ತುಮಕೂರು: ಖಾಸಗಿ ಸಂಸ್ಥೆಗಳ ಆಕ್ರಮಣ, ಸರ್ಕಾರಗಳ ನಿರಾಸಕ್ತಿ, ದ್ವೇಷ, ಅಸೂಯೆ, ಮದ, ಮತ್ಸರದಿಂದಾಗಿ ಸಹಕಾರ ಸಂಘಗಳಿಗೆ ಗುಣಮಟ್ಟದ ನಾಯಕತ್ವದ ಕೊರತೆ ಇದೆ ಎಂದು ಜಿಲ್ಲಾ ಸಹಕಾರ ಸಂಘಗಳ ನಿವೃತ್ತ ಸಹಾಯಕ ನಿಬಂಧಕ ಟಿ.ಮುರಳಿ ಕೃಷ್ಣಪ್ಪ ಹೇಳಿದರು.
ತುಮಕೂರು ವಿಶ್ವ ವಿದ್ಯಾಲಯ ಸ್ನಾತಕೋತ್ತರ ಅರ್ಥಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗ ತುಮಕೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್.ನಿ. ಇವರ ಸಹಯೋಗದೊಂದಿಗೆ ಆಯೋಜಿಸಿದ್ದ ಸಹಕಾರ ಶಿಕ್ಷಣ ಮತ್ತು ಪ್ರಚಾರ ಮಹತ್ವ ಕುರಿತ ದತ್ತಿ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಹಕಾರ ಕ್ಷೇತ್ರದಲ್ಲಿ ಪ್ರೀತಿ, ವಿಶ್ವಾಸ, ನಂಬಿಕೆ ಮುಖ್ಯ, ಪ್ರಾಮಾಣಿಕತೆ ಹಾಗೂ ಪ್ರಬುದ್ಧತೆ ಇಲ್ಲದಿದ್ದರೆ ಸಹಕಾರ ಕ್ಷೇತ್ರದಲ್ಲಿ ಬೆಳವಣಿಗೆ ಇಲ್ಲ, ಶಿಕ್ಷಣದ ಅಭಾವದಿಂದ ಸಹಕಾರ ಸಂಸ್ಥೆಗಳಲ್ಲೂ ಅಸಮಾನತೆ ತಲೆದೋರಿದೆ, ಸಹಕಾರ ಶಿಕ್ಷಣ, ಶಿಬಿರ, ಪ್ರಚಾರ ಅಭಿವೃದ್ಧಿ ಕೇಂದ್ರಿತ ವಿಷಯವಾಗಿ ಕಾಣದಿರುವುದು ಆತಂಕವಾಗಿದೆ ಎಂದರು.
ಸಹಕಾರ ಚಳವಳಿಯ ಪಿತಾಮಹ ರಾಬರ್ಟ್ ಓವನ್ ಖಾಸಗಿತನ ಮತ್ತು ಬಂಡವಾಳ ಶಾಹಿ ವ್ಯವಸ್ಥೆ ವಿರೋಧಿಸಿದರು, ಕಾರ್ಮಿಕರ ಮೇಲಿನ ದೌರ್ಜನ್ಯ ನಿಯಂತ್ರಿಸಲು ಸರ್ಕಾರಗಳು ಯೋಜನೆ ರೂಪಿಸದಿದ್ದಾಗ ಶೋಷಿತ ವರ್ಗದ ಸುಧಾರಣೆಗಾಗಿ ಸ್ವ-ಇಚ್ಛೆಯಿಂದ ಚಳವಳಿ ನಡೆಸಿದರು, ಒಟ್ಟಾಗಿ ದುಡಿಮೆ, ಸಮಾನ ಹಂಚಿಕೆ ಇವರ ಮೂಲ ಸಿದ್ಧಾಂತವಾಗಿತ್ತು ಎಂದು ಸಹಕಾರ ನಡೆದು ಬಂದ ಇತಿಹಾಸದ ಕುರಿತು ತಿಳಿಸಿದರು.
ತುಮಕೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಂಗಮಪ್ಪ ಮಾತನಾಡಿ, ಸಹಕಾರ ಕ್ಷೇತ್ರ ಹೆಮ್ಮರವಾಗಿ ಬೆಳೆಯಲು ಖಾಸಗಿ ಕಂಪನಿಗಳು, ಸರ್ಕಾರಗಳು ಬಿಡುತ್ತಿಲ್ಲ, ಸ್ವಾತಂತ್ರ್ಯ ನಂತರದಲ್ಲಿ ಶೇ.49 ರಷ್ಟಿದ್ದ ಸಹಕಾರ ಸಂಖ್ಯೆ ಈಗ ಶೇ.11 ಕ್ಕೆ ಇಳಿದಿದೆ, ಯುವಕರು ಮತ್ತು ಮಹಿಳೆಯರು ಸಹಕಾರ ಕ್ಷೇತ್ರದಲ್ಲಿ ತೊಡಗಿಸಿ ಕೊಳ್ಳುವುದರಿಂದ ದೇಶದಲ್ಲಿ ದೊಡ್ಡ ಕ್ರಾಂತಿ ಮಾಡಬಹುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಲಸಚಿವೆ ನಾಹಿದಾ ಜಮ್ ಜಮ್ ಮಾತನಾಡಿ, ಸಂವಿಧಾನಾತ್ಮಕವಾಗಿ, ಶಿಸ್ತು ಬದ್ಧವಾಗಿ ಸಹಕಾರ ಸಂಸ್ಥೆಗಳು ನಡೆಯುತ್ತಿವೆ, ಜನರಲ್ಲಿ ಸಹಕಾರದ ಕುರಿತು ಜಾಗೃತಿ ಇಲ್ಲದಿರುವುದು ಬೇಸರದ ಸಂಗತಿ, ಸಹಕಾರ ಸಂಘಗಳು ವಿದ್ಯಾಭ್ಯಾಸದ ಸಾಲ ಸೇರಿದಂತೆ, ಉದ್ಯೋಗ ಅವಕಾಶ ಒದಗಿಸಿಕೊಡುತ್ತಿವೆ, ರೈತರು ಮಧ್ಯವರ್ತಿಗಳ ಮೋಸದಿಂದ ಹೊರಗುಳಿಯ ಬೇಕಾದರೆ ಸಹಕಾರ ಸಂಘಗಳ ಮೊರೆ ಹೋಗುವುದು ಅಗತ್ಯ ಎಂದರು.
ಸ್ನಾತಕೋತ್ತರ ಅರ್ಥಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗ ಅಧ್ಯಕ್ಷ ಪ್ರೊ.ಜಯಶೀಲ, ಸಹಾಯಕ ಪ್ರಾಧ್ಯಾಪಕ ಡಾ.ಮುನಿರಾಜು.ಎಂ, ಪ್ರಾಧ್ಯಾಪಕ ಪ್ರೊ.ರವೀಂದ್ರ ಕುಮಾರ್.ಬಿ. ಹಾಜರಿದ್ದರು.
Comments are closed.