ತುಮಕೂರು: ನಗರದ ಸಿದ್ಧಿವಿನಾಯಕ ತರಕಾರಿ ಮತ್ತು ಹೂವು ಮಾರುಕಟ್ಟೆ ಆವರಣದಲ್ಲಿ ಮಲ್ಟಿ ಯುಟಿಲಿಟಿ ಮಾಲ್ ವಿತ್ ಪಾರ್ಕಿಂಗ್ ನಿರ್ಮಾಣ ಯೋಜನೆ ವಿರುದ್ಧ ಮಂಗಳವಾರ ಶಾಸಕರಾದ ಬಿ.ಸುರೇಶ್ ಗೌಡ, ಜಿ.ಬಿ.ಜ್ಯೋತಿಗಣೇಶ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್.ರವಿಶಂಕರ್ ನೇತೃತ್ವದಲ್ಲಿ ಸ್ಥಳೀಯ ವ್ಯಾಪಾರಿಗಳು, ಸಂಘ ಸಂಸ್ಥೆಗಳ ಪ್ರಮುಖರು ಮಾರುಕಟ್ಟೆ ಆವರಣದ ಗಣಪತಿ ದೇವಸ್ಥಾನದ ಎದುರು ಧರಣಿ ನಡೆಸಿ ಹೋರಾಟ ಮುಂದುವರೆಸಿದರು.
ಹೋರಾಟಕ್ಕೆ ಮಣಿದ ಅಧಿಕಾರಿಗಳು ಮುಂದಿನ ತೀರ್ಮಾನದವರೆಗೂ ಮಾರುಕಟ್ಟೆ ಆವರಣದಲ್ಲಿ ಆರಂಭವಾಗಿದ್ದ ಕೆಲಸ ಸ್ಥಗಿತಗೊಳಿಸಿಲು ಸೂಚಿಸಿದರು.
ಹೋರಾಟದ ಹಿನ್ನೆಲೆಯಲ್ಲಿ ಮಾರುಕಟ್ಟೆ ಆವರಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು, ಪಶ್ಚಿಮ ಭಾಗದ ರಸ್ತೆಗೆ ಅಡ್ಡಲಾಗಿ ಬ್ಯಾರಿಕೇಡ್ ಗಳನ್ನು ಹಾಕಿ ಪ್ರತಿಭಟನಾಕಾರರು ಮಾರುಕಟ್ಟೆ ಆವರಣ ಪ್ರವೇಶಿಸದಂತೆ ಪೊಲೀಸರು ತಡೆಯೊಡ್ಡಿದ್ದರು, ಈ ವೇಳೆ ಧರಣಿ ನಡೆಸಲು ಬಂದ ಶಾಸಕ ಸುರೇಶ್ಗೌಡ, ಜಿ.ಬಿ.ಜ್ಯೋತಿಗಣೇಶ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್.ರವಿಶಂಕರ್ ಹಾಗೂ ಸ್ಥಳೀಯ ವ್ಯಾಪಾರಿಗಳು, ಸಂಘಸಂಸ್ಥೆಗಳ ಮುಖಂಡರನ್ನು ತಡೆದರು.
ಈ ವೇಳೆ ಶಾಸಕರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆದು ಒಂದು ಹಂತದಲ್ಲಿ ಶಾಸಕರು ಹಾಗೂ ಕೆಲ ವ್ಯಾಪಾರಿಗಳು ಪೊಲೀಸರನ್ನು ತಳ್ಳಿಕೊಂಡು ಮಾರುಕಟ್ಟೆ ಆವರಣ ಪ್ರವೇಶಿಸಿದರು, ಆದರೆ ಹಲವು ವ್ಯಾಪಾರಿಗಳನ್ನು ಪೊಲೀಸರು ಒಳಗೆ ಬಿಡದೆ ತಡೆದಿದ್ದರಿಂದ ಅವರು ರಸ್ತೆಯಲ್ಲೇ ಧರಣಿ ಕುಳಿತರು.
ಮಾರುಕಟ್ಟೆ ಆವರಣದ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಶಾಸಕರು ವ್ಯಾಪಾರಿಗಳ ಜೊತೆ ಅಲ್ಲೇ ಧರಣಿ ಆರಂಭಿಸಿದರು, ಜನರ ವಿರೋಧದ ನಡುವೆ ಸರ್ಕಾರ ಪೊಲೀಸರ ಕಾವಲಿನಲ್ಲಿ ಮಾಲ್ ನಿರ್ಮಾಣ ಮಾಡಲು ಹೊರಟಿದೆ ಎಂದು ಕಿಡಿಕಾರಿದರು, ಯಾವುದೇ ಕಾರಣಕ್ಕೂ ಇಲ್ಲಿ ಮಾಲ್ ನಿರ್ಮಿಸಲು ಅವಕಾಶ ಮಾಡಿಕೊಡುವುದಿಲ್ಲ ಎಂದು ಶಾಸಕರಿಬ್ಬರು ಸರ್ಕಾರದ ವಿರುದ್ಧ ಗುಡುಗಿದರು.
