ತಿಪಟೂರು: ನೂತನ ನಗರಸಭಾ ಕಚೇರಿಯಲ್ಲಿ ಪ್ರಸಕ್ತ ಸಾಲಿನ ಚೊಚ್ಚಲ ಬಜೆಟ್ ಮಂಡನೆ ಹಲವು ತೊಡಕುಗಳ ನಡುವೆ ನೆರವೇರಿತು.
ಬಜೆಟ್ ಮಂಡಿಸಲು ನಗರಸಭಾ ಅಧ್ಯಕ್ಷ ರಾಮ್ಮೋಹನ್ ಆರಂಭಿಸುತ್ತಿದ್ದಂತೆ ವಿರೋಧ ಪಕ್ಷದ ಸದಸ್ಯರು ಗದ್ದಲ ಶುರು ಮಾಡಿದರು.
ನಗರಸಭಾ ಸದಸ್ಯ ನೂರುಭಾನ್ ನಮ್ಮ ವಾರ್ಡ್ನ ಅಭಿವೃದ್ಧಿಗೆ ಯಾವುದೇ ಹಣ ನೀಡದೆ ಅನ್ಯಾಯ ಮಾಡಿದ್ದಾರೆ ಎಂದು ಕಾಂಗ್ರೆಸ್ ಸದಸ್ಯರೊಡನೆ ಧರಣಿ ಕುಳಿತು ಬಜೆಟ್ ಮಂಡನೆಗೆ ಅವಕಾಶ ಕೊಡುವುದಿಲ್ಲ ಎಂದು ಪ್ರತಿಭಟಿಸಿದರು.
ಸದಸ್ಯ ತರಕಾರಿ ಪ್ರಕಾಶ್ ಮಾತನಾಡಿ, ನೀವು ಮಂಡಿಸುತ್ತಿರುವ ಬಜೆಟ್ ರೂಪಿತ ಬಜೆಟ್ಟೋ? ಪರಿಷ್ಕೃತ ಬಜೆಟ್ಟೋ ಎಂದು ಪ್ರಶ್ನಿಸಿದಾಗ, ಉತ್ತರ ನೀಡಿದ ಅಧ್ಯಕ್ಷರು ಪರಿಷ್ಕೃತ ಬಜೆಟ್ ಎಂದು ಹೇಳಿದಾಗ ಈ ಬಜೆಟ್ ಜನವರಿ ತಿಂಗಳಲ್ಲಿ ಮಾಡಬೇಕಾಗಿತ್ತು, ನಿಮಗೆ ಅನುಭವದ ಕೊರತೆ ಇದೆ, ಎಸ್ಟಿಪಿ ಯೋಜನೆಯಲ್ಲಿ ತಿಪಟೂರು ನಗರಸಭೆ ದೇಶಕ್ಕೆ ಮಾದರಿಯಾಗಿದೆ, ಬಜೆಟ್ ಪುಸ್ತಕದಲ್ಲಿ ಸ್ಥಳೀಯ ಶಾಸಕರ ಫೋಟೋನೇ ಇಲ್ಲ, ಜೊತೆಗೆ ನಗರದಲ್ಲೆಲ್ಲಾ ಫ್ಲೆಕ್ಸ್ಗಳದ್ದೇ ಕಾರುಬಾರು, ಅವುಗಳಿಗೆ ತೆರಿಗೆ ಹಾಕಿಲ್ಲ, ತೆರಿಗೆ ಹಾಕಿದ್ದರೆ ನಗರಸಭೆಗೆ ಆದಾಯ ಬರುತ್ತಿರಲಿಲ್ಲವೇ, ತಿಪಟೂರಿನ ನಗರಸಭೆಯ ಬಹುದೊಡ್ಡ ಸಮಸ್ಯೆ ಇ-ಖಾತೆ ವಿಚಾರ, ಅಧಿಕೃತ ನಿವೇಶನಗಳನ್ನು ಮಾತ್ರ ಖಾತೆ ಮಾಡುತ್ತೀರಿ, ಜೊತೆಗೆ ರೆವಿನ್ಯೂ ನಿವೇಶನಗಳನ್ನು ಪರಿಶೀಲಿಸಿ ಇ-ಖಾತೆ ಮಾಡಿಸಿ ನಗರಸಭೆಗೆ ಆದಾಯ ಹೆಚ್ಚಿಸಿ ಎಂದು ಸಲಹೆ ನೀಡಿದರು.
ಮಹಿಳಾ ಸದಸ್ಯೆ ಓಹಿಲಾ ಗಂಗಾಧರ್ ಮಾತನಾಡಿ, ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ತರ ಯೋಜನೆ ‘ಬಯಲು ಮುಕ್ತ ಶೌಚಾಲಯ’ ತಿಪಟೂರಿನಲ್ಲಿ 6 ರಿಂದ 7 ವಾರ್ಡ್ಗೆ ಮಾತ್ರ ಸೀಮಿತವಾಗಿದೆ, ಉಳಿಕೆ ವಾರ್ಡ್ಗಳಲ್ಲಿ ನಿರ್ವಹಣೆ ಇಲ್ಲ, ವ್ಯಾಪಾರದ ಕೆಲಸಕ್ಕೆ ಬರುವವರು ಎಲ್ಲೆಂದರಲ್ಲಿ ಮೂತ್ರ ವಿಸರ್ಜನೆ ಮಾಡುತ್ತಾರೆ ಎಂದು ಆರೋಪಿಸಿದರು.
