ತುಮಕೂರು: ನಗರದ ಜೂನಿಯರ್ ಕಾಲೇಜು ಮೈದಾನದ ಆವರಣದಲ್ಲಿದ್ದ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಚೇರಿ ಟೌನ್ ಹಾಲ್ ವೃತ್ತದಲ್ಲಿರುವ ಹಳೆಯ ಗ್ರಂಥಾಲಯ ಕಟ್ಟಡಕ್ಕೆ ಶುಕ್ರವಾರ ಬೆಳಗ್ಗೆ ಸ್ಥಳಾಂತರಿಸಿದ್ದು, ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಕಚೇರಿ ಉದ್ಘಾಟಿಸಿದರು.
ನಂತರ ಮಾತನಾಡಿದ ಶ್ರೀಸಿದ್ದಲಿಂಗ ಸ್ವಾಮೀಜಿ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಕಚೇರಿ ಈಗ ಟೌನ್ ಹಾಲ್ ವೃತ್ತದ ಬಳಿ ಇರುವ ಗ್ರಂಥಾಲಯಕ್ಕೆ ಆವರಣಕ್ಕೆ ಸ್ಥಳಾಂತರ ಗೊಂಡಿರುವುದು ಉತ್ತಮವಾಗಿದೆ, ಈ ಕಚೇರಿ ಕೆಲಸ ಕಾರ್ಯಗಳಿಗೆ ಆಗಮಿಸುವ ಉಪನ್ಯಾಸಕರು, ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಅನುಕೂಲವಾಗಲಿದೆ ಎಂದರು.
ಉಪ ನಿರ್ದೇಶಕ ಡಾ.ಬಾಲಗುರುಮೂರ್ತಿ ಮಾತನಾಡಿ, ಹಳೆಯ ಕಚೇರಿಯ ಕಟ್ಟಡ ಕಿರಿದಾಗಿತ್ತು, ಕೆಲಸ ಕಾರ್ಯಗಳಿಗೆ ಅನುಕೂಲಕರ ವಾತಾವರಣ ಇರಲಿಲ್ಲ, ಸರ್ಕಾರದ ಸಹಾಯದ ಮೇರೆಗೆ ನಮ್ಮ ಉಸ್ತುವಾರಿ ಸಚಿವರು ಹಾಗೂ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಆದೇಶದ ಮೇರೆಗೆ ಗ್ರಂಥಾಲಯ ಹಳೆ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ, ಈ ಕಾರ್ಯಕ್ಕೆ ಶಾಸಕರು, ಜಿಲ್ಲಾಧಿಕಾರಿಗಳು ಹಾಗೂ ಜಿಪಂ ಸಿಇಓ ಅವರ ಸಹಕಾರ ಇದೆ ಎಂದರು.
ಪ.ಪೂ. ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಹಾಗೂ ಜಿಲ್ಲಾ ಕ್ರೀಡಾ ಸಂಘದ ಕಾರ್ಯಾಧ್ಯಕ್ಷ ಟಿ.ಆರ್.ಬಸವರಾಜು ಮಾತನಾಡಿ, ಗ್ರಂಥಾಲಯ ಹಳೆಯ ಕಟ್ಟಡಕ್ಕೆ ಪ.ಪೂ. ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಕಚೇರಿ ಸ್ಥಳಾಂತರ ಗೊಂಡಿರುವುದು ನಮೆಗೆಲ್ಲರೂ ಅನೂಕೂಲವಾಗಿದೆ, ಈ ನೂತನ ಕಚೇರಿ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಹಾಗೂ ಟೌನ್ ಹಾಲ್ ವೃತ್ತಕ್ಕೆ ಸಮೀಪದಲ್ಲಿರುವುದರಿಂದ ವಿದ್ಯಾರ್ಥಿಗಳು, ಉಪನ್ಯಾಸಕರಿಗೆ ಅನುಕೂಲವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಪ.ಪೂ. ಶಿಕ್ಷಣ ಇಲಾಖೆಯ ಪ್ರಾಂಶುಪಾಲರ ಸಂಘದ ಜಿಲ್ಲಾಧ್ಯಕ್ಷ ಪ್ರಭಾಕರ ರೆಡ್ಡಿ, ಕೃಷ್ಣಮೂರ್ತಿ, ಟಿ.ಆರ್.ಬಸವರಾಜು, ಮಹಾಲಿಂಗೇಶ್, ರವಿಕುಮಾರ್, ಮಂಜುನಾಥ್ ಮತ್ತಿತರರು ಹಾಜರಿದ್ದರು.
Comments are closed.