ರೈತನಿಗೆ ಸಿಕ್ತು ನ್ಯಾಯ- ಪ್ರತಿಭಟನೆ ಕ್ಯಾನ್ಸಲ್

28

Get real time updates directly on you device, subscribe now.


ತುಮಕೂರು: ತುರುವೇಕೆರೆ ತಾಲೂಕು ತಾಳೆಕೆರೆ ಗ್ರಾಮದ ಕೃಷ್ಣಪ್ಪ ಎಂಬುವವರ ಭೂಮಿಯನ್ನು ಕರ್ನಾಟಕ ಬ್ಯಾಂಕ್ ನವರು ಸರ್ಫೇಸಿ ಕಾಯ್ದೆ ಅನ್ವಯ ಇ-ಟೆಂಡರ್ ಮೂಲಕ ಹರಾಜು ಹಾಕಿದ್ದ ಭೂಮಿಯ ಟೆಂಡರ್ ರದ್ದು ಪಡಿಸಿ ರೈತರಿಗೆ ಜಮೀನು ನೀಡಲು ಒಪ್ಪಿರುವ ಹಿನ್ನೆಲೆಯಲ್ಲಿ ಆಗಸ್ಟ್ 12 ರಂದು ಕರೆದಿದ್ದ ಪ್ರತಿಭಟನೆ ಹಿಂಪಡೆಯಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಹಾಗೂ ತುಮಕೂರು ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತುಮಕೂರು ನಗರದ ಕರ್ನಾಟಕ ಬ್ಯಾಂಕ್ ನ ವಲಯ ಕಚೇರಿಯಲ್ಲಿ ಶುಕ್ರವಾರ ರಾತ್ರಿ ನಡೆದ ಬ್ಯಾಂಕ್ ನ ಜಿಎಂ ಕೆ.ಸುಬ್ರಾಮ್ ಮತ್ತು ಎಜಿಎಂ ಮಲ್ಲನಗೌಡ ಅವರು ಲೀಡ್ ಬ್ಯಾಂಕ್ ಸಮ್ಮುಖದಲ್ಲಿ ರೈತ ಮುಖಂಡರೊಂದಿಗೆ ನಡೆದ ಸಭೆಯಲ್ಲಿ ರೈತರ ಭೂಮಿ ಹರಾಜು ಹಾಕಿರುವುದು ತಪ್ಪಾಗಿದೆ, ಹಾಗಾಗಿ ಮುಂದಿನ ಎರಡು ತಿಂಗಳ ಒಳಗೆ ರೈತರ ಜಮೀನು ಹರಾಜನ್ನು ರದ್ದುಪಡಿಸಿ, ರೈತರಿಗೆ ವಾಪಸ್ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ, ಇದು ರೈತ ಸಂಘದ ನಿರಂತರ ಹೋರಾಟಕ್ಕೆ ಸಂದ ಜಯವಾಗಿದೆ, ಹಾಗಾಗಿ ಆಗಸ್ಟ್ 12 ರಂದು ತುರುವೇಕೆರೆಯ ಬ್ಯಾಂಕ್ ಕಚೇರಿ ಮುಂದೆ ಕರೆದಿದ್ದ ಪ್ರತಿಭಟನೆ ಹಿಂಪಡೆಯಲಾಗಿದೆ ಎಂದರು.

