ಎಲ್ಲಾ ವರ್ಗದವರಿಗೂ ಆರೋಗ್ಯ ಸೇವೆ ದೊರೆಯಲಿ

40

Get real time updates directly on you device, subscribe now.


ತುಮಕೂರು: ಸಿದ್ಧಗಂಗಾ ವೈದ್ಯಕೀಯ ಕಾಲೇಜು ಹಾಗೂ ಇಂಡಿಯನ್ ಆರ್ಥೋಪೆಡಿಕ್ ಆಸೋಸಿಯೇಷನ್ ವತಿಯಿಂದ ಆರ್ಥಿಕವಾಗಿ ದುರ್ಬಲವಾಗಿರುವ ನೂರಕ್ಕೂ ಹೆಚ್ಚು ರೋಗಿಗಳಿಗೆ ಉಚಿತ ಮೂಳೆರೋಗ ಶಸ್ತ್ರಚಿಕಿತ್ಸೆ ಶಿಬಿರಕ್ಕೆ ಸಿದ್ಧಗಂಗಾ ಮಠಾಧ್ಯಕ್ಷ ಸಿದ್ಧಲಿಂಗ ಮಹಾ ಸ್ವಾಮೀಜಿ ಚಾಲನೆ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿ ಶ್ರೀಗಳು ಮಾತನಾಡಿ, ಆರ್ಥಿಕ ಶಕ್ತಿ ಇಲ್ಲದೆ ಮೂಳೆ ರೋಗಗಳ ಶಸ್ತ್ರಚಿಕಿತ್ಸೆ ಸಾಧ್ಯವಾಗದೆ ನೋವಿನಿಂದ ನರಳುತ್ತಿರುವ ಜನರಿಗೆ ಉಚಿತ ಸರ್ಜರಿಗಳ ಮೂಲಕ ಅವರು ಬದುಕಿನಲ್ಲಿ ಬೆಳಕು ಮೂಡಿಸುವುದು ಪರಮಾತ್ಮನ ಸೇವೆ ಮಾಡಿದಷ್ಟೇ ಪವಿತ್ರವಾದ ಕಾರ್ಯವಾಗಿದ್ದು, ಇಂತಹ ಮಹಾತ್ಕಾರ್ಯಗಳ ಮೂಲಕ ಆರೋಗ್ಯ ಸೇವೆಯನ್ನು ಸಮಾಜದ ಎಲ್ಲಾ ವರ್ಗದ ಜನರಿಗೆ ತಲುಪಬೇಕು ಎಂದು ಕರೆ ನೀಡಿದರು.
ಸಿದ್ಧಗಂಗಾ ವೈದ್ಯಕೀಯ ಕಾಲೇಜಿನ ಕಾರ್ಯಕಾರಿ ನಿರ್ದೇಶಕ ಡಾ.ಸಚ್ಚಿದಾನಂದ್ ಮಾತನಾಡಿ ಉಚಿತ ಶಸ್ತ್ರಚಿಕಿತ್ಸೆಗೆ ರಾಜ್ಯಾದ್ಯಂತ ರೋಗಿಗಳು ನೋಂದಣಿಗೆ ಒಳಗಾಗಿದ್ದು ಮೊದಲ ಹಂತದಲ್ಲಿ ನೂರು ಜನರಿಗೆ ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿದೆ, ಮುಂದಿನ ದಿನಗಳಲ್ಲಿ ಮತ್ತಷ್ಟು ವಿಭಾಗಗಳಿಂದ ಶಿಬಿರಗಳನ್ನು ಏರ್ಪಡಿಸುವ ಉದ್ದೇಶ ಹೊಂದಿದ್ದೇವೆ ಎಂದರು.

