ನೌಕರರು ದೈಹಿಕ, ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲಿ

ಕೆ ಎಸ್ ಆರ್ ಟಿ ಸಿ ನೌಕರರಿಗೆ ಕ್ರೀಡಾ ಕೂಟ ಶ್ಲಾಘನೀಯ: ಶ್ರೀನಿವಾಸ್

34

Get real time updates directly on you device, subscribe now.


ತುಮಕೂರು: ಸದಾ ಒತ್ತಡದಲ್ಲಿ ಕೆಲಸ ಮಾಡುವ ಕೆ ಎಸ್ ಆರ್ ಟಿ ಸಿ ನೌಕರರಿಗೆ ಕ್ರೀಡಾ ಕೂಟ ಏರ್ಪಡಿಸಿರುವುದು ಅತ್ಯಂತ ಸಂತೋಷದ ವಿಚಾರವಾಗಿದೆ ಎಂದು ಕೆ ಎಸ್ ಆರ್ ಟಿ ಸಿ ಅಧ್ಯಕ್ಷ ಹಾಗೂ ಶಾಸಕ ಎಸ್.ಆರ್.ಶ್ರೀನಿವಾಸ್ ತಿಳಿಸಿದ್ದಾರೆ.
ನಗರದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಸ್ವಾತಂತ್ರ ದಿನದ ಅಂಗವಾಗಿ ಆಯೋಜಿಸಿರುವ ಕೆ ಎಸ್ ಆರ್ ಟಿ ಸಿ ನೌಕರರು, ಸಿಬ್ಬಂದಿ ವರ್ಗ ಹಾಗೂ ಕುಟುಂಬದವರಿಗೆ ಏರ್ಪಡಿಸಿರುವ ವಾರ್ಷಿಕ ಕ್ರೀಡಾಟ ಉದ್ಘಾಟಿಸಿ ಮಾತನಾಡಿ, ನಿರಂತರ ಅಭ್ಯಾಸವಿಲ್ಲದೆ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವಾಗ ಬಹಳ ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದರು.

ಕೆ ಎಸ್ ಆರ್ ಟಿ ಸಿ ಸೇರಿದಂತೆ ಯಾವುದೇ ಸಾರಿಗೆ ನಿಗಮಕ್ಕೂ ನೌಕರರ ಆಧಾರ ಸ್ತಂಭ, ನೌಕರರ ಶ್ರಮದಿಂದ ನಿಗಮಗಳು ಸುಸೂತ್ರವಾಗಿ ನಡೆಯುತ್ತಿವೆ, ಯಾವ ನಿಗಮಗಳು ಲಾಭದಲ್ಲಿ ಇಲ್ಲ, ಆದರೂ ನಿಭಾಯಿಸಿಕೊಂಡು ಹೋಗಲಾಗುತ್ತಿದೆ, ಡಿಸೇಲ್ ದರ 60 ರೂ. ಇದ್ದಾಗ ಟಿಕೆಟ್ ದರ ಹೆಚ್ಚಿಸಲಾಗಿತ್ತು, ತದನಂತರ ಇದುವರೆಗೂ ಟಿಕೆಟ್ ದರ ಹೆಚ್ಚಿಸಿಲ್ಲ, ರಾಜಕೀಯ ಮೇಲಾಟಕ್ಕೆ ನಿಗಮಗಳು ಬಡವಾಗುತ್ತಿವೆ, ಟಿಕೆಟ್ ದರ ಹೆಚ್ಚಿಸಿಲ್ಲ ಎಂಬ ಮಾತ್ರಕ್ಕೆ ನೌಕರರಿಗೆ ನೀಡಬೇಕಾದ ಕಾಲ ಕಾಲದ ಸವಲತ್ತು ನೀಡದೆ ಇರಲಾಗದು, ಈ ಬಗ್ಗೆ ಸಂಬಂಧಪಟ್ಟ ಸಚಿವರ ಬಳಿ ಮಾತನಾಡುತ್ತೇನೆ, ಆಗಿರುವ ನೂನ್ಯತೆ ಸರಿಪಡಿಸಲು ಹಂತ ಹಂತವಾಗಿ ಪ್ರಯತ್ನಿಸುತ್ತೇವೆ ಎಂದರು.

