ಚುಕು ಬುಕು ರೈಲಿಗೂ ಹುಟ್ಟು ಹಬ್ಬದ ಸಂಭ್ರಮ

ತುಮಕೂರು ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರ ಸೆಲೆಬ್ರೇಷನ್

37

Get real time updates directly on you device, subscribe now.


ತುಮಕೂರು: ತುಮಕೂರು ಜಿಲ್ಲಾ ರೈಲ್ವೆ ಪ್ರಯಾಣಿಕರ ವೇದಿಕೆ ವತಿಯಿಂದ ತುಮಕೂರು ರೈಲು ನಿಲ್ದಾಣದಲ್ಲಿ ತುಮಕೂರು- ಬೆಂಗಳೂರು ವಿಶೇಷ ಮೆಮು ರೈಲಿನ 11ನೇ ಬರ್ತ್ಡೇ ಆಚರಿಸಿ ಪ್ರಯಾಣಿಕರು ಸಂಭ್ರಮಿಸಿದರು.
ಉದ್ಯೋಗಿ ಪ್ರಯಾಣಿಕರ ಮನವಿ ಮೇರೆಗೆ ಆಗಸ್ಟ್ 3, 2013 ರಂದು ಸಂಚಾರ ಆರಂಭಗೊಂಡ ರೈಲಿಗೆ ಪ್ರತಿ ಆಗಸ್ಟ್ 3 ರಂದು ಹುಟ್ಟಿದ ದಿನ ಆಚರಿಸಿ ಪ್ರಯಾಣಿಕರು ಸಂಭ್ರಮಿಸುತ್ತಾರೆ, ಉದ್ಯೋಗಕ್ಕಾಗಿ ಪ್ರತಿ ದಿನ ಬೆಂಗಳೂರಿಗೆ ಪ್ರಯಾಣಿಸುವ ಪ್ರಯಾಣಿಕರಿಗೆ ಈ ರೈಲು ಒಂದು ರೀತಿಯಲ್ಲಿ ಜೀವತಂತು ಎನಿಸಿದೆ.

ಶನಿವಾರ ಬೆಳಗ್ಗೆಯೇ ಸುಮಾರು 6.30ರ ವೇಳೆಗೆ ನಗರದ ರೈಲ್ವೆ ಸ್ಟೇಷನ್ ಗೆ ಆಗಮಿಸಿದ ವೇದಿಕೆ ಪದಾಧಿಕಾರಿಗಳು, ಸದಸ್ಯರು ಮತ್ತು ಪ್ರಯಾಣಿಕರು ಸಡಗರದಿಂದ ರೈಲು ಇಂಜಿನಿಗೆ ಬಾಳೆಕಂದು ಕಟ್ಟಿ, ಹೂವು, ಬಲೂನುಗಳಿಂದ ರೈಲನ್ನು ಸಿಂಗರಿಸಿದರು.
ಬೆಳಗ್ಗೆ 8ಕ್ಕೆ ತುಮಕೂರಿನಿಂದ ಹೊರಡುವ ರೈಲಿಗೆ ಸುಮಾರು 7.45ರ ವೇಳೆಗೆ ರೈಲಿನ ಲೋಕೋ ಪೈಲೆಟ್ ಬಿ.ಸುಬ್ರಹ್ಮಣ್ಯಂ ಮತ್ತು ಗಾರ್ಡ್ ಜಿ.ಜಯುಡು ಅವರಿಂದ ಕೇಕ್ ಕಟ್ ಮಾಡಿಸಿ ಸಂಭ್ರಮಿಸಿದರು, ಇದಕ್ಕೂ ಮುನ್ನ ರೈಲಿಗೆ ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಲಾಯಿತು, ತುಮಕೂರು ರೈಲು ನಿಲ್ದಾಣ ವ್ಯವಸ್ಥಾಪಕ ನಾಗರಾಜ್.ಎಲ್. ಮತ್ತು ಸಿಬ್ಬಂದಿ ಭಾಗವಹಿಸಿದ್ದರು.

