ತುಮಕೂರು: ಡಾ.ಶಿವಕುಮಾರ ಸ್ವಾಮೀಜಿ ಆಸ್ಪತ್ರೆಯಲ್ಲಿ ತಾಯ್ತತವನ್ನು ಸಂಭ್ರಮಿಸಲು ರಿಯಾಯಿತಿ ದರದಲ್ಲಿ ಹೆರಿಗೆ ಪ್ಯಾಕೇಜ್ ನೀಡಲಾಗುತ್ತಿದೆ, ಸಹಜ ಹೆರಿಗೆಗೆ 2 ಸಾವಿರ ಹಾಗೂ ಸಿಸೇರಿಯನ್ ಹೆರಿಗೆಗೆ 10 ಸಾವಿರ ರೂ. ನಿಗದಿ ಮಾಡಲಾಗಿದೆ ಎಂದು ಸಿದ್ಧಗಂಗಾ ವೈದ್ಯಕೀಯ ಮಹಾವಿದ್ಯಾಲಯದ ಕಾರ್ಯಕಾರಿ ನಿರ್ದೇಶಕ ಡಾ.ಸಚ್ಚಿದಾನಂದ್ ತಿಳಿಸಿದರು.
ಸಿದ್ಧಗಂಗಾ ವೈದ್ಯಕೀಯ ಮಹಾ ವಿದ್ಯಾಲಯ ಹಾಗೂ ಸಂಶೋಧನಾ ಸಂಸ್ಥೆ ವತಿಯಿಂದ ನಡೆದ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಗರ್ಭಿಣಿ ಕಾರ್ಡ್ ಬಿಡುಗಡೆ ಮಾಡಿ ಮಾತನಾಡಿ, ಪ್ಯಾಕೇಜ್ ನಲ್ಲಿ ಹೆರಿಗೆಯ ಜೊತೆಗೆ ಹಾಸಿಗೆ, ಆಹಾರ ಹಾಗೂ ಔಷಧಿ ಒಳಗೊಂಡ ಈ ಹೆರಿಗೆ ಪ್ಯಾಕೇಜ್ ಸೌಲಭ್ಯವನ್ನು ಎಲ್ಲಾ ವರ್ಗದ ಜನರು ಉಪಯೋಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಸಿದ್ಧಗಂಗಾ ವೈದ್ಯಕೀಯ ಮಹಾ ವಿದ್ಯಾಲಯ ಪ್ರಾಚಾರ್ಯರಾದ ಡಾ.ಶಾಲಿನಿ ಮಾತನಾಡಿ ತಾಯಿ ಮಗುವಿನ ಅವಿನಾಭಾವ ಬಂಧನಕ್ಕೆ ಎದೆಹಾಲು ಸೇತುವೆಯಾಗಿದ್ದು, ಶಿಶುವಿಗೆ ಮಮತೆಯ ಜೊತೆಗೆ ಆರೋಗ್ಯ ಉಣಬಡಿಸುವ ಮಹತ್ವದ ಕಾರ್ಯಕ್ಕೆ ತಾಯಿಯಂದಿರು ಯಾವತ್ತೂ ಹಿಂಜರಿಯಬಾರದು ಎಂದು ಕರೆ ನೀಡಿದರು.
ಪ್ರಸೂತಿ ವಿಭಾಗದ ಮುಖ್ಯಸ್ಥೆ ಡಾ.ಹೇಮಾ ಮಾತನಾಡಿ ತಾಯಿಯ ಎದೆಹಾಲು ಅಮೃತಕ್ಕೆ ಸಮವಾಗಿದ್ದು ಮಗುವಿನ ಬೆಳವಣಿಗೆಗೆ ಬೇಕಾಗುವ ಪೌಷ್ಟಿಕಾಂಶ ಎದೆ ಹಾಲಿನಲ್ಲಿ ಹೇರಳವಾಗಿರುವುದರಿಂದ ಮಗುವಿನ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ, ಹುಟ್ಟಿದ 6 ತಿಂಗಳವರೆಗೆ ಸ್ತನ್ಯಪಾನ ಮಗುವಿನ ಆಹಾರದಲ್ಲಿ ಮೊದಲ ಹಾಗೂ ಏಕೈಕ ಆದ್ಯತೆಯಾಗಬೇಕು ಎಂದರು.
ವೈದ್ಯಕೀಯ ವಿದ್ಯಾರ್ಥಿಗಳಿಂದ ಸ್ತನ್ಯಪಾನದ ಕುರಿತು ಪ್ರಾತ್ಯಕ್ಷಿಕೆ ಕಾರ್ಯಕ್ರಮ ನಡೆಯಿತು, ವೈದ್ಯರಾದ ಡಾ.ಶೀತಲ್, ಡಾ.ರಜನಿ, ಡಾ.ಪ್ರದೀಪ್, ಡಾ.ಮನಸ್ವಿ, ಡಾ.ಅನುಷಾರೆಡ್ಡಿ, ಡಾ.ಕಾರ್ತಿಕ್, ಡಾ.ಪ್ರತಿಭಾ, ಡಾ.ಸುಮಂತ್, ಡಾ.ನಿಧಿ, ಡಾ.ಚೈತ್ರ, ಡಾ.ಸೌಮ್ಯ ಹಾಜರಿದ್ದರು.
Comments are closed.