ಒಳ ಮೀಸಲಾತಿ ಪರ ತೀರ್ಪಿಗೆ ಸ್ವಾಗತಿಸಿ ವಿಜಯೋತ್ಸವ

29

Get real time updates directly on you device, subscribe now.


ತುಮಕೂರು: ಒಳ ಮೀಸಲಾತಿ ವರ್ಗೀಕರಣದ ಪರವಾಗಿ ಸುಪ್ರಿಂಕೋರ್ಟ್ ತೀರ್ಪು ನೀಡಿರುವ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲಾ ದಲಿತ ಸಂಘಟನೆಗಳ ಒಕ್ಕೂಟದವತಿಯಿಂದ ನಗರ ಟೌನ್ ಹಾಲ್ ವೃತ್ತದಲ್ಲಿ ವಿಜಯೋತ್ಸವ ಆಚರಿಸಲಾಯಿತು.
ನಗರ ಟೌನ್ ಹಾಲ್ ವೃತ್ತದಲ್ಲಿ ಪಟಾಕಿ ಸಿಡಿಸಿ,ಸಿಹಿ ಹಂಚಿ ವಿಜಯೋತ್ಸವ ಆಚರಿಸಿದ ನೂರಾರು ದಲಿತ ಮುಖಂಡರು, ಸುಪ್ರಿಂಕೋರ್ಟು ತೀರ್ಪು ಮೂರು ದಶಕಗಳ ಮಾದಿಗ ಮತ್ತು ಒಳ ಮೀಸಲಾತಿ ಪರ ಹೋರಾಟಕ್ಕೆ ಸಂದ ಜಯ ಎಂದರು.

ಈ ವೇಳೆ ದಲಿತ ಯುವ ಮುಖಂಡ ಮಾರುತಿ ಪ್ರಸಾದ್ ಮಾತನಾಡಿ, ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ 101 ಜಾತಿಗಳಲ್ಲಿ ಅವರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹಂಚಿಕೆ ಮಾಡಬೇಕೆಂಬ ನಿಟ್ಟಿನಲ್ಲಿ ಸುಮಾರು ಐದು ದಶಕಗಳ ಹಿಂದಿನಿಂದಲೂ ಹೋರಾಟ ನಡೆಸುತ್ತಿದ್ದರೂ ಕರ್ನಾಟಕದಲ್ಲಿ ಇದಕ್ಕೆ ಕಾನೂನಾತ್ಮಕ ಚಾಲನೆ ಸಿಕ್ಕಿದ್ದು ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಗಳಾಗಿದ್ದ ಕಾಲದಲ್ಲಿ, ಅವರು ನ್ಯಾ.ಎ.ಜೆ.ಸದಾಶಿವ ಆಯೋಗ ನೇಮಕ ಮಾಡುವ ಮೂಲಕ ಒಳಮೀಸಲಾತಿ ವರ್ಗೀಕರಣಕ್ಕೆ ಮುನ್ನುಡಿ ಬರೆದರು, ಆನಂತರದಲ್ಲಿ ಹಲವಾರು ಪ್ರಯತ್ನ ನಡೆದಿದ್ದವು, 2023ರ ವಿಧಾನಸಭೆ ಚುನಾವಣೆಯ ಪ್ರಾಣಾಳಿಕಾ ಸಮಿತಿಯ ಅಧ್ಯಕ್ಷರಾಗಿ ಡಾ.ಜಿ.ಪರಮೇಶ್ವರ್ ಅವರು ಒಳಮೀಸಲಾತಿ ಜಾರಿಯ ಭರವಸೆ ನೀಡಿತ್ತು, ಇಂದು ಸುಪ್ರಿಂಕೋರ್ಟ್ ತೀರ್ಪು ಅದಕ್ಕೆ ಪೂರಕವಾಗಿದ್ದು, ಪ್ರಸ್ತುತ ಸಿದ್ದರಾಮಯ್ಯ ನೇತೃತ್ವದ ಸರಕಾರ ರಾಜ್ಯದಲ್ಲಿ ಅಧಿಕಾರದಲ್ಲಿದ್ದು, ಡಾ.ಜಿ.ಪರಮೇಶ್ವರ್ ನೇತೃತ್ವದಲ್ಲಿ ಒಳಮೀಸಲಾತಿ ಜಾರಿ ಮಾಡಿಯೇ ತೀರುತ್ತಾರೆ ಎಂಬ ನಂಬಿಕ ನಮ್ಮಲಿದೆ, ಕಾಂಗ್ರೆಸ್ ಪಕ್ಷ ಹಾಗೂ ಪಕ್ಷದ ಎಲ್ಲಾ ನಾಯಕರು ಒಳಮೀಸಲಾತಿ ಪರವಾಗಿದ್ದಾರೆ ಎಂದರು.