ಮತ್ತೊಬ್ಬ ಸದಸ್ಯ ಸಂಗಮೇಶ್ ಮಾತನಾಡಿ, ಹೊಸ ಕಟ್ಟಡಗಳನ್ನು ಕಟ್ಟುವವರಿಗೆ ಹಳೆ ಕಟ್ಟಡದ ತೆರಿಗೆ ವಿಧಿಸುತ್ತೀರಿ, ಪರಿಷ್ಕರಿಸಿ ತೆರಿಗೆ ಹಾಕಿ, ವಾಣಿಜ್ಯ ಕಟ್ಟಡಗಳನ್ನು ಪರಿಶೀಲಿಸಿ ಕಟ್ಟುವ ಅಂತಸ್ತುಗಳನ್ನು ನೋಡಿ ತೆರಿಗೆ ಹಾಕಿದರೆ ನಗರಸಭೆ ಆದಾಯ ದ್ವಿಗುಣ ಆಗುವುದಿಲ್ಲವೇ? ಈ ಬಾರಿ 24 ಯುಜಿಡಿ ಸಂಪರ್ಕ ಮಾಡಿಸಿದ್ದೀರಿ, ಪ್ರತಿ ಮನೆಗಳನ್ನು ಪರಿಶೀಲಿಸಿ ಸಂಪರ್ಕ ಕಲ್ಪಿಸಿ, ನಗರದಲ್ಲಿ ಎಲ್ಲೆಂದರಲ್ಲಿ ಮೊಬೈಲ್ ಟವರ್ ನಿರ್ಮಿಸಿದ್ದಾರೆ, ಅವುಗಳಿಗೆ ತೆರಿಗೆ ವಿಧಿಸಿ ಎಂದು ಸಲಹೆ ನೀಡಿದರು.
ಭಾರಿ ಗದ್ದಲ ಉಂಟು ಮಾಡಿದ ನೀರಿನ ಟೆಂಡರ್..
ಕಾಂಗ್ರೆಸ್ಸಿನ ಕೋಟೆ ಪ್ರಭು ಮಾತನಾಡಿ, ನಮ್ಮ ಸದಸ್ಯರ ಗಮನಕ್ಕೆ ತರದೆ ನೀರಿನ ಟೆಂಡರ್ ನೀಡಿದ್ದೀರಿ, ಈ ಟೆಂಡರನ್ನು ವಾಪಸ್ ಪಡೆಯಿರಿ ಎಂದಾಗ ಉಪಾಧ್ಯಕ್ಷರು ಹಾಗೂ ಸದಸ್ಯರ ನಡುವೆ ವಾಗ್ವಾದ ಶುರುವಾಯಿತು. ಅಧ್ಯಕ್ಷರು ಮಧ್ಯೆಪ್ರವೇಶಿಸಿ ಮರು ಟೆಂಡರ್ಗೆ ಅವಕಾಶ ಕೊಡುತ್ತೇವೆ ಎಂದು ಹೇಳಿದಾಗ ಕಾಂಗ್ರೆಸ್ ಸದಸ್ಯರು ಸುಮ್ಮನಾದರು.
ಸದಸ್ಯ ಶ್ರೀನಿವಾಸ್ ಮಾತನಾಡಿ, ಬೀದಿ ದೀಪ ನಿರ್ವಹಣೆಗೆ 2 ಲಕ್ಷ ಹಣ ಮೀಸಲಿಟ್ಟಿದೆ ಎಂದು ಪತ್ರಿಕೆಯಲ್ಲಿ ಪ್ರಚಾರ ಮಾಡಿಸಿ ಸುಮಾರು 22 ಲಕ್ಷ ರೂ. ಖರ್ಚು ಮಾಡಿದ್ದೀರಿ, 20 ಲಕ್ಷದ ಹಣ ಹೇಗೆ ಸರಿ ದೂಗಿಸುತ್ತೀರಿ, ಇಡೀ ನಗರವನ್ನು ಸ್ವಚ್ಛಗೊಳಿಸುವ ಪೌರ ಕಾರ್ಮಿಕರಿಗೆ ಗೃಹಭಾಗ್ಯ ಯೋಜನೆಯಡಿಯಲ್ಲಿ 4 ಕೋಟಿ ಹಣ ಇಟ್ಟಿದ್ದೀರಿ, ಕೆಲವು ಕಾರ್ಮಿಕರಿಗೆ ನಿವೇಶನಗಳೇ ಇಲ್ಲ, ನಿವೇಶನ ನೀಡಿ ಮನೆ ಕಟ್ಟಿ ಕೊಡಿ ಎಂದು ಆಗ್ರಹಿಸಿದರು.
