ಪುರಸಭೆ ಅಧಿಕಾರಿಗಳ ಕಾರ್ಯ ವೈಖರಿಗೆ ಆಕ್ರೋಶ

13

Get real time updates directly on you device, subscribe now.


ಕುಣಿಗಲ್: ಪುರಸಭೆ ಅಧಿಕಾರಿಗಳ ಅಸಮರ್ಪಕ ಕಾರ್ಯವೈಖರಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಆಡಳಿತಾಧಿಕಾರಿ ಹಾಗೂ ಉಪ ವಿಭಾಗಾಧಿಕಾರಿ ಗೌರವಕುಮಾರ್ ಶೆಟ್ಟಿ, ಪರಿಸ್ಥಿತಿ ಹೀಗೆ ಮುಂದುವರೆದರೆ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲು ಶಿಫಾರಸ್ಸು ಮಾಡುವ ಎಚ್ಚರಿಕೆ ನೀಡಿದರು.
ಶನಿವಾರ ಪುರಸಭೆ ಸಭಾಂಗಣದಲ್ಲಿ ಆಡಳಿತಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ಆರಂಭಕ್ಕೆ ಸದಸ್ಯ ರಾಮು, ಪಟ್ಟಣದಲ್ಲಿ ಸ್ವಚ್ಛತೆ ನಿರ್ವಹಣೆಯಾಗುತ್ತಿಲ್ಲ, ಯಾವುದೇ ಸಭೆಯಲ್ಲಿ ಹೇಳಿದರೂ ಆ ಕೆಲಸವಾಗುತ್ತಿಲ್ಲ, ಅಧಿಕಾರಿಗಳ ಮೇಲೆ ದೂರು ಹೇಳುವುದೆ ನಮ್ಮ ಕಾಯಕವಾಗಿದೆ, ಜನರು ದಿನಾ ನಮಗೆ ಉಗಿಯುತ್ತಾರೆ ಎಂದರೆ, ಸದಸ್ಯರಾದ ರಂಗಸ್ವಾಮಿ, ನಾಗೇಂದ್ರ, ಮಂಜುಳಾ ಅವರು ಲಕ್ಷ್ಮೀದೇವಿ ಹಂತದ ಕಾಲುವೆ ಪಟ್ಟಣಕ್ಕೆ ಹೊಂದಿಕೊಂಡಿದ್ದು ಸ್ವಚ್ಛತೆ ಮಾಡದ ಕಾರಣ ನೀರು ನಿಂತು ಸೊಳ್ಳೆ ಉತ್ಪತ್ತಿಯಾಗುತ್ತಿದೆ, ಹಲವಾರು ಬಾರಿ ಹೇಳಿದರೂ ಕೇಳುತ್ತಿಲ್ಲ ಎಂದರು.

ಆಡಳಿತಾಧಿಕಾರಿ, ಪರಿಸರ ಅಭಿಯಂತರ ಚಂದ್ರಶೇಖರನ್ನು ತರಾಟೆಗೆ ತೆಗೆದುಕೊಂಡು ಪ್ರಶ್ನಿಸಿ ಜೂನ್ನಲ್ಲಿ ನಡೆದ ಸಭೆಯಲ್ಲಿ ನಿರ್ಣಯ ಕೈಗೊಂಡರೂ ಯಾವುದೆ ಕ್ರಮ ಮಾಡಿಲ್ಲ, ನಿಮ್ಮ ಕೆಲಸ ಎಸಿಯಾದ ನಾನು ಮಾಡಲೆ, ನಿಮಗೆ ಜವಾಬ್ದಾರಿ, ಮಾನ ಮರ್ಯಾದೆ ಇಲ್ಲವೆ ಎಂದು ಅಸಮಾಧಾನ ವ್ಯಕ್ತಪಡಿಸಿ, ಮುಖ್ಯಾಧಿಕಾರಿ ಶಿವಪ್ರಸಾದ್ ಗೆ ಇವರ ಮೇಲೆ ಯಾವ ಕ್ರಮ ಕೈಗೊಂಡಿದ್ದೀರಾ ಎಂದಾಗ, ಮುಖ್ಯಾಧಿಕಾರಿ ಅವರು ಕೇಂದ್ರ ಸ್ಥಾನದಲ್ಲಿ ಇಲ್ಲ, ತುಮಕೂರಿನಿಂದ ಬರುತ್ತಾರೆ, ನೋಟಿಸ್ ನೀಡಿದ್ದೇನೆ ಎಂದರು.

ಕೆಲ ಸದಸ್ಯರು ಮಾತನಾಡಿ, ಅವರು ಹನ್ನೊಂದು ಗಂಟೆಗೆ ಕೆಲಸಕ್ಕೆ ಬರ್ತಾರೆ, ನಾಲ್ಕು ಕಸದ ಗಾಡಿ ಕೆಟ್ಟು ನಿಂತಿವೆ, ರಿಪೇರಿಗೆ ಲಕ್ಷಾಂತರ ಖರ್ಚು ಮಾಡಿದ್ದು ಈ ಬಗ್ಗೆ ತನಿಖೆ ಆಗಬೇಕು ಎಂದು ಅಗ್ರಹಿಸಿದರು.
ಆಡಳಿತಾಧಿಕಾರಿ, ಪರಿಸರ ಅಭಿಯಂತರರಿಗೆ ನಾಳೆಯಿಂದ ಎಂಟು ಗಂಟೆಗೆ ವಾರ್ಡ್ ವಿಸಿಟ್ ಮಾಡಿ ಫೋಟೊ ವಾಟ್ಸಪ್ ನಲ್ಲಿ ಹಾಕಬೇಕು ಎಂದು ತಾಕೀತು ಮಾಡಿದರು.

ಡೆಂಗ್ಯೂ ನಿಯಂತ್ರಣಕ್ಕೆ ಯಾವುದೇ ಕ್ರಮವಾಗಿಲ್ಲ, ಬರೀ ದಾಖಲೆಯಲ್ಲೆ ಕ್ರಮವಾಗಿದೆ ಎಂದು ಮಹಿಳಾ ಸದಸ್ಯರು ತೀವ್ರ ಆಕ್ಷೇಪಿಸಿದಾಗ, ಆಡಳಿತಾಧಿಕಾರಿ, ಪರಿಸರ ಅಭಿಯಂತರರನ್ನು, ಆರೋಗ್ಯ ನಿರೀಕ್ಷಕರನ್ನು ಪ್ರಶ್ನಿಸಿ ಮಾಡಿದ ಕೆಲಸದ ಬಗ್ಗೆ ದಾಖಲೆ ಕೇಳಿದಾಗ ಯಾವುದೇ ಉತ್ತರ ನೀಡಲು ಇಬ್ಬರೂ ತಡಬಡಾಯಿಸಿದ್ದು ಮುಖ್ಯಾಧಿಕಾರಿಗಳೆ ಈ ಬಗ್ಗೆ ಕ್ರಮ ವಹಿಸಿ, ಇಲ್ಲವಾದರೆ ನಿಮ್ಮ ಮೇಲೆಯೆ ಜಿಲ್ಲಾಧಿಕಾರಿ ಗಳಿಗೆ ವರದಿ ನೀಡಬೇಕಾಗುತ್ತದೆ ಎಂದರು.

ಮುಖ್ಯಾಧಿಕಾರಿ ಶಿವಪ್ರಸಾದ್, ತಹಶೀಲ್ದಾರ್ ರಶ್ಮಿ ಇತರೆ ಪುರಸಭೆ ಸಿಬ್ಬಂದಿ ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!