ರೈತನಿಗೆ ಅನ್ಯಾಯ ಖಂಡಿಸಿ ಪ್ರತಿಭಟನೆ ಆ.12ಕ್ಕೆ

15

Get real time updates directly on you device, subscribe now.


ತುಮಕೂರು: ತುರುವೇಕೆರೆ ಪಟ್ಟಣದ ಕರ್ನಾಟಕ ಬ್ಯಾಂಕ್ ನವರು ರೈತರೊಬ್ಬರು ಟ್ರಾಕ್ಟರ್ ಸಾಲಕ್ಕಾಗಿ ಅಡವಿಟ್ಟ 6.10 ಗುಂಟೆ ಜಮೀನನ್ನು ಒಟಿಎಸ್ ಗೆ ಅವಕಾಶ ನೀಡದೆ ಈ ಟೆಂಡರ್ ಮೂಲಕ ಅತಿ ಕಡಿಮೆ ಬೆಲೆಗೆ ಹರಾಜು ಮಾಡಿ, ರೈತರನ್ನು ಬೀದಿಗೆ ತಳ್ಳಲು ಹೊರಟಿರುವ ಕ್ರಮ ವಿರೋಧಿಸಿ ಆಗಸ್ಟ್ 12ರ ಸೋಮವಾರ ಬ್ಯಾಂಕ್ ನ ಮುಂದೆ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಹಾಗೂ ತುಮಕೂರು ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ತಿಳಿಸಿದ್ದಾರೆ.

ತುಮಕೂರು ವಿಜ್ಞಾನ ಕೇಂದ್ರದಲ್ಲಿ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 2005ರಲ್ಲಿ ತುರುವೇಕೆರೆ ತಾಲೂಕು ತಾಳೆಕೆರೆ ಗ್ರಾಮದ ನಾಗರಾಜು ಎಂಬುವವರು ಟ್ರಾಕ್ಟರ್ ಗಾಗಿ ತುರುವೇಕೆರೆ ಕರ್ನಾಟಕ ಬ್ಯಾಂಕ್ ನಿಂದ 4.50 ಲಕ್ಷದ ಸಾಲ ಪಡೆದಿದ್ದು, ಕಟ್ಟಲು ಸಾಧ್ಯವಾಗಿರಲಿಲ್ಲ, ಈಗ ಬ್ಯಾಂಕ್ನವರು ಸಾಲದ ಮೇಲಿನ ಬಡ್ಡಿ, ಚಕ್ರ ಬಡ್ಡಿ ಸೇರಿಸಿ 34.80 ಲಕ್ಷ ರೂ. ಬಾಕಿ ತೋರಿಸಿ, ಓಟಿಎಸ್ ಗೂ ಅವಕಾಶ ನೀಡದೆ, ನ್ಯಾಯಾಲಯದ ಡಿಕ್ರಿ ಪ್ರಕಾರ ಈ ಟೆಂಡರ್ ಮೂಲಕ ಮೂರು ಕೋಟಿಗೆ ಹೋಗುವ ಆಸ್ತಿಯನ್ನು ಕೇವಲ 35.40 ಲಕ್ಷ ರೂ. ಗಳಿಗೆ ಮಾರಾಟ ಮಾಡಿದ್ದಾರೆ, ಕೇಂದ್ರದ ಸರ್ಫೇಸಿ ಕಾಯ್ದೆ ಮುಂದಿಟ್ಟುಕೊಂಡು ರೈತರ ಭೂಮಿಯನ್ನು ಈ ಹರಾಜು ಮಾಡಿರುವುದು ಸರಿಯಲ್ಲ, ಇದು ಆರ್ ಬಿಐ ನಿಯಮಗಳಿಗೆ ವಿರುದ್ಧವಾದ ನಡೆಯಾಗಿದೆ, ಅಲ್ಲದೆ ರೈತವಿರೋಧಿ ನಡೆಯಾಗಿದೆ, ಹಾಗಾಗಿ ಆಗಸ್ಟ್ 12 ರಂದು ಬ್ಯಾಂಕ್ ನ ಮುಂದೆ ಬೃಹತ್ ಹೋರಾಟ ನಡಸಲಾಗುತ್ತಿದೆ ಎಂದರು.

ರೈತ ವಿರೋಧಿ ಕರ್ನಾಟಕ ಬ್ಯಾಂಕ್ ನ ವಿರುದ್ಧದ ಈ ಬೃಹತ್ ರೈತ ಹೋರಾಟದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ಗೌರವಾಧ್ಯಕ್ಷ ಚಾಮರಸ ಮಾಲಿ ಪಾಟೀಲ್, ಪ್ರಧಾನ ಕಾರ್ಯದರ್ಶಿ ರವಿಕಿರಣ್ ಪೂಣಚ್ಚ, ಕಾರ್ಯಾಧ್ಯಕ್ಷ ಜೆ.ಎಂ.ವೀರಸಂಗಯ್ಯ, ಎ.ಗೋವಿಂದರಾಜು, ಉಪಾಧ್ಯಕ್ಷರಾದ ಎ.ಎಂ.ಮಹೇಶಪ್ರಭು, ಶಿವಾನಂದ ಕುಗ್ವೆ, ಕೆ.ಮಲ್ಲಯ್ಯ, ಮಹಿಳಾ ಪ್ರಧಾನ ಕಾರ್ಯದರ್ಶಿ ಮಂಜುಳ ಎಸ್ ಅಕ್ಕಿ, ನೇತ್ರಾವತಿ ಸೇರಿದಂತೆ ತುಮಕೂರು, ಮಂಡ್ಯ, ಮೈಸೂರು, ರಾಮನಗರ, ಹಾಸನ, ಕೊಡಗು ಜಿಲ್ಲೆಗಳ ಪದಾಧಿಕಾರಿಗಳು ಈ ಹೋರಾಟದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಎ.ಗೋವಿಂದರಾಜು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಎಸ್.ಶಂಕರಪ್ಪ, ತಾಲೂಕು ಅಧ್ಯಕ್ಷ ಚಿಕ್ಕಬೋರೇಗೌಡ, ಶ್ರೀನಿವಾಸ್, ತಿಮ್ಮೇಗೌಡ, ಶಬ್ಬೀರ್ ಪಾಷ, ಅಸ್ಲಾಂ ಪಾಷ, ಮಹೇಶ್, ರಾಮಚಂದ್ರಪ್ಪ, ಈಶ್ವರಣ್ಣ, ರಾಜು.ಡಿ.ಕೆ. ಮತ್ತಿತರರು ಪಾಲ್ಗೊಂಡಿದ್ದರು.

Get real time updates directly on you device, subscribe now.

Comments are closed.

error: Content is protected !!