ತುಮಕೂರು: ಪ್ರತಿಯೊಂದು ಮಗುವಿಗೆ ವಿದ್ಯಾರ್ಥಿ ಜೀವನದಲ್ಲೇ ದೇಶಾಭಿಮಾನ ಬೆಳೆಸಿಕೊಳ್ಳುವ ಅವಕಾಶ ಹಾಗೂ ಸೂಕ್ತ ವಾತಾವರಣ ನಿರ್ಮಿಸಿದರೆ ಆ ಮಗುವು ರಾಷ್ಟ್ರ ಪ್ರೇಮ ಬೆಳೆಸಿಕೊಳ್ಳುತ್ತದೆ, ಈ ನಿಟ್ಟಿನಲ್ಲಿ ನಮ್ಮ ವಿದ್ಯಾರ್ಥಿಗಳಿಗೆ ಸೂಕ್ತ ವಾತಾವರಣ ಸೃಷ್ಟಿಸಲು ಸಾಕಷ್ಟು ಪ್ರಯತ್ನ ಮಾಡುತ್ತಿದ್ದೇವೆ ಎಂದು ವಿದ್ಯಾವಾಹಿನಿ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಎನ್.ಬಿ. ಪ್ರದೀಪ್ ಕುಮಾರ್ ತಿಳಿಸಿದರು.
ನಗರದ ಪ್ರತಿಷ್ಠಿತ ವಿದ್ಯಾನಿಧಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾವಾಹಿನಿ ಪದವಿ ಪೂರ್ವ ಕಾಲೇಜು ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಹರ್ ಘರ್ ತಿರಂಗ ಯಾತ್ರೆಗೆ ಚಾಲನೆ ನೀಡಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ದೇಶ ಪ್ರೇಮವಿದ್ದಾಗ ಅವರು ತೊಡಗಿಸಿಕೊಳ್ಳುವ ಪ್ರತಿ ಕೆಲಸವು ಅರ್ಥ ಗರ್ಭಿತವಾಗಿರುತ್ತದೆ, ಭವಿಷ್ಯದ ಪ್ರಜೆಗಳಾಗಿರುವಂತಹ ಇಂದಿನ ಎಲ್ಲಾ ವಿದ್ಯಾರ್ಥಿಗಳು ದೇಶಾಭಿಮಾನವನ್ನು ಅತ್ಯಂತ ಜಾಗರೂಕವಾಗಿ ರೂಢಿಸಿಕೊಂಡು ದೇಶದ ಪ್ರಗತಿಗೆ ಹೆಜ್ಜೆ ಇಡಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಶಾಸಕ ಜ್ಯೋತಿಗಣೇಶ್ ಮಾತನಾಡಿ, ದೇಶದ ಪ್ರಧಾನಿ ಮಂತ್ರಿಯವರ ಕರೆಯಂತೆ ಹರ್ ಘರ್ ತಿರಂಗ ಯಾತ್ರೆಯಲ್ಲಿ ವಿದ್ಯಾರ್ಥಿಗಳ ಉತ್ಸುಕತೆ ನೋಡಿ ಬಹಳ ಮೆಚ್ಚುಗೆ ವ್ಯಕ್ತಪಡಿಸಿ ಪ್ರತಿಯೊಬ್ಬ ವಿದ್ಯಾರ್ಥಿಗಳು ದೇಶಾಭಿಮಾನ ಬೆಳೆಸಿಕೊಂಡು ಇಂದಿನಿಂದಲೇ ರಾಷ್ಟ್ರದ ಸರ್ವತೋಮುಖ ಅಭಿವೃದ್ಧಿಯಲ್ಲಿ ಪಾಲುದಾರರಾಗಬೇಕೆಂದು ಕರೆ ನೀಡಿದರು.
ಹರ್ ಘರ್ ತಿರಂಗ ಯಾತ್ರೆಯಲ್ಲಿ ಸುಮಾರು 2,500 ಸಾವಿರಕ್ಕೂ ಅಧಿಕ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಭಾಗವಹಿಸಿ ಸುಮಾರು 600 ಮಿಟರ್ ತಿರಂಗದೊಂದಿಗೆ ತುಮಕೂರಿನ ಎಸ್ ಪಿ ಕಚೇರಿಯಿಂದ ಆರಂಭವಾದ ಯಾತ್ರೆ ತುಮಕೂರು ಹಾಗೂ ಬೆಂಗಳೂರು ರಸ್ತೆಯಲ್ಲಿ ಪಥ ಸಂಚನದೊಂದಿಗೆ ಜೂನಿಯರ್ ಕಾಲೇಜು ಮೈದಾನ ತಲುಪಿತು.
ಭಾರತಾಂಬೆಯೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಪಥ ಸಂಚಲನ ಅತ್ಯಂತ ಆಕರ್ಷಣೀಯವಾಗಿತ್ತು, ದೇಶದ ಸ್ವಾತಂತ್ರ ಹೋರಾಟಗಾರಾದ ಗಾಂಧೀಜಿ, ಸುಭಾಷ್ ಚಂದ್ರಬೋಸ್, ತಾಂತ್ಯಾ ಟೋಪಿ, ಭಗತ್ ಸಿಂಗ್, ಅಂಬೇಡ್ಕರ್, ನೆಹರು, ಶಿವಾಜಿ ಮಹರಾಜ್, ಝಾನ್ಸಿರಾಣಿ, ರಾಣಿಚೆನ್ನಮ್ಮ, ಅಬ್ಬಕ್ಕ, ಮುಂತಾದವರ ವೇಷ ಭೂಷಣದೊಂದಿಗೆ ವಿದ್ಯಾರ್ಥಿಗಳು ನೋಡುಗರ ಸೆಳೆದರು.
ಕಾರ್ಯಕ್ರಮದಲ್ಲಿ ವಿದ್ಯಾನಿಧಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎಸ್.ಆರ್.ಸಿದ್ದೇಶ್ವರ ಸ್ವಾಮಿ ಹಾಗೂ ವಿದ್ಯಾವಾಹಿನಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ನವೀನ್ ಕುಮಾರ್.ಪಿ. ಹಾಗೂ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಹಾಗೂ ಬೋಧಕ, ಬೋಧಕೇತರ ವರ್ಗ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಲಾಯಿತು.
Comments are closed.