ನಮ್ಮ ಆದ್ಯತೆ ಕನ್ನಡ ಭಾಷೆಯೇ ಆಗಿರಲಿ

ಭಾಷೆಗೆ ಕೊಡುಗೆ ನೀಡಿದ ಮಹನೀಯರನ್ನು ಸ್ಮರಿಸಿ: ಕೆಎನ್ಆರ್

17

Get real time updates directly on you device, subscribe now.


ಮಧುಗಿರಿ: ಕನ್ನಡ ತಾಯಿ ಭಾಷೆ, ನಮ್ಮ ಆದ್ಯತೆ ಕನ್ನಡ ಭಾಷೆಯೇ ಆಗಿರಬೇಕು, ಇತರ ಬಾಷೆಗಳಿಗೆ ಆದ್ಯತೆ ನೀಡುವುದು ಸಮಂಜಸ ಅಲ್ಲ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿಳಿಸಿದರು.
ಪಟ್ಟಣದ ಕನ್ನಡ ಭವನದಲ್ಲಿರುವ ಕೆ.ಎನ್.ರಾಜಣ್ಣನವರ ಸಭಾಂಗಣದಲ್ಲಿ ಶನಿವಾರ ತಾಲೂಕು ಕಸಾಪ ಮತ್ತು ತಾಲೂಕು ಪದವೀಧರರ ವೇದಿಕೆಯಿಂದ ಹಮ್ಮಿಕೊಂಡಿದ್ದ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆ ಯಲ್ಲಿ ಕನ್ನಡ ಭಾಷೆಯಲ್ಲಿ ಶೇ.100 ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕನ್ನಡ ಭಾಷೆಗೆ ತನ್ನದೇ ಆದ ಇತಿಹಾಸವಿದೆ, ಅತೀ ಹೆಚ್ಚು ಜ್ಞಾನ ಪೀಠ ಪ್ರಶಸ್ತಿ ಪಡೆದ ಕೀರ್ತಿ ಕನ್ನಡ ಭಾಷೆಗಿದೆ, ನಾವೆಲ್ಲರೂ ಕನ್ನಡ ಭಾಷೆಗೆ ಕೊಡುಗೆ ನೀಡಿದ ಮಹನೀಯರನ್ನು ಸ್ಮರಿಸಬೇಕಿದೆ ಎಂದರು.

ನಿವೃತ್ತ ಪ್ರಾಂಶುಪಾಲ ಪ್ರೊ.ಮುನೀಂದ್ರ ಕುಮಾರ್ ಮಾತನಾಡಿ, ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರು ಬಹಳಷ್ಟು ಶ್ರಮ ವಹಿಸಿ ಜಿಲ್ಲೆಯಲ್ಲೇ ಉತೃಷ್ಟ ಕನ್ನಡ ಭವನವನ್ನು ತಾಲೂಕಿನಲ್ಲಿ ನಿರ್ಮಾಣ ಮಾಡಿದ್ದು, ಕನ್ನಡಾಭಿಮಾನಿಗಳಿಗೆ ಬಹಳಷ್ಟು ಅನುಕೂಲ ಮಾಡಿಕೊಟ್ಟಿದ್ದಾರೆ, ಸಿಎಂ ಸಿದ್ದರಾಮಯ್ಯನವರಿಂದ ಕನ್ನಡ ಭವನ ಲೋಕಾರ್ಪಣೆ ಗೊಂಡಿರುವುದು ಹೆಮ್ಮೆಯ ವಿಷಯ ಎಂದರು.

ಐಎಫ್ ಎಸ್ ಅಧಿಕಾರಿ ಶಶಿಕುಮಾರ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಶಿಸ್ತು, ಸಂಯಮ ಅತೀ ಮುಖ್ಯ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನಿರಂತರ ಅಭ್ಯಾಸ ಇರಬೇಕು, ಸ್ಪರ್ಧಾತ್ಮಕ ಪರೀಕ್ಷೆಗಳ ಫಲಿತಾಂಶದ ಬಗ್ಗೆ ಧೈರ್ಯ ಗೆಡಬಾರದು, ಸೋಲೆ ಗೆಲುವಿನ ಮೆಟ್ಟಿಲು ಎಂಬ ಮಾತಿನಂತೆ ನಿರಂತರ ಅಭ್ಯಾಸದಿಂದ ಯಶಸ್ಸು ಗಳಿಸಬಹುದು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಕಸಾಪ ಜಿಲ್ಲಾಧ್ಯಕ್ಷ ಸಿದ್ದಲಿಂಗಯ್ಯ, ಉಪ ವಿಭಾಗಾಧಿಕಾರಿ ಗೋಟೂರು ಶಿವಪ್ಪ, ಬಿಇಓ ಕೆ.ಎನ್.ಹನುಮಂತರಾಯಪ್ಪ, ಡಿವೈಎಸ್ಪಿ ರಾಮಚಂದ್ರಪ್ಪ, ಪುರಸಭೆ ಮಾಜಿ ಅಧ್ಯಕ್ಷ ಶಂಕರನಾರಾಯಣ ಶೆಟ್ಟಿ, ಎಂ.ಕೆ.ನಂಜುಂಡಯ್ಯ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಟಿ.ಸಿದ್ದೇಶ್ವರ, ತಾಲೂಕು ಕಸಾಪ ಅಧ್ಯಕ್ಷೆ ಸಹನಾ ನಾಗೇಶ್, ಪದಾಧಿಕಾರಿಗಳಾದ ಎಂ.ಎಸ್.ಶಂಕರ್ ನಾರಾಯಣ, ರಂಗಧಾಮಯ್ಯ, ಜಗದೀಶ್ ಕುಮಾರ್, ಮೂಡ್ಲ ಗಿರೀಶ್, ರಾಮಚಂದ್ರಪ್ಪ ಪ್ರಸಾದ್, ರುದ್ರಾರಾಧ್ಯ, ಮಲನ ಮೂರ್ತಿ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!