ತಂತ್ರಜ್ಞಾನದಿಂದ ಮನುಷ್ಯ ಸಂಬಂಧ ಕುಸಿತ

ಯಂತ್ರಕ್ಕೆ ಮನುಷ್ಯತ್ವ ಕೊಡುವ ಶಿಕ್ಷಣ ನಮ್ಮದಾಗಬೇಕು: ಪ್ರೊ.ಬರಗೂರು

45

Get real time updates directly on you device, subscribe now.


ತುಮಕೂರು: ತರಗತಿಗಳಲ್ಲಿ ತಂತ್ರಜ್ಞಾನದ ಮೇಲಿನ ಅವಲಂಬನೆ ಪುಸ್ತಕಕ್ಕಿಂತಲೂ ಹೆಚ್ಚಾಗಿರುವುದು ವಿಪರ್ಯಾಸ, ವಿದ್ಯಾರ್ಥಿಗಳಲ್ಲಿ ಚರ್ಚಾ ವಲಯ ವೃದ್ಧಿಸಿ, ಶಿಕ್ಷಣ ಸಮಾನತೆ ಕಲಿಸಬೇಕಾದ ತರಗತಿಗಳು ಮನುಷ್ಯತ್ವವಿಲ್ಲದ ಮಾನವರನ್ನು ಸೃಷ್ಟಿಸುತ್ತಿರುವುದು ಈ ಯುಗದ ದುರಂತ ಎಂದು ಹಿರಿಯ ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪ ಅಸಮಾಧಾನ ವ್ಯಕ್ತಪಡಿಸಿದರು.

ವಿಶ್ವ ವಿದ್ಯಾಲಯ ಕಲಾ ಕಾಲೇಜು ಗುರುವಾರ ಆಯೋಜಿಸಿದ್ದ ಕಲಾಸಿರಿ- 2024 ಕಾಲೇಜು ವಾರ್ಷಿಕೋತ್ಸವ ಹಾಗೂ ಜಾನಪದ ಕಲಾಮೇಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ತಂತ್ರಜ್ಞಾನದ ಬಳಕೆ ಹೆಚ್ಚಾದಂತೆ ಮನುಷ್ಯ ಸಂಬಂಧ ಕುಸಿಯುತ್ತಿದೆ, ಮುಖ್ಯವಾಗಿ ಶಿಕ್ಷಕರು- ವಿದ್ಯಾರ್ಥಿಗಳ ನಡುವಿನ ಸಂಬಂಧ ಕುಸಿದಿದೆ, ಶಿಕ್ಷಣದ ಮಹತ್ವ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳಿಗೆ ತಿಳಿಯಬೇಕಾದ ಪರಿಸ್ಥಿತಿ ಉಂಟಾಗಿದೆ, ಮಾನವಿಕ ಮುಖಗಳನ್ನು ತಿಳಿಯಬೇಕಾದ ಯುವ ಪೀಳಿಗೆ ಲಾಭಕೋರ ಮನಸ್ಥಿತಿಯಿಂದ ಮೌಲ್ಯಗಳನ್ನು ಪಲ್ಲಟಗೊಳಿಸಿ ವಿಕೃತಿ ಮೆರೆಯುತ್ತಿದ್ದಾರೆ ಎಂದರು.

