ತುಮಕೂರು: ಸಮಾಜ ಕಾರ್ಯ ವಿದ್ಯಾರ್ಥಿಗಳಿಗೆ ಮುಖ್ಯವಾಗಿ ಕೌಶಲ್ಯ, ಶಿಸ್ತು ಹಾಗೂ ವಿಷಯಗಳನ್ನು ಪರಿಕಲ್ಪನೆ ಮಾಡುವ ಜ್ಞಾನವಿರಬೇಕು ಎಂದು ತುಮಕೂರು ವಿವಿಯ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಹೇಳಿದರು.
ವಿಶ್ವ ವಿದ್ಯಾಲಯ ಕಲಾ ಕಾಲೇಜಿನ ಸಮಾಜ ಕಾರ್ಯ ವಿಭಾಗ ಆಯೋಜಿಸಿಸದ್ದ ಸಮಾಜಕಾರ್ಯ ಹಬ್ಬ- 2024 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಮಾಜ ಕಾರ್ಯ ವಿದ್ಯಾರ್ಥಿಗಳು ಗ್ರಾಮೀಣ ಭಾಗದಲ್ಲಿ ಹೆಚ್ಚು ಶಿಬಿರಗಳನ್ನು ಆಯೋಜಿಸಿ, ಅಲ್ಲಿನ ಜನರ ವಿಷಯ ವಿಶ್ಲೇಷಣೆ ಮಾಡಬೇಕು, ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು, ರೈತರಿಗೆ ಹೆಚ್ಚು ಸಹಾಯ ಮಾಡಬೇಕು ಎಂದು ತಿಳಿಸಿದರು.
ಕುಲಸಚಿವೆ ನಾಹಿದಾ ಜಮ್ ಜಮ್ ಮಾತನಾಡಿ, ಸಮಾಜ ಕಾರ್ಯ ವಿದ್ಯಾರ್ಥಿಗಳು ಸಮಾಜಮುಖಿ ಯೋಜನೆಗಳನ್ನು ಕಾರ್ಯ ರೂಪಕ್ಕೆ ತರಬೇಕು, ಸಮಾಜದ ಏಳ್ಗೆಗಾಗಿ ಶ್ರಮಿಸಬೇಕು, ಆತ್ಮತೃಪ್ತಿ ಬರುವುದು ಸಮಾಜದ ಡೊಂಕುಗಳನ್ನು ಸರಿದಾರಿಗೆ ತಂದಾಗ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿವಿಯ ಕಲಾ ಕಾಲೇಜಿನ ಪ್ರಾಂಶುಪಾಲ ಪ್ರೊ.ಬಿ.ಕರಿಯಣ್ಣ ಮಾತನಾಡಿ, ಸಮಾಜ ಕಾರ್ಯ ವಿದ್ಯಾರ್ಥಿಗಳ ಕಾರ್ಯವೆಲ್ಲವೂ ವಿಶೇಷ ಹಾಗೂ ವಿಭಿನ್ನವಾಗಿ ಇರುತ್ತದೆ, ಶಿಕ್ಷಕರು ಒಗ್ಗಟ್ಟಾಗಿದ್ದರೆ ಮಾತ್ರ ವಿದ್ಯಾರ್ಥಿಗಳು ಒಗ್ಗಟ್ಟಾಗಿ ಮಹತ್ವವಾದುದನ್ನು ಸಾಧಿಸಬಹುದು ಎಂದು ಹೇಳಿದರು.
ಸಮಾಜ ಕಾರ್ಯ ಹಬ್ಬದಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ರೇಷ್ಮೆ ಇಲಾಖೆ, ಉಚಿತ ಶ್ರವಣ ದೋಷ ತಪಾಸಣಾ ಶಿಬಿರ, ವಾಣಿಡೆಫ್ ಚಿಲ್ಡ್ರನ್ ಫೌಂಡೇಶನ್, ತುಮಕೂರು ಸಾವಯವ ಕೃಷಿ ಉತ್ಪಾದಕರ ಕಂಪನಿ, ಮಡಿಲು ಸೇವಾ ಟ್ರಸ್ಟ್, ಆದಿವಾಸಿ ಅಲೆಮಾರಿ ಮಕ್ಕಳಿಗೆ ಉಚಿತ ವಸತಿ ನಿಲಯ, ಮಕ್ಕಳ ಹಕ್ಕುಗಳ ಸಂಸತ್ 23 ಜಿಲ್ಲಾಮಟ್ಟದ ಮಕ್ಕಳ ಸಮಾಲೋಚನೆ, ಸುರಕ್ಷಿತ ಗ್ರಾಮ ಕಾರ್ಯಕ್ರಮ, ಯೂತ್ ಫಾರ್ ಸೇವಾ, ಸಾಂತ್ವನ ಕೇಂದ್ರ, ಗ್ರೀನ್ ಪ್ಲಾಂಟ್ ನರ್ಸರಿ, ಮಾದಕ ವಸ್ತುಗಳ ದುರ್ಬಳಕೆ ನಿಯಂತ್ರಣ ಮಂಡಳಿ ಹಾಗೂ ಇತ್ಯಾದಿ ಮಳಿಗೆಗಳನ್ನು ಹಾಕಿದ್ದರು.
ವಿವಿಯ ಪರೀಕ್ಷಾಂಗ ಕುಲಸಚಿವ ಪ್ರೊ.ಪ್ರಸನ್ನ ಕುಮಾರ್.ಕೆ, ವಿಶ್ವ ವಿದ್ಯಾಲಯ ಕಲಾ ಕಾಲೇಜಿನ ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥ ಭಾನುನಂದನ್, ಸ್ನಾತಕೋತ್ತರ ಸಮಾಜ ಕಾರ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಅಧ್ಯಕ್ಷ ಪ್ರೊ.ರಮೇಶ್.ಬಿ, ಪ್ರಾಧ್ಯಾಪಕ ಪ್ರೊ.ಪರಶುರಾಮ.ಕೆ.ಜಿ, ಸ್ನೇಹ ಮನೋವಿಕಾಸ ಕೇಂದ್ರದ ವೈದ್ಯಾಧಿಕಾರಿ ಡಾ.ಲೋಕೇಶ್ ಬಾಬು, ಬೆಳ್ಳಾವಿಯ ಖಾರದ ವೀರ ಬಸವ ಸ್ವಾಮೀಜಿ ಹಾಜರಿದ್ದರು.
Comments are closed.