ಕಾಲುವೆಗೆ ಹರಿಯುತ್ತಿದೆ ಚರಂಡಿ ನೀರು

22

Get real time updates directly on you device, subscribe now.


ಕುಣಿಗಲ್: ಪುರಸಭೆ ಹಾಗೂ ಹೇಮಾವತಿ ನಾಲವಲಯದ ಅಧಿಕಾರಿಗಳ ನಡುವಿನ ಗೊಂದಲದಲ್ಲಿ ದೊಡ್ಡಕೆರೆ ಅಚ್ಚುಕಟ್ಟುದಾರರು ಹಾಗೂ ಲಕ್ಷ್ಮೀದೇವಿ ಹಂತ ಕಾಲುವೆಯ ಸಮೀಪದ ಮನೆಯವರು ಪರದಾಡುವಂತಾಗಿದ್ದು ಯಾವುದೇ ಸಾಂಕ್ರಾಮಿಕ ರೋಗ ಹಬ್ಬುವ ಮುನ್ನ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ನಾಗರಿಕರು ಆಗ್ರಹಿಸಿದ್ದಾರೆ.
ಪಟ್ಟಣಕ್ಕೆ ಹೊಂದಿಕೊಂಡಂತೆ ದೊಡ್ಡಕೆರೆ ರಾಜಕಾಲುವೆಯಾದ ಲಕ್ಷ್ಮಿದೇವಿ ಹಂತದ ಕಾಲುವೆಯು 14, 13, 12, 23ನೇ ಜನ ವಸತಿ ಪ್ರದೇಶ ಹೊಂದಿಕೊಂಡಂತೆ ಇದೆ, ಪಟ್ಟಣದ ವಿವಿಧ ವಾರ್ಡ್ಗಳಲ್ಲಿ ಹರಿಯುವ ಚರಂಡಿ ನೀರನ್ನು ನೇರವಾಗಿ ಲಕ್ಷ್ಮೀದೇವಿ ಹಂತದ ಕಾಲುವೆಗೆ ಪುರಸಭೆ ಹರಿಸುವ ವ್ಯವಸ್ಥೆ ಮಾಡಿದೆ, ಈ ಬಗ್ಗೆ ಸಾಕಷ್ಟು ದೂರು ನೀಡಿದ್ದರೂ ಹೇಮಾವತಿ ನಾಲಾ ವಲಯದ ಅಧಿಕಾರಿಗಳು ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂದು ಅಚ್ಚುಕಟ್ಟುದಾರರೂ, ನಾಗರಿಕರಾದ ಸುರೇಶ್, ದಿನೇಶ್ ಆರೊಪಿಸುತ್ತಾರೆ.

ಪಟ್ಟಣದಲ್ಲಿ ಕಳೆದೊಂದು ವಾರದಲ್ಲಿ ಸುಮಾರು 70 ಮಿ.ಮೀ ಮಳೆಯಾಗಿದ್ದು ಮಳೆ ನೀರು ನೇರವಾಗಿ ರಾಜ ಕಾಲುವೆಗೆ ಹರಿದಿದೆ, ಆದರೆ ರಾಜ ಕಾಲುವೆಯಲ್ಲಿ ಕಳೆದ ಹಲವಾರು ವರ್ಷಗಳಿಂದ ಸ್ವಚ್ಛತೆ ನಿರ್ವಹಣೆ ಮಾಡದ ಕಾರಣ ಒಂದು ಕಡೆ ಕಟ್ಟಿಕೊಂಡಿದ್ದರಿಂದ ಏಕ ನಾಲ್ಕು ವಾರ್ಡ್ ಪ್ರದೇಶ ಉದ್ದಕ್ಕೂ ಕೊಳೆಚೆಯುಕ್ತ ನೀರು ರಾಜ ಕಾಲುವೆಯಲ್ಲಿ ನಿಂತ ಪರಿಣಾಮ ವಾಸನೆ, ಸೊಳ್ಳೆ ಉತ್ಪಾದನೆ ತಾಣವಾಗಿದ್ದು ಕೆಲವೆಡೆ ಕಾಲುವೆ ತುಂಬಿದ ನೀರು ಚರಂಡಿಗೆ ಹಿಮ್ಮುಖವಾಗಿ ಚಲಿಸಿ, ನಾಲೆ ಆಚೆಗೆ ಹೊರಳುವ ಸ್ಥಿತಿ ನಿರ್ಮಾಣವಾಗಿದೆ.

ನಾಲೆ ಸ್ವಚ್ಛಗೊಳಿಸುವ ಬಗ್ಗೆ ನಾಲಾವಲಯದ ಅಧಿಕಾರಿಗಳನ್ನು ಕೇಳಿದರೆ ಪುರಸಭೆಯವರು ಚರಂಡಿ ನೀರು ಬಿಟ್ಟಿದ್ದು ಅವರು ಸ್ವಚ್ಛ ಮಾಡಬೇಕು ಎನ್ನುತ್ತಾರೆ, ಪುರಸಭೆ ಅಧಿಕಾರಿಗಳನ್ನು ಕೇಳಿದರೆ ಅದರು ಹೇಮಾವತಿ ನಾಲಾ ವಲಯಕ್ಕೆ ಸೇರಿದ್ದು ಅವರು ಸ್ವಚ್ಛ ಮಾಡಬೇಕು ಎನ್ನುತ್ತಾರೆ ಎಂದು ಬಿಜೆಪಿ ಮುಖಂಡ ಸುರೇಶ್ ಆರೋಪಿಸಿದ್ದು, ಎರಡೂ ಇಲಾಖೆಯ ಒಳ ಜಗಳದಲ್ಲಿ ನಾಲ್ಕು ವಾರ್ಡ್ನ ನಾಗರಿಕರು ಪರದಾಡುವಂತಾಗಿದ್ದು ಅಪ್ಪ ಅಮ್ಮನ ಜಗಳದಲ್ಲಿ ಕೂಸು ಬಡವಾಯಿತು ಎಂಬತಾಗಿದೆ. ನಾಲೆಯಲ್ಲಿ ಕಳೆದೊಂದು ವಾರದಿಂದ ನೀರು ನಿಂತು ಹಲವು ಅವಾಂತರ ಸೃಷ್ಟಿಸುತ್ತಿದ್ದು ಯಾವುದೇ ಸಾಂಕ್ರಾಮಿಕ ರೋಗ ಹರಡುವ ಮುನ್ನ ಎರಡೂ ಇಲಾಖೆಯವರು ಜನರ ಆರೋಗ್ಯ ಸಂರಕ್ಷಣೆ ನಿಟ್ಟಿನಲ್ಲಿ ರಾಜ ಕಾಲುವೆಯಲ್ಲಿ ನಿಂತಿರುವ ನೀರು ಹರಿಯಲು ವ್ಯವಸ್ಥೆ ಮಾಡುವಂತೆ ಮನವಿ ಮಾಡಿದ್ದಾರೆ.

Get real time updates directly on you device, subscribe now.

Comments are closed.

error: Content is protected !!