ಕರ್ನಾಟಕ ಬ್ಯಾಂಕ್ ನ ಜಿಎಂ ಮತ್ತು ಎಜಿಎಂ ಅವರು ರೈತರೊಂದಿಗೆ ನಡೆದ ಸಭೆಯಲ್ಲಿ ರೈತ ಮುಖಂಡರು ಬ್ಯಾಂಕ್ ನ ಕ್ರಮವನ್ನು ತೀವ್ರವಾಗಿ ವಿರೋಧಿಸಿದ್ದು, ಬ್ಯಾಂಕ್ ಅಧಿಕಾರಿಗಳು ಒಟಿಎಸ್ ಗೆ ಅವಕಾಶ ನೀಡದೆ, ಸುಮಾರು 3.50 ಕೋಟಿ ಬೆಲೆ ಬಾಳುವ ಭೂಮಿಯನ್ನು ಕೇವಲ 35.80 ಲಕ್ಷ ರೂ. ಗಳಿಗೆ ಈ ಟೆಂಡರ್ ಮೂಲಕ ಹರಾಜು ನಡೆಸಿರುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಇನ್ನೂ ಮುಂದೆ ಈಗಾಗದಂತೆ ಎಚ್ಚರಿಕೆ ವಹಿಸಬೇಕು, ಅಲ್ಲದೆ ಒಟಿಎಸ್ ಗೆ ಅವಕಾಶ ಕಲ್ಪಿಸಬೇಕು ಎಂಬ ಒತ್ತಾಯ ಮಾಡಿದ್ದು, ಇದಕ್ಕೆ ಬ್ಯಾಂಕ್ ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ, ರೈತ ಕೃಷ್ಣಪ್ಪ ಅವರಿಗೆ ಭೂಮಿ ಹಿಂದಿರುಗಿಸಿದ ನಂತರ ರೈತರು ತೆಗೆದುಕೊಂಡಿರುವ ಸಾಲದ ಅಸಲನ್ನು ಕಟ್ಟಿಸಿಕೊಂಡು ಬಡ್ಡಿ ಮನ್ನಾ ಮಾಡುವಂತೆ ಸಹ ಬ್ಯಾಂಕ್ ನ ಅಧಿಕಾರಿಗಳ ಮುಂದೆ ಬೇಡಿಕೆ ಇಡಲಾಗಿದೆ ಎಂದು ಎ.ಗೋವಿಂದರಾಜು ತಿಳಿಸಿದರು.

ಕೇಂದ್ರ ಸರಕಾರ ಜಾರಿಗೆ ತಂದಿರುವ ಸರ್ಫೇಸಿ ಕಾಯ್ದೆ ರೈತರಿಗೆ ಮಾರಕವಾಗಿದ್ದು, ಈ ಕಾಯ್ದೆಯಿಂದ ರೈತರ ಕೃಷಿ ಭೂಮಿ ಹೊರಗಿಡುವಂತೆ ಈಗಾಗಲೇ ದೇಶದಾದ್ಯಂತ ಪ್ರತಿಭಟನೆ ನಡೆಸಿದ್ದರೂ ಕೇಂದ್ರ ಸರಕಾರ ಸ್ಪಂದಿಸಿಲ್ಲ, ಈಗಲೂ ನಾವು ಸರಕಾರಕ್ಕೆ ಒತ್ತಾಯಿಸುತ್ತಿದ್ದು, ರೈತರಿಗೆ ಜೀವನಾಧಾರವಾಗಿರುವ ಕೃಷಿ ಭೂಮಿಯನ್ನು ಈ ಕಾಯ್ದೆಯಿಂದ ಹೊರಗಿಡಬೇಕು, ಇಲ್ಲದಿದ್ದಲ್ಲಿ ರೈತರು ತೀವ್ರ ಸಂಕಷ್ಟ ಅನುಭವಿಸುವುದರ ಜೊತೆಗೆ ರೈತರು ಮತ್ತು ಬ್ಯಾಂಕ್ ನ ಸಿಬ್ಬಂದಿ ನಡುವೆ ನಿರಂತರ ಸಂಘರ್ಷಕ್ಕೆ ಕಾರಣವಾಗಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ಮುಖಂಡರಾದ ತುರುವೇಕೆರೆ ಶ್ರೀನಿವಾಸಗೌಡ, ಕೆ.ಎನ್.ವೆಂಕಟೇಗೌಡ, ಅಸ್ಲಾಂಪಾಷ, ತಿಮ್ಮೇಗೌಡ, ರಹಮತ್ ವುಲ್ಲಾ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ರವೀಶ್, ತಾಲೂಕು ಅಧ್ಯಕ್ಷ ಚಿಕ್ಕ ಬೋರೇಗೌಡ, ಶೇಖರ್, ಪುರುಷೋತ್ತಮ್, ಲೋಕೇಶ್ ಮತ್ತಿತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!