ತುಮಕೂರು: ತುಮಕೂರು ವಿಶ್ವವಿದ್ಯಾನಿಲಯದ 17ನೇ ವಾರ್ಷಿಕ ಘಟಿಕೋತ್ಸವ ಆಗಸ್ಟ್ 7ರಂದು ಬೆಳಗ್ಗೆ 11.30 ಗಂಟೆಗೆ ಕುಲಪತಿ ಕಚೇರಿ ಮುಂಭಾಗದ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಸಕಲ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ತಿಳಿಸಿದರು.
ವಿಶ್ವ ವಿದ್ಯಾಲಯದ ಸರ್.ಎಂ.ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಮಾಧ್ಯಮ ಗೋಷ್ಠಿ ನಡೆಸಿ ಮಾತನಾಡಿ, ಘಟಿಕೋತ್ಸವದಲ್ಲಿ ಕ್ರೀಡೆ ಮತ್ತು ಸಂಸ್ಕೃತಿ ವಿಭಾಗದಲ್ಲಿ ಜಲಕ್ರೀಡಾ ಸಾಹಸಿಗ ಮತ್ತು ಸಾಮಾಜಿಕ ಕಾರ್ಯಕರ್ತರಾಗಿ ಗುರುತಿಸಿಕೊಂಡಿರುವ ಜಿಲ್ಲೆಯ ಸುಗ್ಗನಪಾಳ್ಯದ ಎಸ್.ಸಿ. ನಾಗಾನಂದ ಸ್ವಾಮಿ, ಸಮಾಜ ಸೇವಾ ವಿಭಾಗದಲ್ಲಿ ಕೈಗಾರಿಕೋದ್ಯಮಿ ಎಚ್.ಜಿ.ಚಂದ್ರಶೇಖರ್, ಆಧ್ಯಾತ್ಮಿಕ ಮತ್ತು ಸಾಮಾಜಿಕ ಸೇವಾ ವಿಭಾಗದಲ್ಲಿ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕು ರಾಜನಹಳ್ಳಿ ಶ್ರೀಮಹರ್ಷಿ ವಾಲ್ಮೀಕಿ ಗುರುಪೀಠದ ಜಗದ್ಗುರು ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಸೇರಿ ಮೂವರಿಗೆ ಗೌರವ ಡಾಕ್ಟರೇಟ್ ಹಾಗೂ 36 ಅಭ್ಯರ್ಥಿಗಳಿಗೆ ಪಿಎಚ್ ಡಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು.
ಕರ್ನಾಟಕದ ಘನತೆವೆತ್ತ ರಾಜ್ಯಪಾಲರು ಹಾಗೂ ತುಮಕೂರು ವಿಶ್ವ ವಿದ್ಯಾಲಯದ ಕುಲಾಧಿಪತಿ ಥಾವರ್ ಚಂದ್ ಗೆಹ್ಲೋಟ್ ಘಟಿಕೋತ್ಸವದ ಅಧ್ಯಕ್ಷತೆ ವಹಿಸಲಿದ್ದು, ರಾಜ್ಯದ ಉನ್ನತ ಶಿಕ್ಷಣ ಸಚಿವ ಹಾಗೂ ತುಮಕೂರು ವಿಶ್ವ ವಿದ್ಯಾಲಯದ ಸಮ ಕುಲಾಧಿಪತಿ ಡಾ.ಎಂ.ಸಿ. ಸುಧಾಕರ್ ಉಪಸ್ಥಿತರಿರುತ್ತಾರೆ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಯ ವಿಶ್ರಾಂತ ಅಧ್ಯಕ್ಷ ಡಾ.ಎ.ಎಸ್.ಕಿರಣ್ ಕುಮಾರ್ ಘಟಿಕೋತ್ಸವದ ಭಾಷಣ ಮಾಡಲಿದ್ದಾರೆ ಎಂದು ತಿಳಿಸಿದರು.
ಈ ಬಾರಿ ಘಟಿಕೋತ್ಸವದಲ್ಲಿ 3 ಅಭ್ಯರ್ಥಿಗಳಿಗೆ ಡಿಲಿಟ್ ಪದವಿ, 1758 ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಹಾಗೂ 10,230 ವಿದ್ಯಾರ್ಥಿಗಳಿಗೆ ಸ್ನಾತಕ ಪದವಿ ಸೇರಿದಂತೆ ಒಟ್ಟು 11988 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುವುದು ಎಂದರು.
