ಗುಬ್ಬಿ: ತಾಲೂಕಿನ ಕಡಬ ಹೋಬಳಿಯ ಮಾರಶೆಟ್ಟಿಹಳ್ಳಿ ಗ್ರಾಮದಲ್ಲಿ ರಸ್ತೆಗೆ ಅಡ್ಡಲಾಗಿ ವಿದ್ಯುತ್ ತಂತಿಗಳನ್ನು ಎಳೆದಿದ್ದು, ವಿದ್ಯುತ್ ತಂತಿಗಳು ಕೆಳ ಭಾಗದಲ್ಲಿದ್ದು ರಸ್ತೆಯಲ್ಲಿ ವಾಹನಗಳು, ಸಾರ್ವಜನಿಕರು, ಶಾಲಾ ವಾಹನಗಳು, ಗ್ರಾಮಸ್ಥರು ಸಂಚರಿಸಲು ತೊಂದರೆಯಾಗುತ್ತಿದೆ, ವಿದ್ಯುತ್ ತಂತಿ ಸ್ಥಳಾಂತರಿಸಿ ಏಕಮುಖವಾಗಿ ಎಳೆಯಬೇಕೆಂದು ಒತ್ತಾಯಿಸಿ ಮಾರಶೆಟ್ಟಿಹಳ್ಳಿ ಗ್ರಾಮಸ್ಥರು ಬೆಸ್ಕಾಂ ಅಧಿಕಾರಿಗಳ ವಿರುದ್ಧ ದಿಢೀರ್ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮುಖಂಡ ಶಿವಶಂಕರ್ ಬಾಬು ಮಾತನಾಡಿ, ಮಾರಶೆಟ್ಟಿಹಳ್ಳಿ ಮುಖ್ಯ ರಸ್ತೆ ಸಂಪಿಗೆ, ತುರುವೇಕೆರೆ ಹಾಗೂ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಕೂಡು ರಸ್ತೆಯಾಗಿದ್ದು, ಈ ರಸ್ತೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು, ಸಾರ್ವಜನಿಕರು, ಹತ್ತಾರು ಶಾಲಾ ವಾಹನಗಳು ಸಂಚರಿಸುತ್ತವೆ, ಕಾಲೋನಿಯ ಜನರು, ಮಕ್ಕಳು ಇಲ್ಲಿಯೇ ರಸ್ತೆಯಲ್ಲಿ ತಿರುಗಾಡಬೇಕು, ಬೆಸ್ಕಾಂ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು ನಿರ್ಲಕ್ಷ ವಹಿಸುತ್ತಿದ್ದಾರೆ, ಕೇಳಲು ಹೋದರೆ ಸರಿಯಾದ ರೀತಿಯಲ್ಲಿ ಮಾತು ಆಡುವುದಿಲ್ಲ, ಇನ್ನೆರಡು ದಿನಗಳಲ್ಲಿ ಈ ಸಮಸ್ಯೆ ಬಗೆಹರಿಸದೆ ಹೋದರೆ ಬೆಸ್ಕಾಂ ಕಚೇರಿ ಮುಂದೆ ಬೃಹತ್ ಹೋರಾಟ ರೂಪಿಸಲಾಗುವುದು ಎಂದು ತಿಳಿಸಿದರು.
ಮುಖಂಡ ಮಾರಶೆಟ್ಟಿಹಳ್ಳಿ ಬಸವರಾಜು ಮಾತನಾಡಿ, ವಿದ್ಯುತ್ ತಂತಿಗಳು ದಲಿತ ಕಾಲೋನಿಗೆ ಹೋಗುವ ಮಧ್ಯ ರಸ್ತೆಯಲ್ಲಿ ಹಾದು ಹೋಗಿದ್ದು, ಇದರಿಂದ ಇಲ್ಲಿನ ಗ್ರಾಮಸ್ಥರು, ಮಹಿಳೆಯರು, ಮಕ್ಕಳಿಗೆ ಓಡಾಡಲು ಸಮಸ್ಯೆಯಾಗುತ್ತಿದೆ, ಹಲವಾರು ಬಾರಿ ಬೆಸ್ಕಾಂ ಅಧಿಕಾರಿಗಳ ಗಮನಕ್ಕೆ ತಂದಿದ್ದರು ನಿರ್ಲಕ್ಷ ವಹಿಸುತ್ತಿದ್ದಾರೆ, ವಿದ್ಯುತ್ ತಂತಿ ಮತ್ತು ಕಂಬವನ್ನು ಬೇರೆಡೆಗೆ ಸ್ಥಳಾಂತರಿಸಬೇಕು, ಸಮಸ್ಯೆ ಬಗೆಹರಿಸಿಕೊಡಬೇಕು ಎಂದು ಒತ್ತಾಯ ಮಾಡಿದರು.
ಈ ಸಂದರ್ಭದಲ್ಲಿ ಹುಚ್ಚಯ್ಯ, ಶಿವರಾಜು, ರಮೇಶ್, ತಿಮ್ಮರಾಜು, ಮಂಜುನಾಥ್, ಮೂರ್ತಿ, ಶಿವಕುಮಾರ್, ವೆಂಕಟೇಶ್, ದಿಲೀಪ್, ಮೂಡಲಗಿರಿಯಪ್ಪ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.
Comments are closed.