ಕುಣಿಗಲ್: ಪದವಿ ಮುಗಿಸಿರುವ ಶಿಕ್ಷಕರನ್ನು ಪದವೀಧರ ಶಿಕ್ಷಕರೆಂದು ಘೋಷಿಸಬೇಕು, 2017ರ ಹೊಸ ವೃಂದ ಮತ್ತು ನೇಮಕಾತಿಗಳನ್ನು 2016ರ ಮೊದಲು ನೇಮಕಗೊಂಡವರಿಗೆ ಪೂರ್ವನ್ವಯ ಗೊಳಿಸಬಾರದು ಎಂಬುದು ಸೇರಿದಂತೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಆಗಸ್ಟ್ 12ಕ್ಕೆ ಸ್ವಾತಂತ್ರ್ಯ ಉದ್ಯಾನದಲ್ಲಿ ರಾಜ್ಯಮಟ್ಟದ ಬೃಹತ್ ಪ್ರತಿಭಟನೆ ನಡೆಸಲು ಚಿಂತಿಸಿದೆ ಎಂದು ಕುಣಿಗಲ್ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರು ಗೋವಿಂದರಾಜು ಹೇಳಿದರು.
ಈ ಬಗ್ಗೆ ವಿವರಣೆ ನೀಡಿ, ಪದವಿ ಪೂರೈಸಿರುವ ಶಿಕ್ಷಕರನ್ನು ಪದವೀಧರ ಶಿಕ್ಷಕರೆಂದು ಮುಂದಿನ ಅವರ ಸೇವಾ ಬಡ್ತಿಗೆ ಪರಿಗಣಿಸಬೇಕು, ಅದೇ ರೀತಿ, 2017ರ ಹೊಸ ನಿಯಮ ಜಾರಿಯಿಂದ ಒಂದರಿಂದ ಏಳನೇ ತರಗತಿ ವರೆಗಿನ ಬೋಧನೆಗೆ ಎಂದು ನೇಮಕಾತಿ ಮಾಡಿಕೊಂಡಿದ್ದ ಸರ್ಕಾರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಒಂದರಿಂದ ಐದನೇ ತರಗತಿ ಬೋಧನೆಗೆ ಮಾತ್ರ ಸೀಮಿತ ಎಂದು ಹಿಂಬಡ್ತಿ ನೀಡಲಾಗಿದೆ, ಪ್ರಾಥಮಿಕ ಶಾಲಾ ಶಿಕ್ಷಕರು ಬಿಎ,ಬಿಎಡ್, ಎಂಎ, ಎಂಎಡ್, ಬಿಎಸ್ಸಿ, ಬಿಎಡ್, ಹಲವು ಪದವಿಗಳನ್ನು ಪಡೆದುಕೊಂಡಿದ್ದರೂ ಪದವೀಧರರೆಂದು ಪರಿಗಣಿಸದೆ ಅನ್ಯಾಯವಾಗಿರುತ್ತದೆ, ಅಲ್ಲದೆ ಸಾಕಷ್ಟು ಅನ್ಯಾಯವಾಗುತ್ತಿದೆ, ಈ ಎಲ್ಲದರ ಬಗ್ಗೆ ಸರ್ಕಾರಕ್ಕೆ ಹಲವು ಬಾರಿ ಮನವಿ ನೀಡಿ ನ್ಯಾಯ ಸರಿಪಡಿಸಬೇಕೆಂದು ಬೇಡಿಕೆ ಇಟ್ಟರೂ ಪ್ರಯೋಜನವಾಗಿಲ್ಲ, ಹಾಗಾಗಿ ಹೋರಾಟ ಅನಿವಾರ್ಯವಾಗಿದ್ದು ಆಗಸ್ಟ್ 12 ರಂದು ರಾಜ್ಯಮಟ್ಟದ ಬೃಹತ್ ಪ್ರತಿಭಟನೆ ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಈ ಬಗ್ಗೆ ತಾಲೂಕು ಶಾಸಕರಿಗೂ, ತಹಶೀಲ್ದಾರ್ ರಶ್ಮಿಯವರಿಗೂ ಮನವಿ ನೀಡಿ ಸರ್ಕಾರದ ಗಮನ ಸೆಳೆಯುವಂತೆ ಮನವಿ ಮಾಡಲಾಗಿದೆ ಎಂದಿದ್ದಾರೆ, ಹೋರಾಟಕ್ಕೆ ಕುಣಿಗಲ್ ತಾಲೂಕಿನಿಂದ 300 ಕ್ಕೂ ಹೆಚ್ಚು ಶಿಕ್ಷಕರು ಭಾಗವಹಿಸಲಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ.ಆರ್.ವೆಂಕಟೇಶ್, ಪ್ರಧಾನ ಕಾರ್ಯದರ್ಶಿ ಬೋರೇಗೌಡ.ಜಿ.ಡಿ, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಕಾಳೇಗೌಡ.ಕೆ.ಜಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಉಪಾಧ್ಯಕ್ಷರಾದ ನಂದಿನಿ.ಎಸ್, ಚಂದ್ರಕಲಾ, ವಿದ್ಯಾ ಇಲಾಖೆ ಸಹಕಾರ ಸಂಘದ ಅಧ್ಯಕ್ಷ ಶಿವರಾಮಯ್ಯ.ಜಿ, ಸಹ ಕಾರ್ಯದರ್ಶಿ ಸುಜಾತ.ಸಿ, ಖಜಾಂಚಿ ಉಮೇಶ್ ಹಾಗೂ ಆಸಿಫ್ ಪಾಷಾ, ದೊಡ್ಡಯ್ಯ, ಶಶಿಧರ, ಪಾಪೇಗೌಡ ಹಾಗೂ ನಿರ್ದೇಶಕರು ಹಾಜರಿದ್ದರು.
Comments are closed.