ಸಿದ್ಧಗಂಗಾ ವೈದ್ಯಕೀಯ ಕಾಲೇಜು ನಿರ್ದೇಶಕ ಡಾ.ಎಸ್.ಪರಮೇಶ್ ಮಾತನಾಡಿ ನಮ್ಮ ಮೆಡಿಕಲ್ ಕಾಲೇಜಿನಲ್ಲಿ ಈಗಾಗಲೇ ಸ್ಪೆಷಾಲಿಟಿ ವಿಭಾಗದ ಎಲ್ಲಾ ಸೇವೆಗಳು ಉಚಿತವಾಗಿ ನೀಡಲಾಗುತ್ತಿದ್ದು, ಆರ್ಥೋಪಡಿಕ್ ಅಸೋಸಿಯೇಷನ್ ರವರು ಮೂಳೆರೋಗಗಳ ಕುರಿತು ಅರಿವು ಮೂಡಿಸುವ ಸಲುವಾಗಿ ನಮ್ಮ ಜೊತೆ ಕೈ ಜೋಡಿಸಿರುವುದು ನೂರಾರು ಜನರಿಗೆ ಉಚಿತ ಸೇವೆ ಲಭ್ಯವಾಗುವಂತೆ ಮಾಡಿದೆ ಎಂದರು.

ಮೂಳೆರೋಗ ವಿಭಾಗದ ಮುಖ್ಯಸ್ಥರಾದ ಡಾ.ಮಹೇಶ್ ಮಾತನಾಡಿ ಮೂಳೆಮುರಿತ, ಸರಿಯಾಗಿ ಜೋಡಣೆಯಾಗದ ಮೂಳೆ, ಇಂಪ್ಲಾಂಟ್ ರಿಮೂವಲ್ ಸರ್ಜರಿ, ಸೋಂಟ ಹಾಗೂ ಮಂಡಿನೋವಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿದೆ. ಮೂರರಿಂದ ನಾಲ್ಕು ದಿನಗಳ ಕಾಲ ದಿನಂಪ್ರತಿ 30 ಶಸ್ತ್ರಚಿಕಿತ್ಸೆಗೆ ಯೋಜನೆ ರೂಪಿಸಿಕೊಂಡಿದ್ದೇವೆ ಎಂದರು.

ಸಿದ್ಧಗಂಗಾ ವೈದ್ಯಕೀಯ ಕಾಲೇಜು ಪ್ರಾಚಾರ್ಯರಾದ ಡಾ.ಶಾಲಿನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿಇಓ ಸಂಜೀವ್ ಕುಮಾರ್ ಇಂಪ್ಲಾಂಟ್ ಗಳನ್ನು ಉಚಿತವಾಗಿ ನೀಡಿದ ಮೆಡಿಲಿಂಕ್ ಹಾಗೂ ಎಂಕೆ ಆರ್ಥೋ ಸಂಸ್ಥೆಗೆ ಅಭಿನಂದಿಸಿದರು.
ತುಮಕೂರು ಆರ್ಥೊಪೆಡಿಕ್ ಅಸೋಸಿಯೇಷನ್ ಅಧ್ಯಕ್ಷ ಡಾ.ತ್ಯಾಗರಾಜು, ವೈದ್ಯಕೀಯ ಅಧೀಕ್ಷಕ ಡಾ.ನಿರಂಜನಮೂರ್ತಿ, ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ.ಚಂದ್ರಶೇಖರ್, ಅಸೋಸಿಯೇಟ್ ಫ್ರೋಫೆಸರ್ ಡಾ.ನಾರಾಯಣ್ ಗೌಡ, ಡಾ.ಲೋಹಿತ್, ಆರ್ಥೋಪೆಡಿಕ್ ವಿಭಾಗದ ವೈದ್ಯರುಗಳಾದ ಡಾ.ದುಷ್ಯಂತ್, ಡಾ.ರಾಹುಲ್, ಡಾ.ಕಾರ್ತಿಕ್, ಡಾ.ಶ್ರವಣ್, ಡಾ.ಸುಮುಖ್ ಇತರರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!