ಕ್ರೀಡಾಕೂಟದಲ್ಲಿ ಕೆ ಎಸ್ ಆರ್ ಟಿ ಸಿಯ ಚಾಲಕರು, ನಿರ್ವಾಹಕರು, ಕಚೇರಿ ಸಿಬ್ಬಂದಿ, ತಾಂತ್ರಿಕ ಸಿಬ್ಬಂದಿ, ಸ್ವೀಪರ್ಸ್ ಹಾಗೂ ಎಲ್ಲಾ ರೀತಿ ನೌಕರರು ಪಾಲ್ಗೊಂಡಿದ್ದು, ತುಮಕೂರು ವಿಭಾಗದ ತುಮಕೂರು ಘಟಕ ಒಂದು ಮತ್ತು ಎರಡು, ಶಿರಾ, ತುರುವೇಕೆರೆ, ತಿಪಟೂರು, ಮಧುಗಿರಿ ಸೇರಿದಂತೆ 7 ಘಟಕಗಳ ಮೂರು ನೂರಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಿದ್ದರು, ಪುರುಷ ಮತ್ತು ಮಹಿಳಾ ಕ್ರೀಡಾಪಟುಗಳಿಗೆ ಅವರ ವಯೋಮಾನಕ್ಕೆ ಅನುಗುಣವಾಗಿ 100 ಮೀ, 200 ಮೀ, 400 ಮೀ, 800 ಮೀಟರ್, 1500 ಮೀಟರ್, ಗುಂಡು ಎಸೆತ, ಡಿಸ್ಕಸ್ ಥ್ರೋ, ಚಾವಲಿನ ಥ್ರೋ, ಉದ್ದ ಜಿಗಿತ, ರಿಲೇ4*100 ಮೀ, ರಿಲೇ 4*400 ಮೀಟರ್ ವಾಲಿಬಾಲ್ ಪಂದ್ಯಾವಳಿ ಹಾಗೂ ಮಹಿಳೆಯರಿಗೆ ಥ್ರೋ ಬಾಲ್, ಮ್ಯೂಸಿಕಲ್ ಚೇರ್ ಕ್ರೀಡೆಗಳು ನಡೆಯಲಿವೆ.

ಇದೇ ವೇಳೆ ಮಂಡ್ಯದಲ್ಲಿ ನಡೆದ ಕೆ ಎಸ್ ಆರ್ ಟಿ ಸಿ ಅಂತರ ವಿಭಾಗೀಯ ಕ್ರಿಕೆಟ್ ಪಂದ್ಯಾವಳಿಯಲ್ಲಿ ಮೊದಲ ಸ್ಥಾನ ಪಡೆದ ತುಮಕೂರು ತಂಡವನ್ನು ಅಧ್ಯಕ್ಷರು, ಶಾಸಕರು ಆದ ಎಸ್.ಆರ್.ಶ್ರೀನಿವಾಸ್ ಟ್ರೋಫಿ ನೀಡಿ ಅಭಿನಂದಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆ ಎಸ್ ಆರ್ ಟಿ ಸಿ ತುಮಕೂರು ವಿಭಾಗೀಯ ನಿಯಂತ್ರಣಾಧಿಕಾರಿ ಎಸ್.ಚಂದ್ರಶೇಖರ್ ವಹಿಸಿದ್ದರು. ಸಂಚಾಲನಾಧಿಕಾರಿ ಬಸವರಾಜು, ತಾಂತ್ರಿಕ ಶಿಲ್ಪಿ ಅಶ್ರಫ್ ವುಲ್ಲಾ ಷರೀಫ್, ಕಾರ್ಮಿಕರ ಕಲ್ಯಾಣಾಧಿಕಾರಿ ಹಂಸವೀಣಾ, ಕಾನೂನು ಅಧಿಕಾರಿ ಕವಿತಾ, ಅಂಕಿ, ಅಂಶ ಅಧಿಕಾರಿ ಅಂಬಿಕಾ ಸಿಂಧೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರೋಹಿತ್ ಗಂಗಾಧರ್ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!