ಮತ್ತೊಬ್ಬ ನಗರಸಭಾ ಸದಸ್ಯ ಯೋಗೇಶ್ ಮಾತನಾಡಿ, ತಿಪಟೂರಿನ ಪತ್ರಕರ್ತರಿಗೆ ಪತ್ರಕರ್ತರ ಕೊಠಡಿ ಅವಶ್ಯಕತೆ ಇದೆ, ನಗರಸಭೆ ವ್ಯಾಪ್ತಿಯಲ್ಲಿ ನಿವೇಶನ ನೀಡಿ ಕಟ್ಟಡದ ವ್ಯವಸ್ಥೆ ಮಾಡಿಕೊಡಿ ಎಂದು ಕೇಳಿದರು.
ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಿದ ಅಧ್ಯಕ್ಷರು ಬಯಲು ಮುಕ್ತ ಶೌಚಾಲಯ ಕ್ಕೆ 35 ಲಕ್ಷ ಹಣ ಮೀಸಲಿದೆ. ಈ ಬಾರಿ ಟೆಂಡರ್ ಸಹ ಆಗಿದೆ, ಆಯ್ದ ಭಾಗಗಳಲ್ಲಿ ನಿರ್ಮಿಸಿ ವ್ಯವಸ್ಥೆ ಮಾಡುತ್ತೇವೆ, ಹೊಸ ಕಟ್ಟಡಗಳು ಹಾಗೂ ಅಂಗಡಿಗಳಿಗೆ ಆನ್ಲೈನ್ ಪರವಾನಿಗೆ ಸ್ಥಳದಲ್ಲಿ ಮಾಡಿಕೊಡಲಾಗುತ್ತದೆ, ನೀರಿನ ವಿಚಾರದಲ್ಲಿ ಟೆಂಡರ್ ಕೊಟ್ಟಿರುವುದನ್ನು ನಿಲ್ಲಿಸಿ ಮರು ಟೆಂಡರ್ ಅವಕಾಶ ನೀಡುತ್ತೇವೆ, ಹೊಸ ಕಟ್ಟಡ ನಿರ್ಮಾಣಕ್ಕೆ ಪರಿಶೀಲಿಸಿ ತೆರಿಗೆ ವಿಧಿಸಲಾಗುತ್ತದೆ, ಪೌರ ಕಾರ್ಮಿಕರಿಗೆ ನಿವೇಶನದ ವ್ಯವಸ್ಥೆ ಮಾಡಿ ಮನೆ ಕಟ್ಟಲು 7.5 ಲಕ್ಷ ನೆರವು ನೀಡಲಾಗುವುದು, ನಗರದ ಸುಸಜ್ಜಿತ ಬಡಾವಣೆಗಳಲ್ಲಿ 5 ಪಾರ್ಕ್ಗಳನ್ನು ನಿರ್ಮಿಸಲಾಗುತ್ತದೆ. ಜೊತೆಗೆ ಪತ್ರಕರ್ತರ ಕೊಠಡಿ ನಿರ್ಮಿಸಲು ಶಾಸಕರು ಮತ್ತು ತಾಲೂಕು ಅಧಿಕಾರಿಗಳ ಸಮ್ಮುಖದಲ್ಲಿ ತೀರ್ಮಾನಿಸಿ ನಿವೇಶನ ನೀಡಲಾಗುತ್ತದೆ ಎಂದು ಭರವಸೆ ನೀಡಿದರು. ಶಾಸಕರು ತಿಪಟೂರಿನ ನಗರ ಅಭಿವೃದ್ಧಿ ಯೋಜನೆ ದೃಷ್ಟಿಯಿಂದ ಇನ್ನೂ ಹೆಚ್ಚಿನ ಅನುದಾನ ತರಲಿ ಎಂದು ಶಾಸಕರಿಗೆ ಮನವಿ ಮಾಡಿದರು.
ಸಭೆಯಲ್ಲಿ ಶಾಸಕ ಬಿ.ಸಿ.ನಾಗೇಶ್, ನಗರಸಭೆ ಅಧ್ಯಕ್ಷ ರಾಮಮೋಹನ್, ಉಪಾಧ್ಯಕ್ಷ ಸೊಪ್ಪು ಗಣೇಶ್, ಪೌರಾಯುಕ್ತ ಉಮಾಕಾಂತ್, ಇಂಜಿನಿಯರ್ ನಾಗೇಶ್, ವ್ಯವಸ್ಥಾಪಕ ವೆಂಕಟೇಶ್ ಇತರೆ ನಗರಸಭಾ ಸದಸ್ಯರು ಹಾಗೂ ಸಿಬ್ಬಂದಿ ಹಾಜರಿದ್ದರು.
Get real time updates directly on you device, subscribe now.
Next Post
Comments are closed.