ನಾಗರ ಕಲ್ಲು, ಹುತ್ತಗಳಿಗೆ ಹಾಲೆರೆದ ಭಕ್ತರು

ಶ್ರದ್ಧಾ ಭಕ್ತಿಯಿಂದ ನಾಗರಪಂಚಮಿ ಹಬ್ಬಾಚರಣೆ

16

Get real time updates directly on you device, subscribe now.


ತುಮಕೂರು: ಹಿಂದೂಗಳ ಪವಿತ್ರ ಹಬ್ಬಗಳಲ್ಲಿ ಒಂದಾದ ನಾಗರಪಂಚಮಿ ಹಬ್ಬವನ್ನು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.
ಮಹಿಳೆಯರು, ಪುರುಷರು, ಮಕ್ಕಳು, ವೃದ್ಧರು ಸೇರಿದಂತೆ ಕುಟುಂಬ ಸಮೇತರಾಗಿ ಹುತ್ತಗಳು ಹಾಗೂ ನಾಗರ ಕಲ್ಲು ಇರುವ ಸ್ಥಳಗಳಿಗೆ ತೆರಳಿ ಹೂವುಗಳಿಂದ ಅಲಂಕಾರ ಮಾಡಿ ಹುತ್ತಕ್ಕೆ ಹಾಲೆರೆದು ವಿಶೇಷ ಪೂಜೆ ಸಲ್ಲಿಸುವ ಮೂಲಕ ನಾಗರ ಪಂಚಮಿ ಆಚರಿಸಿ ಭಕ್ತಿ ಸಮರ್ಪಿಸಿದರು.
ನಗರದ ಕೋಡಿ ಬಸವಣ್ಣ ದೇವಾಲಯದ ಹಿಂಭಾಗದಲ್ಲಿರುವ ಅಮಾನಿಕೆರೆ ಏರಿ ಮೇಲಿನ ಹುತ್ತಗಳಿಗೆ, ಬಾರ್ ಲೈನ್ ರಸ್ತೆಯಲ್ಲಿರುವ ಹಳ್ಳಿಗಳ ಸಮೀಪವಿರುವ ನಾಗರಕಲ್ಲುಗಳು ಸೇರಿದಂತೆ ವಿವಿಧ ಬಡಾವಣೆಗಳ ದೇವಾಲಯಗಳ ಬಳಿ ಇರುವ ಹುತ್ತಗಳು ಹಾಗೂ ನಾಗರ ಕಲ್ಲುಗಳಿಗೆ ಭಕ್ತಾದಿಗಳು ಬೆಳಗ್ಗೆಯಿಂದಲೇ ವಿಶೇಷ ಪೂಜೆ ಸಲ್ಲಿಸಿ ಹಾಲು ಮತ್ತು ತನಿಯೆರೆದು ಭಕ್ತಿ ಸಮರ್ಪಿಸುತ್ತಿದ್ದ ದೃಶ್ಯ ಕಂಡು ಬಂದವು.

ಬೆಳಗ್ಗೆಯಿಂದಲೇ ಶ್ರದ್ಧಾ ಭಕ್ತಿಯಿಂದ ಹುತ್ತಗಳಿಗೆ ಪೂಜೆ ಸಲ್ಲಿಸಿ ನಾಗ ದೋಷಗಳಿಂದ ಮುಕ್ತರನ್ನಾಗಿ ಮಾಡುವಂತೆ ಭಕ್ತಾದಿಗಳು ಪ್ರಾರ್ಥಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು, ನಾಗಾರಾಧನೆ ಭಾರತದ ಸಂಸ್ಕೃತಿಯ ಭಾಗವಾಗಿದ್ದು, ನಾಗ ಪಂಚಮಿಯು ನಾಗದೇವರ ಅಸ್ತಿತ್ವವನ್ನು ಸ್ಮರಿಸುವ ಸಲುವಾಗಿ ಆಚರಿಸಲಾಗುವ ಭಾರತದಲ್ಲಿನ ಪ್ರಮುಖ ಹಬ್ಬಗಳಲ್ಲಿ ಒಂದಾಗಿದ್ದು, ಈ ಹಬ್ಬವನ್ನು ಶ್ರಾವಣ ಮಾಸದ ಚಂದ್ರನ- ಹದಿನೈದು ದಿನಗಳ ಐದನೇ ದಿನದಂದು ಆಚರಿಸಲಾಗುತ್ತದೆ, ಶ್ರಾವಣ ಮಾಸದಲ್ಲಿ ಬರುವ ಈ ಹಬ್ಬವನ್ನು ನಗರ ಪ್ರದೇಶ, ಗ್ರಾಮೀಣ ಪ್ರದೇಶಗಳಲ್ಲೂ ಜನರು ನಾಗರ ಕಲ್ಲುಗಳಿಗೆ, ಹುತ್ತಗಳಿಗೆ ವಿಶೇಷ ಪೂಜೆಯೊಂದಿಗೆ ಭಕ್ತಿ ಭಾವದಿಂದ ಆಚರಿಸುವುದು ವಿಶೇಷವಾಗಿದೆ.

Get real time updates directly on you device, subscribe now.

Comments are closed.

error: Content is protected !!