ದಲಿತ ಮುಖಂಡ ಕೋಡಿಯಾಲ ಮಹದೇವ್ ಮಾತನಾಡಿ, ಗುರುವಾರ ಸುಪ್ರಿಂ ಕೋರ್ಟ್ನ ಏಳು ನ್ಯಾಯಾಧೀಶರ ಬೆಂಚ್ ನೀಡಿರುವ ತೀರ್ಪು ಅತ್ಯಂತ ಸ್ವಾಗತಾರ್ಹವಾಗಿದೆ, ಮೂರು ದಶಕಗಳ ಕಾಲ ಮನೆ, ಮಠ ಬಿಟ್ಟು ಮಾದಿಗ ಹಾಗೂ ದಲಿತಪರ ಹೋರಾಟಗಾರರು ಹಗಲಿರುಳು ನಡೆಸಿದ ಹೋರಾಟದ ಫಲವಾಗಿ ಇಂದು ನಮ್ಮ ಪರವಾಗಿ ತೀರ್ಪು ಬಂದಿದೆ, ರಾಜ್ಯದಲ್ಲಿ ಮಂದಕೃಷ್ಣ ಮಾದಿಗ ಅವರ ನೇತೃತ್ವದಲ್ಲಿ ಮಾದಿಗ ದಂಡೋರದ ಹೆಸರಿನಲ್ಲಿ ಹಲವಾರು ಹೋರಾಟ ನಡೆದಿವೆ, ಎಸ್.ಎಂ.ಕೃಷ್ಣ ಅವರು ನೇಮಿಸಿದ ನ್ಯಾ.ಎನ್.ಕೆ.ಹನುಮಂತಪ್ಪ, ವಿ.ಎಸ್.ಮಳಿಮಠ ಮತ್ತು ಎ.ಜೆ.ಸದಾಶಿವ ಅವರ ಆಯೋಗಗಳು ನೀಡಿದ ವಿಸ್ಕೃತ ವರದಿಯ ಫಲವಾಗಿ ಇಂದು ಈ ತೀರ್ಪು ಬಂದಿದೆ, ಅಲ್ಲದೆ ಚಿತ್ರದುರ್ಗದಲ್ಲಿ ನಡೆದ ದಲಿತ ಐಕ್ಯತಾ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಾ.ಜಿ.ಪರಮೇಶ್ವರ್ ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರು ನೀಡಿದ ಭರವಸೆ, ಅಲ್ಲದೆ ಕಾಂಗ್ರೆಸ್ ಪಕ್ಷ ಪ್ರಣಾಳಿಕೆಯಲ್ಲಿಯೂ ಒಳಮೀಸಲಾತಿ ನೀಡುವ ಭರವಸೆ ನೀಡಿದ್ದು, ಅದರ ಜಾರಿಗೆ ಇದು ಸಕಾಲವಾಗಿದೆ, ಕಾಂಗ್ರೆಸ್ ಸರಕಾರ ಒಳಮೀಸಲಾತಿ ಪರವಾಗಿದ್ದು, ಸರಕಾರ ಒಳಮೀಸಲಾತಿ ಜಾರಿಗೆ ತರಲಿದೆ ಎಂಬ ವಿಶ್ವಾಸವಿದೆ ಎಂದರು.

ಉಪನ್ಯಾಸಕ ಹಾಗೂ ಹೋರಾಟಗಾರ ಕೊಟ್ಟಶಂಕರ್ ಮಾತನಾಡಿ, ಇದೊಂದು ಐತಿಹಾಸಿಕ ತೀರ್ಪು, ಆಂಧ್ರ ಪ್ರದೇಶದಲ್ಲಿ ಜಾರಿಯಲ್ಲಿದ್ದ ಒಳಮೀಸಲಾತಿ ಜಾರಿ ಕುರಿತಂತೆ ಇದ್ದ ಕೇಸಿಗೆ ಗುರುವಾರ 7 ನ್ಯಾಯಾಮೂರ್ತಿಗಳು ತೀರ್ಪು ನೀಡಿದ್ದು, ಒಳಮೀಸಲಾತಿ ವರ್ಗೀಕರಣವನ್ನು ಆಯಾಯ ರಾಜ್ಯಗಳು ಮಾಡಲು ಒಪ್ಪಿಗೆ ನೀಡಿದೆ, ಈಗಾಗಲೇ ಆಂಧ್ರ ಪ್ರದೇಶದ ಮುಖ್ಯಮಂತ್ರಿ ರೇವಂತರೆಡ್ಡಿ ಅವರು ಒಳಮೀಸಲಾತಿ ಜಾರಿ ಮಾಡುವ ಭರವಸೆ ನೀಡಿದ್ದು, ರಾಜ್ಯದಲ್ಲಿ ಸಿದ್ದರಾಮಯ್ಯ ಅವರು ಸಹ ಒಳಮೀಸಲಾತಿ ಜಾರಿ ಮಾಡಲಿದ್ದಾರೆ, ಕ್ರಿಮಿಲೇಯರ್ ಸಂಬಂಧಿಸಿದ್ದ ಇದ್ದ ತಾಂತ್ರಿಕ ತೊಡಕಿನ ಬಗ್ಗೆ ತಜ್ಞರ ಅಭಿಪ್ರಾಯ ಕೇಳಿದ್ದಾರೆ ಎಂದರು.

ದಸಂಸ ಜಿಲ್ಲಾಧ್ಯಕ್ಷ ಪಿ.ಎನ್.ರಾಮಯ್ಯ, ದಲಿತ ಮುಖಂಡರಾದ ಬಂಡೆಕುಮಾರ್, ಶ್ರೀನಿವಾಸ ಮೂರ್ತಿ, ಗಂಲಗಂಜಿಹಳ್ಳಿ ಸುರೇಶ್, ಗೂಳಹರಿವೆ ನಾಗರಾಜು, ಜಯಚಂದ್ರ, ಉರ್ಡಿಗೆರೆ ಕೆಂಪರಾಜು, ಆಟೋ ಶಿವರಾಜು ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!