ಸಿದ್ಧಗಂಗಾ ಮಠದ ಮಕ್ಕಳಿಗೆ ಆರೋಗ್ಯ ತಪಾಸಣೆ

13

Get real time updates directly on you device, subscribe now.


ತುಮಕೂರು: ಸಿದ್ಧಗಂಗಾ ಮಠದ 10 ಸಾವಿರ ಮಕ್ಕಳ ಆರೋಗ್ಯ ಕಾಳಜಿಗಾಗಿ ಸಿದ್ಧಗಂಗಾ ಮಠದಲ್ಲಿ ನಡೆಯುತ್ತಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಶುಕ್ರವಾರಕ್ಕೆ ಸಂಪನ್ನವಾಗಿದ್ದು 9 ಸಾವಿರ ಮಕ್ಕಳಿಗೆ ಆರೋಗ್ಯ ತಪಾಸಣೆ ನಡೆಸಲಾಗಿದೆ ಎಂದು ಸಿದ್ಧಗಂಗಾ ವೈದ್ಯಕೀಯ ಕಾಲೇಜು ತಿಳಿಸಿದೆ.
ಆಗ್ಟ್ 5 ರಿಂದ ಆರಂಭವಾದ ಶಿಬಿರಕ್ಕೆ ಹಿರಿಯ ಕಲಾವಿದ ದೊಡ್ಡಣ್ಣ, ನಿವೃತ್ತ ಸಹಾಯಕ ಔಷಧಿ ನಿಯಂತ್ರಕರಾದ ಗೋಣಿ ಪಕೀರಪ್ಪ ನೇತೃತ್ವದಲ್ಲಿ ಬೆಂಗಳೂರಿನ ಮೈಕ್ರೋಲ್ಯಾಬ್ಸ್, ಬಿಡದಿ ಕೆಮ್ಟ್ ಅಂಡ್ ಡ್ರಗ್ಗಿಸ್ಟ್ ಫೌಂಡೇಷನ್ ಟ್ರಸ್ಟ್, ಗೂಬರ್ಸ್, ಜೈನ್ ಡಿಸ್ಟಿಬ್ಯೂಟರ್ಸ್ ಸೇರಿದಂತೆ 10 ಕ್ಕೂ ಹೆಚ್ಚು ಔಷಧಿ ಸಂಸ್ಥೆಗಳ ಸಹಯೋಗ ನೀಡಿದ್ದು ನಗರದ ಶ್ರೀದೇವಿ ಹಾಗೂ ಸಿದ್ಧಾರ್ಥ ವೈದ್ಯಕೀಯ ಕಾಲೇಜು, ಶಂಕರ್ ಕಣ್ಣಿನ ಆಸ್ಪತ್ರೆ, ದಯಾನಂದ ಸಾಗರ್ ದಂತ ವೈದ್ಯಕೀಯ ಕಾಲೇಜು ಸಹ ಕೈ ಜೋಡಿಸಿದ್ದರು.

ಸಹಜವಾಗಿ ಮಳೆಗಾಲದ ಸಂದರ್ಭದಲ್ಲಿ ಮಕ್ಕಳಿಗೆ ಕಾಡುವ ಜ್ವರ, ಚರ್ಮದ ಸಮಸ್ಯೆ, ದಂತದ ಸಮಸ್ಯೆ, ಕೆಮ್ಮು, ಕಣ್ಣು ಮುಂತಾದ ಆರೋಗ್ಯ ಸಮಸ್ಯೆಗಳಿಗೆ 80 ಕ್ಕೂ ಹೆಚ್ಚು ವೈದ್ಯರು, 150 ಕ್ಕೂ ಹೆಚ್ಚು ವೈದ್ಯಕೀಯ ಸಿಬ್ಬಂದಿ ವಿವಿಧ ವಿಭಾಗದ ಅಡಿಯಲ್ಲಿ ಆರೋಗ್ಯ ತಪಾಸಣೆ ನಡೆಸಿ ವಿವಿಧ ಆರೋಗ್ಯ ಸಮಸ್ಯೆಯುಳ್ಳ 300 ಕ್ಕೂ ಹೆಚ್ಚು ಮಕ್ಕಳಿಗೆ ಹೆಚ್ಚಿನ ಚಿಕಿತ್ಸೆಗೆ ಸಿದ್ಧಗಂಗಾ ವೈದ್ಯಕೀಯ ಕಾಲೇಜಿಗೆ ಸೂಚಿಸಿದ್ದಾರೆ, ಪ್ರಾಥಮಿಕ ಚಿಕಿತ್ಸೆಯನ್ನು ಸ್ಥಳದಲ್ಲಿಯೇ ನೀಡಲಾಗಿದ್ದು ಉಳಿದಂತೆ ಎಲ್ಲಾ ಮಕ್ಕಳಿಗೂ ಜಂತುಹುಳು ಬಾಧೆ ನಿರ್ವಹಣೆಗೆ ಸಿರಪ್ ಹಾಗೂ 20 ಲಕ್ಷ ರೂ. ಮೌಲ್ಯದ ಪ್ರಾಥಮಿಕ ಔಷಧಿ ನೀಡಲಾಗಿದೆ ಎಂದು ತಿಳಿಸಿದೆ.

