ಪಾವಗಡ: ಗ್ರಾಮೀಣ ಪ್ರದೇಶದ ಜಮೀನಿನಲ್ಲಿ ಬಿತ್ತನೆ ಮಾಡಿರುವ ಶೇಂಗಾ ಮತ್ತು ರಾಗಿ ಬೆಳೆಯ ರಕ್ಷಣೆಗೆಂದು ಬೆಳಗ್ಗೆ ತಮ್ಮ ಜಮೀನಿಗೆ ತೆರಳುತ್ತಿದ್ದ ರೈತನ ಮೇಲೆ ಕರಡಿ ದಾಳಿ ಮಾಡಿದ್ದರಿಂದ ಗಂಭೀರ ಗಾಯಗೊಂಡಿರುವ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ.
ತಾಲ್ಲೂಕಿನ ನಿಡಗಲ್ ಹೋಬಳಿಯ ಗುಜ್ಜನಡು ಗ್ರಾಮ ಪಂಚಾಯತಿ ವ್ಯಾಪ್ತಿಯ ಪೆಮ್ಮನಹಳ್ಳಿ ಗ್ರಾಮದ ತಿಮ್ಮಜ್ಜನ ಮಗ ಸಂಜೀವಪ್ಪ (55) ಎಂಬ ವ್ಯಕ್ತಿಯ ಮೇಲೆ ಬೆಳಗ್ಗೆ 6 ಗಂಟೆಯ ಸಮಯದಲ್ಲಿ ಚಿಕ್ಕ ಮರಿಗಳನ್ನು ಹೊಂದಿದ್ದ ಕರಡಿ ದಾಳಿ ಮಾಡಿದ್ದರಿಂದ ಗಂಭೀರ ಗಾಯಗೊಂಡಿದ್ದಾನೆ, ತಲೆಯ ಹಿಂಭಾಗ,ಕೈ, ಕಾಲು, ತೊಡೆ ಹಾಗೂ ಬೆನ್ನಿನ ಹಿಂಭಾಗವನ್ನು ತೀವ್ರವಾಗಿ ಗಾಯಗೊಳಿಸಿದೆ.
ನಿಡಗಲ್ಲು ಹೋಬಿಳಿಯು ಬಹಳ ಬೆಟ್ಟ ಗುಡ್ಡಗಳ ಪ್ರಾಂತ್ಯವಾಗಿದ್ದು, ಹಳ್ಳಿಗಳ ರೈತರು ಅಲ್ಪ ಸ್ವಲ್ಪ ಜಮೀನುಗಳಲ್ಲಿ ಅಡಿಕೆ, ಎಲೆ ಬಳ್ಳಿ, ತೋಟದ ಸುತ್ತಲೂ ಹಲಸು, ನೇರಳೆ, ಬಾಳೆ, ದಾಳಿಂಬೆ ಸೇರಿದಂತೆ ಹಲವು ಹಣ್ಣುಗಳ ಗಿಡ ಮರಗಳು ಬೆಳೆಸುವ ಹವ್ಯಾಸದ ಹಿನ್ನೆಲೆ ಕಾಡುಮೇಡುಗಳಲ್ಲಿ ವಾಸಿಸುವ ಪ್ರಾಣಿಗಳು ಅರಣ್ಯ ಪ್ರದೇಶದಲ್ಲಿ ತಿನ್ನಲು ಇರದ ಕಾರಣ ರೈತರು ಹಾಕಿರುವ ತೋಟಗಳ ಆಹಾರ ಸೇವನೆಗೆ ಬಂದ ಸಮಯದಲ್ಲಿ ತಾಲ್ಲೂಕಿನಲ್ಲಿ ಪ್ರತಿ ತಿಂಗಳಿಗೊಮ್ಮೆ ಗ್ರಾಮೀಣ ವಾಸಿಗರ ಮೇಲೆ ದುರ್ಘಟನೆ ನಡೆಯುತ್ತಲೇ ಇವೆ, ಕೊನೆ ಎಂದು ರೈತರ ಪ್ರಶ್ನೆಯಾಗಿದೆ.
ಪೆಮ್ಮನಹಳ್ಳಿ ಗ್ರಾಮಸ್ಥರ ಸಹಾಯದಿಂದ ಈತನನ್ನು ಪಟ್ಟಣದ ಸಾರ್ವಜನಿಕರ ಆಸ್ಪತ್ರೆಗೆ ಆ್ಯಂಬುಲೆನ್ಸ್ ಮೂಲಕ ಕಳಿಸಲಾಯಿತು, ಗಂಭೀರ ಸ್ಥಿತಿಯಲ್ಲಿದ್ದ ಈತನಿಗೆ ವೈದ್ಯರು ಪ್ರಾಥಮಿಕ ಚಿಕಿತ್ಸೆ ನೀಡಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರು ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದ್ದು, ತಲೆಯ ಹಿಂಭಾಗ ತೀವ್ರವಾಗಿ ಗಾಯಗೊಂಡಿದ್ದರಿಂದ ವೈದ್ಯರ ಶಿಫಾರಸ್ಸಿನ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.
Comments are closed.