ಯುಧಿಷ್ಟಿರ ಯುದ್ಧ ಮಾಡುವುದಿಲ್ಲ ಎಂದಾಗ ಅಧರ್ಮಿಗಳ ವಿರುದ್ಧ ಹೋರಾಡಿ ಧರ್ಮವನ್ನು ರಕ್ಷಿಸಬೇಕಾದುದು ಕ್ಷತ್ರಿಯರ ಕರ್ತವ್ಯ ಎಂದು ತಿಳಿ ಹೇಳಿದನು, ತುಂಬಿದ ಸಭೆಯಲ್ಲಿ ದ್ರೌಪದಿಯ ಮಾನ ಹರಣವಾದಾಗ ಭೀಷ್ಮ, ದ್ರೋಣಾದಿಗಳು ಸೇರಿದಂತೆ ಯಾರೂ ಪ್ರತಿಭಟಿಸಲಿಲ್ಲ, ಆದರೆ ಪ್ರತಿಭಟಿಸಿದ ಏಕೈಕ ವ್ಯಕ್ತಿ ಭೀಮ, ಹೀಗೆ ಮಹಾ ಭಾರತದಲ್ಲಿ ಭೀಮನು ಧರ್ಮ ಮತ್ತು ಕರ್ತವ್ಯದ ಸಾಕಾರಮೂರ್ತಿಯಾಗಿ ಚಿತ್ರಿಸಲ್ಪಟ್ಟಿದ್ದಾನೆ ಎಂದು ಕೃಷ್ಣರಾಜ ಆಚಾರ್ಯ ಸುದೀರ್ಘವಾಗಿ ವಿವರಿಸಿದರು.
ಕೃಷ್ಣಮಂದಿರದ ಅಧ್ಯಕ್ಷ ಶ್ರೀನಿವಾಸ ಹತ್ವಾರ್, ಜಿ.ಕೆ.ಶ್ರೀನಿವಾಸ್, ನಾಗರಾಜಧನ್ಯ, ವಿದ್ವಾನ್ ಜನಾರ್ಧನಭಟ್, ಕೆ.ವಿ.ಕುಮಾರ್, ಗುರುಪ್ರಸಾದ್ ಸೇರಿದಂತೆ ನೂರಾರು ಭಕ್ತಾದಿಗಳು ಪಾಲ್ಗೊಂಡಿದ್ದರು.
Comments are closed.