ಕುಣಿಗಲ್: ಪುರಸಭೆಯ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲು ಘೋಷಣೆಯಾಗಿದ್ದು ಅಧಿಕ ಸ್ಥಾನ ಹೊಂದಿರುವ ಕಾಂಗ್ರೆಸ್ ಪಕ್ಷದಲ್ಲೆ ಗದ್ದುಗೆ ಹಿಡಿಯಲು ಹೈಕಮಾಂಡ್ ಮನವೊಲಿಕೆಗೆ ಆಕಾಂಕ್ಷಿಗಳು ಬೆಂಗಳೂರಿಗೆ ಬೆಂಬಲಿಗರ ಸಮೇತ ಸುತ್ತಾಟ ಆರಂಭಿಸಿದ್ದಾರೆ.
ಪುರಸಭೆ ಅಧ್ಯಕ್ಷ ಸ್ಥಾನವು ಸಾಮಾನ್ಯಮಹಿಳೆ, ಉಪಾಧ್ಯಕ್ಷ ಸ್ಥಾನ ಪ.ಜಾತಿಗೆ ಮೀಸಲು ಘೊಷಣೆಯಾಗಿದೆ, ಪುರಸಭೆಗೆ ಆಡಳಿತಾಧಿಕಾರಿ ನೇಮಕಗೊಂಡು 13 ತಿಂಗಳು ಕಳೆದಿವೆ, 23 ಸದಸ್ಯ ಬಲದ ಪುರಸಭೆಯಲ್ಲಿ ಜೆಡಿಎಸ್- 3, ಬಿಜೆಪಿ- 4, ಪಕ್ಷೇತರ- 2 ಹಾಗೂ ಕಾಂಗ್ರೆಸ್- 14 ಸ್ಥಾನ ಬಲಾಬಲ ಹೊಂದಿದೆ, ಆದರೆ ಜೆಡಿಎಸ್ ನ ಇಬ್ಬರೂ, ಪಕ್ಷೇತರ ಇಬ್ಬರೂ ಕಾಂಗ್ರೆಸ್ ಪಕ್ಷದ ಜೊತೆ ಗುರುತಿಸಿ ಕೊಂಡಿರುವುದರಿಂದ ಕಾಂಗ್ರೆಸ್ ನ ಬಲಾಬಲ 18 ಕ್ಕೆ ಏರಿದೆ, ಮೀಸಲು ಘೋಷಣೆ ಮುನ್ನ ಪುರಸಭೆ ಅಧ್ಯಕ್ಷ ಸ್ಥಾನ ಬಿಸಿಎಂ- ಎ ಮಾಡಿಸಿ ಅಧ್ಯಕ್ಷ ಗಾದಿ ಹಿಡಿಯಲು ಕಾಂಗ್ರೆಸ್ ನ ಹಿರಿಯ ಸದಸ್ಯ ಸಮೀವುಲ್ಲಾ, ಮಾಜಿ ಸಂಸದ, ಹಾಲಿ ಶಾಸಕರ ಮೇಲೆ ಒತ್ತಡ ಹಾಕಿದ್ದಾರೆ, ಬಿಸಿಎಂ- ಬಿ ಸ್ಥಾನ ಮಾಡಿಸಿ ಅಧ್ಯಕ್ಷ ಗಾದಿಯಿಂದ ಕಳೆದ ಬಾರಿ ವಂಚಿತರಾಗಿದ್ದ ಮತ್ತೋರ್ವ ಸದಸ್ಯ ಅರುಣ್ ಕುಮಾರ್ ಸಹ ಶ್ರಮಿಸಿದ್ದರು, ಆದರೆ ಸೋಮವಾರ ಪ್ರಕಟವಾದ ಮೀಸಲು ಪಟ್ಟಿಯು ಇಬ್ಬರು ಪ್ರಬಲ ಆಕಾಂಕ್ಷಿಗಳ ಆಸೆಗೆ ತಣ್ಣೀರು ಎರಚಿದಂತಾಗಿದೆ.