ಶಿಬಿರ ಕುರಿತು ಮಾತನಾಡಿದ ಸಿದ್ಧಗಂಗಾ ವೈದ್ಯಕೀಯ ಕಾಲೇಜಿನ ಕಾರ್ಯ ನಿರ್ವಾಹಕ ನಿರ್ದೇಶಕ ಡಾ.ಸಚ್ಚಿದಾನಂದ್.ಎಸ್. ಮಾತನಾಡಿ, ಕಾಯಿಲೆಗೂ ಮೊದಲೇ ಚಿಕಿತ್ಸೆ ನೀಡಿದರೆ ಮಕ್ಕಳನ್ನು ಆರೋಗ್ಯವಂತರನ್ನಾಗಿಸಿ ಶೈಕ್ಷಣಿಕ ಜೀವನಕ್ಕೆ ಅಣಿ ಮಾಡಬಹುದು, ಚಿಕಿತ್ಸೆಯ ಜೊತೆಗೆ ಜಾಗೃತಿ ಮೂಡಿಸುವ ಸಲುವಾಗಿ ಕಳೆದ 19 ವರ್ಷಗಳಿಂದ ನಡೆಯುತ್ತಿರುವ ಆರೋಗ್ಯ ತಪಾಸಣೆ ಶಿಬಿರ ಆರೋಗ್ಯ ಕ್ಷೇತ್ರದ ಮೈಲಿಗಲ್ಲು ಎಂದರು.

ಸಿದ್ಧಗಂಗಾ ವೈದ್ಯಕೀಯ ಕಾಲೇಜು ನಿರ್ದೇಶಕ ಡಾ.ಎಸ್.ಪರಮೇಶ್ ಮಾತನಾಡಿ, ಕಳೆದ 19 ವರ್ಷಗಳಿಂದ ನಿರಂತರವಾಗಿ ನಡೆಯುತ್ತಿರುವ ಆರೋಗ್ಯ ಸೇವೆಗೆ ಕಳೆದ 7 ವರ್ಷಗಳಿಂದ ಸಿದ್ಧಗಂಗಾ ಆಸ್ಪತ್ರೆ ಶಿಬಿರದ ನೇತೃತ್ವ ವಹಿಸಿದ್ದು ಇದಲ್ಲದೆ 365 ದಿನವೂ ಮಠದ ಮಕ್ಕಳ ಆರೋಗ್ಯದಲ್ಲಿ ಯಾವುದೇ ಏರುಪೇರಾದರೂ ಕೂಡ ಸಿದ್ಧಗಂಗಾ ಆಸ್ಪತ್ರೆಯಲ್ಲಿ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.

ಸಿದ್ಧಗಂಗಾ ವೈದ್ಯಕೀಯ ಕಾಲೇಜಿನ ಪ್ರಚಾರ್ಯರಾದ ಡಾ.ಶಾಲಿನಿ, ವೈದ್ಯಕೀಯ ಅಧೀಕ್ಷಕ ಡಾ.ನಿರಂಜನಮೂರ್ತಿ, ಸಿದ್ಧಗಂಗಾ ಆಸ್ಪತ್ರೆಯ ಸಿಇಓ ಡಾ.ಸಂಜೀವ್ ಕುಮಾರ್, ಸಿದ್ಧಗಂಗಾ ಆಸ್ಪತ್ರೆ ನರ್ಸಿಂಗ್ ವಿಭಾಗದ ಮುಖ್ಯಸ್ಥ ನಾಗಣ್ಣ, ಮಂಜುನಾಥ್, ಈಶ್ವರ್, ಕಾಂತರಾಜು ಸೇರಿದಂತೆ ವಿವಿಧ ಫಾರ್ಮಾ ಕಂಪನಿಗಳ ಪ್ರತಿನಿಧಿಗಳು ಶಿಬಿರದಲ್ಲಿ ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!