ತುಮಕೂರು: ಶೋಷಿತ ಸಮುದಾಯಗಳ ಮುಖಂಡರಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಇಲ್ಲಸಲ್ಲದ ಆರೋಪ ಮಾಡಿ ತೇಜೋವಧೆ ಮಾಡಲು ಬಿಜೆಪಿ- ಜೆಡಿಎಸ್ ಮೈತ್ರಿಗಳು ರಾಜ್ಯಪಾಲರ ಅಧಿಕಾರ ದುರುಪಯೋಗ ಪಡಿಸಿಕೊಳ್ಳುತ್ತಿವೆ ಎಂದು ಆರೋಪಿಸಿ ಕುರುಬ ಸಮುದಾಯದ ವಿವಿಧ ಸಂಘಟನೆಗಳ ಮುಖಂಡರು ಕರ್ನಾಟಕ ಪ್ರದೇಶ ಕುರುಬರ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಕರ್ನಾಟಕ ಪ್ರದೇಶ ಕುರುಬರ ಸಂಘ, ಬೆಂಗಳೂರು, ಜಿಲ್ಲಾ ಕುರುಬರ ಸಂಘ, ತುಮಕೂರು, ಕಾಳಿದಾಸ ವಿದ್ಯಾವರ್ಧಕ ಸಂಘ, ತುಮಕೂರು, ಕನಕ ಯುವ ಸೇನೆ ತುಮಕೂರು ಹಾಗೂ ತುಮಕೂರು ಜಿಲ್ಲೆಯ ಕುರುಬ ಸಂಘಟನೆಗಳ ಒಕ್ಕೂಟದವತಿಯಿಂದ ನಗರದ ಟೌನ್ ಹಾಲ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ರಾಜ್ಯಪಾಲರು ಮುಖ್ಯಮಂತ್ರಿಗಳಿಗೆ ನೀಡಿರುವ ಷೋಕಾಸ್ ನೋಟಿಸ್ ಹಿಂಪಡೆಯಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಕನಕ ಯುವಸೇನೆಯ ಅಧ್ಯಕ್ಷ ಕೆಂಪರಾಜು ಮಾತನಾಡಿ, ಅಧಿಕಾರದಿಂದ ವಂಚಿತರಾಗಿರುವ, ಜನರಿಂದ ತಿರಸ್ಕೃತರಾಗಿರುವ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು, ರಾಜ್ಯದಲ್ಲಿ ಅಧಿಕಾರದಲ್ಲಿರುವ ಜನಪರ ರಾಜ್ಯ ಸರಕಾರವನ್ನು ಅಸ್ಥಿರಗೊಳಿಸಲು ರಾಜ್ಯಪಾಲರ ಅಧಿಕಾರ ದುಬರ್ಳಕೆ ಮಾಡಿಕೊಳ್ಳುತ್ತಿವೆ, ಎರಡನೇ ಬಾರಿ ಮುಖ್ಯಮಂತ್ರಿಯಾಗಿ ಸುಸೂತ್ರ ಆಡಳಿತ ನೀಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಏಳಿಗೆ ಸಹಿಸಲಾರದೆ ಬಿಜೆಪಿ ಮತ್ತು ಜೆಡಿಎಸ್ ನಾಯಕರು ದೊಡ್ಡ ಮಟ್ಟದ ಷಡ್ಯಂತ್ರ ರೂಪಿಸಿದ್ದಾರೆ, ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದ ನಾಯಕ ಸಿದ್ದರಾಮಯ್ಯ ಅವರ ವರ್ಚಸ್ಸಿಗೆ ಮಸಿ ಬಳಿದು ಅವರನ್ನು ರಾಜಕೀಯವಾಗಿ ಮುಗಿಸಿಯೇ ಬಿಡುವ ಹುನ್ನಾರ ಮಾಡುತ್ತಿದ್ದಾರೆ, ಬಿಜೆಪಿ ಮತ್ತು ಜೆಡಿಎಸ್ ರಾಜ್ಯ ನಾಯಕರ ಕುತಂತ್ರಕ್ಕೆ ಬಿಜೆಪಿಯ ರಾಷ್ಟ್ರೀಯ ನಾಯಕರೂ ಕುಮ್ಮಕ್ಕು ನೀಡುತ್ತಿದ್ದಾರೆ ಎಂದರು.
ಕಾಳಿದಾಸ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಮೈಲಪ್ಪ ಮಾತನಾಡಿ, ತಮ್ಮ ಮೇಲಿನ ಆರೋಪಕ್ಕೆ ಸ್ವತಃ ತನಿಖಾ ಆಯೋಗ ರಚಿಸಿರುವ ದೇಶದ ಏಕೈಕ ನಾಯಕ ಮುಖ್ಯಮಂತ್ರಿ ಸಿದ್ದರಾಮಯ್ಯ, ನ್ಯಾಯಾಂಗ ತನಿಖೆಯಿಂದ ಎಲ್ಲಿ ನಮ್ಮ ಹುಳುಕುಗಳು ಹೊರಬಂದು ಜೈಲು ಸೇರಬೇಕಾಗುತ್ತದೆಯೋ ಎಂದು ಹೆದರಿರುವ ವಿರೋಧ ಪಕ್ಷಗಳು ಪಾದಯಾತ್ರೆ ನಡೆಸುತ್ತಿವೆ ಎಂದರು.
ತುಮಕೂರು ಜಿಲ್ಲಾ ಕುರುಬರ ಸಂಘದ ಜಿಲ್ಲಾಧ್ಯಕ್ಷ ಟಿ.ಆರ್.ಸುರೇಶ್, ಕನಕ ಮಹಿಳಾ ಪತ್ತಿನ ಸಹಕಾರ ಸಂಘದ ಅಧ್ಯಕ್ಷೆ ಸುನೀತ ನಟರಾಜ್, ಕರ್ನಾಟಕ ಪ್ರದೇಶ ಕುರುಬರ ಸಂಘದ ಅಂತರಿಕ ಲೆಕ್ಕ ಪರಿಶೋಧಕ ಟಿ.ಇ.ರಘುರಾಮ್, ಸೌಭಾಗ್ಯ, ಗುರು ಪ್ರಸಾದ್, ಅನಿಲ್, ಮಹೇಶ್, ಮಹಾಲಿಂಗಯ್ಯ, ಪುಟ್ಟಣ್ಣ, ರಘುರಾಮ್, ಜ್ವಾಲಮಾಲ ರಾಜಣ್ಣ, ಸಂಪತ್ ಕುಮಾರಿ, ಮಂಜುಳ, ಶೇಷಗಿರಿ ಇತರರು ಇದ್ದರು.
Comments are closed.