ಈ ಮದ್ಯೆ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲು ಘೋಷಣೆಯಾದ್ದರಿಂದ ಕಾಂಗ್ರೆಸ್ ನಲ್ಲೆ ಪ್ರಬಲ ಸ್ಪರ್ಧೆ ಏರ್ಪಟ್ಟಿದ್ದು ಕಾಂಗ್ರೆಸ್ ಸದಸ್ಯರಾದ ಆಸ್ಮಾ, ಅಂಜುಂ ಅರಾ, ಜಯಲಕ್ಷ್ಮೀ ಸದಸ್ಯರ ಬೆಂಬಲ ಪಡೆಯಲು ಮುಂದಾಗಿದ್ದು ಇವರ ಜೊತೆಯಲ್ಲಿ ಹಿಂದೆ ಉಪಾಧ್ಯಕ್ಷರಾಗಿದ್ದ ಮಂಜುಳಾ, ಶಬನಾ ತಬಸ್ಸುಮ್ ಸಹ ಪ್ರಯತ್ನಕ್ಕೆ ಇಳಿದಿದ್ದಾರೆ ಎನ್ನಲಾಗಿದೆ, ಕೈ ಪಾಳೆಯದ ಸದಸ್ಯರ ಸ್ಪರ್ಧೆ ನಡುವೆಯೆ ಬೇರೆ ಪಕ್ಷದಿಂದ ವಲಸೆ ಬಂದ ಮಹಿಳಾ ಸದಸ್ಯರು ಸಹ ಅದೃಷ್ಟ ಪರೀಕ್ಷೆಗೆ ತಮ್ಮದೆ ಆದ ರೀತಿ ಪ್ರಯತ್ನಕ್ಕೆ ಮುಂದಾಗಿದ್ದಾರೆ, ಸಾಮಾನ್ಯ ಮಹಿಳೆಗೆ ಮೀಸಲಾಗಿರುವ ಕಾರಣ ಕಾಂಗ್ರೆಸ್ ನ ಬಹುತೇಕ ಎಲ್ಲಾ ಮಹಿಳಾ ಸದಸ್ಯರ ಪತಿಯಂದಿರು ತಮ್ಮದೆ ಆದ ಲಾಭಿ ನಡೆಸಿ ಹೈಕಮಾಂಡ್ ಮನವೊಲಿಸಲು ಯತ್ನ ನಡೆಸಿದ್ದಾರೆ, ಈ ಮಧ್ಯೆ ಉಪಾಧ್ಯಕ್ಷ ಸ್ಥಾನ ಪ.ಜಾತಿಗೆ ಮೀಸಲಿದ್ದು ಇದಕ್ಕೆ 22ನೇ ವಾರ್ಡ್ನ ಶ್ರೀನಿವಾಸ್ ಹಾಗೂ 12ನೇ ವಾರ್ಡ್ನ ರೂಪಿಣಿ ಅರ್ಹರಿದ್ದು ಈ ಪೈಕಿ ಇಬ್ಬರೂ ಕಾಂಗ್ರೆಸ್ ಜೊತೆ ಗುರುತಿಸಿಕೊಂಡಿದ್ದರೂ ಪಕ್ಷೇತರರಾಗಿರುವ ಕಾರಣ ಹೈಕಮಾಂಡ್ ಯಾರಿಗೆ ಮಣೆ ಹಾಕುತ್ತದೆ ಎಂಬ ತರ್ಕ ನಡೆಯುತ್ತಿದೆ, ಮೀಸಲು ಸ್ಥಾನ ಘೋಷಣೆ ಹಿನ್ನೆಲೆಯಲ್ಲೆ ಹೈಕಮಾಂಡ್ ಮನವೊಲಿಸಲು ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಆಕಾಂಕ್ಷಿಗಳು ಒತ್ತಡ ಹಾಕಲು ಮುಂದಾಗಿದ್ದು ಇನ್ನು ಚುನಾವಣೆ ದಿನಾಂಕ ಘೋಷಣೆಯಾದರೆ ಎಷ್ಟರ ಮಟ್ಟಿಗೆ ಹೋರಾಟ ನಡೆಸುತ್ತಾರೆ ಎಂಬುದು ಪಟ್ಟಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
Comments are closed.