ವೇದಿಕೆ ಉಪಾಧ್ಯಕ್ಷ ಮಾಧವಮೂರ್ತಿ ಗುಡಿಬಂಡೆ, ಪರಮೇಶ್ವರ್ ಸೇರಿದಂತೆ ವೇದಿಕೆಯ ಎಲ್ಲಾ ಪದಾಧಿಕಾರಿಗಳು ಮತ್ತು ಸದಸ್ಯರು ಭಾಗವಹಿಸಿ ಎಲ್ಲಾ ಪ್ರಯಾಣಿಕರು ಪರಸ್ಪರ ಕೇಕ್ ತಿನ್ನಿಸಿ ಖುಷಿ ಪಟ್ಟರು.
ಹಿನ್ನೆಲೆ: 2013ರ ಜೂನ್ ಅಂತ್ಯಕ್ಕೆ ಬೆಳಗ್ಗೆ 8 ಕ್ಕೆ ಬರುತ್ತಿದ್ದ ಸೋಲಾಪುರ- ಮೈಸೂರು ರೈಲಿನ ವೇಳೆ ಬೆಳಗ್ಗೆ 6.30ಕ್ಕೆ ಬದಲಾಯಿಸಲಾಯಿತು, ಇದರಿಂದ ಬೆಳಗ್ಗೆ 8 ಗಂಟೆಗೆ ಆ ರೈಲಿಗೆ ಹೊರಡುತ್ತಿದ್ದ ಸುಮಾರು ಒಂದೂವರೆ ಸಾವಿರಕ್ಕೂ ಹೆಚ್ಚು ಜನ ಉದ್ಯೊಗಿಗಳು ಮತ್ತು ಸಾರ್ವಜನಿಕರಿಗೆ ತೀವ್ರ ಸಂಕಷ್ಟವಾಗಿತ್ತು, ಆಗಿನ ರೈಲ್ವೇ ಸಚಿವ ಎಂ.ಮಲ್ಲಿಕಾರ್ಜುನ ಖರ್ಗೆ ಅವರಿಗೆ ವೇದಿಕೆ ವತಿಯಿಂದ ಪತ್ರ ಬರೆದು ಉದ್ಯೋಗಿಗಳು ಮತ್ತು ಪ್ರಯಾಣಿಕರ ಕಷ್ಟ ವಿವರಿಸಿದಾಗ ಕೇವಲ ಒಂದೇ ತಿಂಗಳಲ್ಲಿ ವಿಶೇಷ ರೈಲು ಸಂಚಾರ ಆರಂಭಿಸಿ ಅನುಕೂಲ ಮಾಡಿಕೊಟ್ಟಿದ್ದರು.

ಆಗಸ್ಟ್ 3, 2013 ರಂದು ರೈಲು ಸಂಚಾರ ಆರಂಭಗೊಂಡು ಸಾವಿರಾರು ಉದ್ಯೋಗಿಗಳಿಗೆ ಮತ್ತು ಪ್ರಯಾಣಿಕರಿಗೆ ಅನುಕೂಲವಾಗಿತ್ತು, ಈ ಹಿನ್ನೆಲೆಯಲ್ಲಿ ಅಂದಿನ ದಿನವನ್ನು ವಿಶೇಷವಾಗಿ ಪರಿಗಣಿಸಿ ಟ್ರೈನ್ ಬರ್ತ್ ಡೇ ಆಚರಿಸಿಕೊಂಡು ಬರಲಾಗುತ್ತಿದೆ, ವಿಶೇಷವೆಂದರೆ ರೈಲಿಗೆ ಬರ್ತ್ ಡೇ ಆಚರಿಸುತ್ತಿರುವುದು ರೈಲ್ವೆ ಇತಿಹಾಸದಲ್ಲೇ ಇದು ಪ್ರಥಮ ಎನ್ನಬಹುದಾಗಿದೆ, ಇದರಿಂದ ರೈಲ್ವೆ ಇಲಾಖೆ ಅಧಿಕಾರಿಗಳೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!