ಸ್ತನ್ಯಪಾನದಿಂದ ಮಗುವಿನ ರೋಗ ನಿರೋಧಕ ಶಕ್ತಿ ವೃದ್ಧಿ

43

Get real time updates directly on you device, subscribe now.


ತುಮಕೂರು: ನವಜಾತ ಶಿಶುಗಳು ಜನಿಸಿದ 1 ಗಂಟೆಯೊಳಗೆ ಸ್ತನ್ಯಪಾನ ಮಾಡಿಸುವುದರಿಂದ ಮಗುವಿನ ರೋಗ ನಿರೋಧಕ ಶಕ್ತಿ ವೃದ್ಧಿಯಾಗುತ್ತದೆ ಎಂದು ತುಮಕೂರು ಗ್ರಾಮಾಂತರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶಶಿಧರ್.ಬಿ. ತಿಳಿಸಿದರು.
ತುಮಕೂರು ಗ್ರಾಮಾಂತರ ಶಿಶು ಅಭಿವೃದ್ಧಿ ಯೋಜನೆ, ಆರೋಗ್ಯ ಇಲಾಖೆ ಹಾಗೂ ಮೈದಾಳ ಗ್ರಾಮ ಪಂಚಾಯತಿ ಸಹಯೋಗದಲ್ಲಿ ಮೈದಾಳ ಅಂಗನವಾಡಿ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಪ್ರಸಕ್ತ ವರ್ಷ ಅಂತರ ಕೊನೆಗೊಳಿಸಿ-ಎಲ್ಲರೂ ಸ್ತನ್ಯಪಾನಕ್ಕೆ ಬೆಂಬಲಿಸಿ ಎಂಬ ಘೋಷ ವಾಕ್ಯದೊಂದಿಗೆ ವಿಶ್ವ ಸ್ತನ್ಯಪಾನ ಸಪ್ತಾಹ ಆಚರಿಸಲಾಗುತ್ತಿದೆ ಎಂದರಲ್ಲದೆ, ಸ್ತನ್ಯಪಾನದ ಮಹತ್ವದ ಬಗ್ಗೆ ತಾಯಂದಿರಿಗೆ ಮಾಹಿತಿ ನೀಡಿದರು.

ಊರ್ಡಿಗೆರೆ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ.ಶೃತಿ ಮಾತನಾಡಿ ಸ್ತನ್ಯಪಾನದಿಂದ ನವಜಾತ ಮಗುವಿನ ಸರ್ವತೋಮುಖ ಬೆಳವಣಿಗೆಯಾಗುತ್ತದೆ, ಹೆರಿಗೆ ಪೂರ್ವ ಸ್ತನ್ಯಪಾನಕ್ಕೆ ಸಂಬಂಧಿಸಿದಂತೆ ಅನುಸರಿಸಬೇಕಾದ ಕ್ರಮಗಳ ಬಗ್ಗೆ ನವ ವಿವಾಹಿತೆಯರು, ಗರ್ಭಿಣಿ ಸ್ತ್ರೀ, ಹಾಲುಣಿಸುವ ತಾಯಂದಿರಿಗೆ ಮಾಹಿತಿ ನೀಡಿದರು.

ಹೆರಿಗೆಯ ನಂತರ ಕನಿಷ್ಠ 1 ಗಂಟೆಯೊಳಗಾಗಿ ತಾಯಿ ತನ್ನ ಮಗುವಿಗೆ ಹಳದಿ ಬಣ್ಣದ ಗಿಣ್ಣು ಹಾಲನ್ನುಣಿಸಬೇಕು, ಈ ಹಾಲಿನಲ್ಲಿ ಅತಿ ಹೆಚ್ಚು ರೋಗ ನಿರೋಧಕ ಶಕ್ತಿ ಇರುತ್ತದೆ, ಮಗುವಿಗೆ 6 ತಿಂಗಳು ತುಂಬುವತನಕ ತಾಯಿಯ ಎದೆ ಹಾಲನ್ನು ಹೊರತುಪಡಿಸಿ ಬೇರಾವುದೇ ಘನ ಅಥವಾ ದ್ರವ ಆಹಾರ ತಿನಿಸಬಾರದು, ಎದೆ ಹಾಲಿನ ಜೊತೆಗೆ ಪೂರಕ ಪೌಷ್ಠಿಕ ಆಹಾರವನ್ನು 6 ತಿಂಗಳಿನಿಂದ 2 ವರ್ಷಗಳ ವರೆಗೆ ನಿಯಮಿತವಾಗಿ ಮಗುವಿಗೆ ನೀಡುವುದನ್ನು ಪ್ರಾರಂಭಿಸಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ತ್ರಿವೇಣಿ, ಮೈದಾಳ ಪಂಚಾಯತಿಯ ಅಭಿವೃದ್ಧಿ ಅಧಿಕಾರಿ ಮೋಹನ್ ಕುಮಾರ್, ಪಂಚಾಯತಿ ಅಧ್ಯಕ್ಷ ರಮೇಶ್, ಉಪಾಧ್ಯಕ್ಷ ಗಂಗಮ್ಮ, ಅಂಗನವಾಡಿ ಮೇಲ್ವಿಚಾರಕರು ಹಾಗೂ ಕಾರ್ಯಕರ್ತೆಯರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!