ಮೌಲ್ಯ ರಹಿತ ಬದುಕಿನಿಂದ ಸ್ವಾತಂತ್ರ್ಯ ಕಳೆಯುತ್ತಿದೆ

14

Get real time updates directly on you device, subscribe now.


ತುಮಕೂರು: ದೇಶವು ತಂತ್ರಜ್ಞಾನ, ಆವಿಷ್ಕಾರಗಳಲ್ಲಿ ಅಭಿವೃದ್ಧಿ ಕಾಣುತ್ತಿದೆ, ಆದರೆ ಯುವ ಪೀಳಿಗೆಯ ಮೌಲ್ಯ ರಹಿತ ಬದುಕು, ಕುಸಿದಿರುವ ವ್ಯಕ್ತಿತ್ವ, ದುರ್ನಡತೆಯಿಂದಾಗಿ ಸ್ವಾತಂತ್ರ್ಯ ಕಳೆದು ಕೊಳ್ಳಬಹುದಾದ ಪರಿಸ್ಥಿತಿಗೆ ಭಾರತ ತಲುಪಬಹುದು ಎಂದು ಹಿರಿಯ ಐಎಎಸ್ ಅಧಿಕಾರಿ ಬಿ.ಆರ್.ಜಯರಾಮರಾಜೇ ಅರಸ್ ಆತಂಕ ವ್ಯಕ್ತಪಡಿಸಿದರು.

ತುಮಕೂರು ವಿಶ್ವ ದ್ಯಾಲಯದಲ್ಲಿ ನಡೆದ 78ನೇ ಸ್ವಾತಂತ್ರ್ಯ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಸನ್ನಡತೆಯಿಲ್ಲದ ಈಗಿನ ಯುವ ಪೀಳಿಗೆ ಸಾಮೂಹಿಕ ಅತ್ಯಾಚಾರ, ಕೊಲೆ, ಸುಲಿಗೆಯಂತಹ ವಿಕೃತ ಕೆಲಸಗಳಲ್ಲಿ ತೊಡಗಿ, ಮೊಬೈಲ್ ವ್ಯಸನಿಗಳಾಗಿ ನೈತಿಕವಾಗಿ ಕುಸಿಯುತ್ತಿದ್ದಾರೆ, ಇದರ ಪರಿಣಾಮ ಭಾರತ ವಿಕಾಸವಾದದಲ್ಲಿ ನೆಲಕಚ್ಚಿ ಸ್ವಾತಂತ್ರ್ಯದ ಅಧಃಪತನವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಾವಿರಾರು ವರ್ಷಗಳ ಪರಕೀಯರ ಆಳ್ವಿಕೆಯಲ್ಲಿ ನಲುಗಿ, ಗುಲಾಮಗಿರಿಯನ್ನು, ಸರ್ವಾಧಿಕಾರವನ್ನು ಇಷ್ಟಪಟ್ಟು ಒಪ್ಪಿಕೊಂಡ ದೇಶ ನಮ್ಮದು, ಸ್ವಾತಂತ್ರ್ಯದ ಅರಿವು, ಜವಾಬ್ದಾರಿ ಈಗಿನ ಯುವ ಸಮೂಹದ ಅರಿವಿಗೆ ಎಳ್ಳಷ್ಟು ಬಾರದಿರುವುದು ವಿಪರ್ಯಾಸ ಎಂದರು.

ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಕುಲಪತಿ ಪ್ರೊ. ಎಂ.ವೆಂಕಟೇಶ್ವರಲು, ಈಗಿನ ಯುವಕರ ನಡೆಯಿಂದ ಭಾರತದ ಸ್ವಾತಂತ್ರ್ಯಕ್ಕೆ ಆತಂಕದ ಪರಿಸ್ಥಿತಿ ಉಂಟಾಗಿದೆ, 90 ವರ್ಷಗಳ ಕಾಲ ಸ್ವಾತಂತ್ರ್ಯವೊಂದೇ ಬದುಕಿನ ಉದ್ದೇಶವೆಂದು ಹೋರಾಡಿದ ಮಹನೀಯರ ತ್ಯಾಗ ಬಲಿದಾನಗಳು ವ್ಯರ್ಥವಾಗುತ್ತಿದೆ, ಹಣ ಸಂಪಾದನೆಯೊಂದೆ ಬದುಕಿನ ಸಾಧನೆ, ಗುರಿಯೆಂದು ಜೀವಿಸುತ್ತಿರುವವರು ಭಾರತದ ಸ್ವಾತಂತ್ರ್ಯ ಉಳಿಸಿಕೊಳ್ಳುವಲ್ಲಿ ವಿಫಲರಾಗುವುದು ನಿಶ್ಚಿತ ಎಂದು ತಿಳಿಸಿದರು.

ಕುಲಸಚಿವೆ ನಾಹಿದಾ ಜಮ್ ಜಮ್ ಮಾತನಾಡಿ, ಗುಲಾಮಗಿರಿಯ ನೆನಪುಗಳನ್ನು ಬದಿಗಿಟ್ಟು ಭಾರತ್ ದಿವಸ್ ಎಂದು ಸ್ವಾತಂತ್ರ್ಯ ದಿನವನ್ನು ಆಚರಿಸೋಣ, ರಾಷ್ಟ್ರಗೀತೆಯಲ್ಲಿ ಬರುವ ಹಲವಾರು ಭಾಗಗಳು ಈಗಿನ ಭಾರತದ ಭೂ ಪ್ರದೇಶವಾಗಿಲ್ಲ, ಸ್ತಿಮಿತವಿಲ್ಲದ ಬುದ್ಧಿ, ಮನಸ್ಸು, ಸಮತೋಲನ ಇಲ್ಲದ ದೇಹ ಹೊಂದಿರುವ ಯುವಕರ ಕೈಯಲ್ಲಿ ಭಾರತ ನಲುಗುತ್ತಿದೆ ಎಂದರು.

ಭಾರತೀಯ ಸೇನಾ ಪಡೆಯ ವಿಶ್ರಾಂತ ಯೋಧ ಈರಣ್ಣ. ಎಂ.ಅವರನ್ನು ಗೌರವಿಸಲಾಯಿತು, ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ.ಪ್ರಸನ್ನಕುಮಾರ್ ಕೆ.ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು, ಸಹಪ್ರಾಧ್ಯಾಪಕಿ ಡಾ.ಗೀತಾ ವಸಂತ, ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗದ ನಿರ್ದೇಶಕ ಡಾ.ಎ.ಎಂ. ಮಂಜುನಾಥ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!