ವಿಶ್ವ ವಿದ್ಯಾಲಯದ ಎಲ್ಲಾ ಸ್ನಾತಕೋತ್ತರ ಪದವಿಗಳಿಗೆ ತಲಾ ಐದು ರ್ಯಾಂಕ್, ಬಿಎ, ಬಿಎಸ್ ಡಬ್ಲ್ಯೂ, ಬಿಎಸ್ಸಿ, ಬಿಕಾಂ, ಬಿಬಿಎಂ, ಬಿಇಡಿ (ಸೆಮಿಸ್ಟರ್ ಪದ್ಧತಿ) ಪದವಿಗಳಿಗೆ ತಲಾ 10, ಬಿಎಫ್ ಎ, ಬಿವಿಎ, ಬಿಎ ಇಂಟಿಗ್ರೇಟೆಡ್ ಕನ್ನಡ ಪಂಡಿತ್ ಗೆ ತಲಾ 1 ರ್ಯಾಂಕ್ ಘೋಷಿಸಲಾಗಿದ್ದು, ಒಟ್ಟು 74 ವಿದ್ಯಾರ್ಥಿಗಳಿಗೆ 98 ಚಿನ್ನದ ಪದಕ ಹಾಗೂ 8 ನಗದು ಬಹುಮಾನಗಳನ್ನು ಘಟಿಕೋತ್ಸವದಲ್ಲಿ ಪ್ರದಾನ ಮಾಡಲಿದೆ ಎಂದು ತಿಳಿಸಿದರು.
ವಿಶ್ವ ವಿದ್ಯಾಲಯದ ಶೈಕ್ಷಣಿಕ ಪ್ರಗತಿ ಮಾಹಿತಿ ಹಂಚಿಕೊಂಡ ಅವರು ಕಡಿಮೆ ಶುಲ್ಕದಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುವ ನಿಟ್ಟಿನಲ್ಲಿ ವಿಶ್ವ ವಿದ್ಯಾಲಯ ವಿದ್ಯಾರ್ಥಿ ಸ್ನೇಹಿ ಪರೀಕ್ಷೆ ನಡೆಸುತ್ತಿದೆ, ನಿರ್ಧಿಷ್ಟ ಅವಧಿಯೊಳಗೆ ಎಲ್ಲಾ ವಿಶ್ವ ವಿದ್ಯಾಲಯಗಳು ಶೈಕ್ಷಣಿಕ ವರ್ಷವನ್ನು ಮುಗಿಸುವಂತೆ ರಾಜ್ಯ ಸರ್ಕಾರದಿಂದ ನಿರ್ದೇಶನ ನೀಡಿದ್ದು, ಅದರಂತೆ ಸಕಾಲದಲ್ಲಿ ಪಠ್ಯಗಳನ್ನು ಪೂರ್ಣಗೊಳಿಸಿ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ, ವಿದ್ಯಾರ್ಥಿಗಳ ಉನ್ನತ ವ್ಯಾಸಂಗ ಹಾಗೂ ನೇಮಕಾತಿ ದೃಷ್ಟಿಯಲ್ಲಿಟ್ಟುಕೊಂಡು ಪರೀಕ್ಷೆ ನಡೆದ ನಂತರ ಶೀಘ್ರವಾಗಿ ಫಲಿತಾಂಶ ನೀಡುವ ಉದ್ದೇಶದಿಂದ ವಿಶ್ವ ವಿದ್ಯಾಲಯದ ಪ್ರಾಧ್ಯಾಪಕರು ರಜೆ ಇಲ್ಲದೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದ ಅವರು ಸ್ಥಳದ ಅಭಾವವಿರುವುದರಿಂದ ಹೊಸ ಕೋರ್ಸ್ಗಳನ್ನು ಪ್ರಾರಂಭಿಸಲು ಸಾಧ್ಯವಾಗುತ್ತಿಲ್ಲ ಎಂದರು.
ಮಾಧ್ಯಮ ಗೋಷ್ಠಿಯಲ್ಲಿ ತುಮಕೂರು ವಿಶ್ವ ವಿದ್ಯಾಲಯದ ಕುಲಸಚಿವ (ಆಡಳಿತ) ರಾದ ನಾಹಿದಾ ಜಮ್ ಜಮ್, ಪರೀಕ್ಷಾಂಗ ಕುಲಸಚಿವ ಪ್ರೊ.ಕೆ.ಪ್ರಸನ್ನಕುಮಾರ್, ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥ ಸಿಬಂತಿ ಪದ್ಮನಾಭ ಇತರರು ಇದ್ದರು.
Comments are closed.