ಯಂತ್ರಕ್ಕೆ ಮನುಷ್ಯತ್ವ ಕೊಡುವ ಶಿಕ್ಷಣ ನಮ್ಮದಾಗಬೇಕು, ಮಾನವನನ್ನುಯಂತ್ರವಾಗಿ ಮಾಡುವ ಶಿಕ್ಷಣದಲ್ಲಿ ವಿದ್ಯಾರ್ಥಿಗಳ ಭವಿಷ್ಯ ನಾಶವಾಗುತ್ತಿದೆ, ಭಾರತದಲ್ಲಿ ಮಾನವಿಕ ವಿಷಯ ಆಯ್ಕೆ ಮಾಡಿಕೊಳ್ಳುವವರ ಸಂಖ್ಯೆ ಕೇವಲ ಶೇ.5 ರಷ್ಟಿದೆ, ನಮ್ಮ ಶಿಕ್ಷಣ ಎಲ್ಲಿಯ ವರೆಗೆ ಜ್ಞಾನಮುಖಿ, ಉದ್ಯೋಗಮುಖಿ ಎಂಬುದನ್ನು ತಿಳಿಯಬೇಕು, ಶೈಕ್ಷಣಿಕ ವಿಭಾಗೀಕರಣವನ್ನು ವಿದ್ಯಾರ್ಥಿಗಳಲ್ಲಿ ಕಲಿಸಬೇಕು ಎಂದರು.

ಜಾತಿ, ಧರ್ಮ, ಲಿಂಗ, ವರ್ಗ, ವರ್ಣಗಳ ತಾರತಮ್ಯ ಹೋಗಲಾಡಿಸಿ ಆತ್ಮಸ್ಥೈರ್ಯ ಕೊಡುವ, ಸೌಹಾರ್ದತೆ ಸಾರುವ, ಶೈಕ್ಷಣಿಕ ಬಿಕ್ಕಟ್ಟುಗಳನ್ನು ಬಗೆಹರಿಸುವ ಶಿಕ್ಷಣ ವ್ಯವಸ್ಥೆ ನಮ್ಮದಾಗಬೇಕು, ವಿದ್ಯಾವಂತರು ಹೆಚ್ಚಾದಂತೆ ಜಾತಿವಾದಿಗಳು ಬೆಳೆಯುತ್ತಿದ್ದಾರೆ, ಸಮಾನತೆಯ ಮುಖವಾಡಗಳನ್ನು ಧರಿಸಿ ಅಸಮಾನತೆಯ ನೆರಳಡಿ ಬದುಕುತ್ತಿರುವ ಅವಿವೇಕಿಗಳ ಸಂಖ್ಯೆ ಹೆಚ್ಚಾಗುತ್ತಿದೆಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಮಾತನಾಡಿ, ಶಿಸ್ತುಬದ್ಧ ವಿದ್ಯಾರ್ಥಿಗಳು ಶಿಕ್ಷಣ ಸಂಸ್ಥೆಗಳಿಂದ ಹೊರಬರಬೇಕು, ಸ್ಥಾನದಿಂದ ಬರುವ ಗೌರವ ಅಲ್ಪಾವಧಿ, ವ್ಯಕ್ತಿತ್ವದಿಂದ ಬರುವ ಗೌರವ, ಸಿಗುವ ಮನ್ನಣೆ ಶಾಶ್ವತ ಎಂದರು.
ಸಾಮಾಜಿಕ ಚಿಂತಕ ಹಾಗೂ ಜನಪರ ಹೋರಾಟಗಾರ ಕೆ.ದೊರೈರಾಜು ಹಾಗೂ ಕೈಗಾರಿಕೋದ್ಯಮಿಎಚ್. ಜಿ. ಚಂದ್ರಶೇಖರ್ ಅವರಿಗೆ ವಿವಿ ಕಲಾ ಕಾಲೇಜಿನ ವಾರ್ಷಿಕ ಕಲಾಸಿರಿ- 2024 ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಚಲನಚಿತ್ರ ನಟ ಕುಮಾರ್ ಗೋವಿಂದ್, ವಿವಿ ಕಲಾ ಕಾಲೇಜಿನ ಪ್ರಾಂಶುಪಾಲ ಪ್ರೊ.ಬಿ.ಕರಿಯಣ್ಣ, ವಿವಿ ಕುಲಸಚಿವೆ ನಾಹಿದಾ ಜಮ್ ಜಮ್, ಪರೀಕ್ಷಾಂಗ ಕುಲಸಚಿವ ಪ್ರೊ.ಪ್ರಸನ್ನಕುಮಾರ್ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!