ಇದೇ ವೇಳೆ ತೊಡೆ ತಟ್ಟಿ ಮಾತನಾಡಿದ ಶಾಸಕ ಬಿ.ಸುರೇಶ್ ಗೌಡ, ಸುಮಾರು ನೂರು ಕೋಟಿ ರೂಪಾಯಿ ಮೌಲ್ಯದ ಈ ಮಾರುಕಟ್ಟೆ ಜಾಗವನ್ನು ಸರ್ಕಾರ ಕಿಕ್ ಬ್ಯಾಕ್ ಪಡೆದು ಖಾಸಗಿ ವ್ಯಕ್ತಿಗೆ ಪರಭಾರೆ ಮಾಡಿದೆ, ಇದೊಂದು ದೊಡ್ಡ ಹಗರಣ, ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು, ಮಾಲ್ ನಿರ್ಮಾಣ ಯೋಜನೆ ರದ್ದು ಮಾಡಬೇಕು ಎಂದು ಒತ್ತಾಯಿಸಿದರು.
ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ, ಯೋಜನೆ ರದ್ದು ಮಾಡುವಂತೆ ಈ ಹಿಂದೆಯೇ ಒತ್ತಾಯಿಸಲಾಗಿತ್ತು, ಆದರೆ ಕಾಂಗ್ರೆಸ್ ಸರ್ಕಾರ ಹಟಕ್ಕೆ ಬಿದ್ದಂತೆ ಜನರ ವಿರೋಧ ಕಡೆಗಣಿಸಿ ಪೊಲೀಸರ ಕಾವಲಿನಲ್ಲಿ ಮಾಲ್ ನಿರ್ಮಾಣಕ್ಕೆ ಹೊರಟಿದೆ, ಯವುದೇ ಕಾರಣಕ್ಕೂ ಇದಕ್ಕೆ ಅವಕಾಶ ನೀಡುವುದಿಲ್ಲ, ಇಲ್ಲಿ ತರಕಾರಿ ಮಾರುಕಟ್ಟೆಯ ಅಗತ್ಯವಿದೆ, ಮಾರುಕಟ್ಟೆಗೆ ಈ ಜಾಗ ಉಳಿಸಿಕೊಂಡು ಹಲವು ವರ್ಷಗಳಿಂದ ಇಲ್ಲಿ ವ್ಯಾಪಾರ ಮಾಡುತ್ತಾ ಬದುಕು ಕಟ್ಟಿಕೊಂಡಿರುವ ಬಡ ವ್ಯಾಪಾರಿಗಳು ತರಕಾರಿ, ಹೂವು, ಹಣ್ಣು ವ್ಯಾಪಾರ ಮಾಡಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.
ಈ ಯೋಜನೆ ಕೈ ಬಿಡಬೇಕು, ಗಣಪತಿ ದೇವಸ್ಥಾನ ಮುಟ್ಟುವಂತಿಲ್ಲ, ಇದಕ್ಕೂ ಮೊದಲು ಜನರಿಗೆ ತೊಂದರೆಯಾಗಿರುವ ಟೌನ್ ಹಾಲ್, ಸ್ವಾಮೀಜಿ ವೃತ್ತದ ಘೋರಿಗಳನ್ನು ತೆಗೆಯಲಿ, ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಹೆಬ್ಬಾಕ ರವಿಶಂಕರ್ ಮಾತನಾಡಿ, ಮಾಲ್ ನಿರ್ಮಾಣ, ಸ್ಥಳೀಯ ವ್ಯಾಪಾರಿಗಳ ಎತ್ತಂಗಡಿ ಹುನ್ನಾರದ ವಿರುದ್ಧ ಬಿಜೆಪಿಯು ಸಂಘ ಸಂಸ್ಥೆಗಳು, ನಾಗರಿಕರ ಜೊತೆ ಸೇರಿ ಹೋರಾಟ ತೀವ್ರಗೊಳಿಸುವುದಾಗಿ ಹೇಳಿದರು. ಬಿಜೆಪಿ ಮುಖಂಡರು, ಸ್ಥಳೀಯ ವ್ಯಾಪಾರಿಗಳು ಹಾಜರಿದ್ದರು.
Comments are closed.